ಗುರುವಾರ , ಅಕ್ಟೋಬರ್ 22, 2020
22 °C
ಸ್ಪರ್ಧೆಯಿಂದ ಹಿಂದೆ ಸರಿಯಲ್ಲ:

ಬಿಜೆಪಿ ಮುಖಂಡರ ಬೆಂಬಲ ಇದೆ; ಹಾಲನೂರು ಲೇಪಾಕ್ಷ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನನಗೆ ಬೆಂಬಲ ಸೂಚಿಸಿದ್ದಾರೆ. ಅವರೇ ನನ್ನನ್ನು ಅಭ್ಯರ್ಥಿಯನ್ನಾಗಿಸಿದ್ದಾರೆ. ನಾನೂ ಬಿಜೆಪಿಯವನೇ ಎಂದು ಮತ ಕೇಳುವೆ’ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಹಾಲನೂರು ಲೇಪಾಕ್ಷ ಹೇಳಿದ್ದಾರೆ.

‘ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ನಿವೃತ್ತನಾಗುವುದಿಲ್ಲ. ನನಗೆ ಬಹಳಷ್ಟು ಸಂಘ, ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಬೆಂಬಲ ನೀಡಿವೆ. ನನಗೆ ಬೆಂಬಲ ಸೂಚಿಸಲು ಪೆಪ್ಸಿ ಬಸವರಾಜು ನಾಮಪತ್ರ ವಾಪಸ್ ಪಡೆದಿದ್ದಾರೆ. ಐದು ಜಿಲ್ಲೆಗಳಲ್ಲಿ ನನ್ನದೇ ಆದ ತಂಡ ಪ್ರಚಾರದಲ್ಲಿ ತೊಡಗಿದೆ’ ಎಂದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನಗೆ ಅನ್ಯಾಯವಾಗಿದೆ ಎನ್ನುವುದು ಖುದ್ದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಮನವರಿಕೆಯಾಗಿದೆ. ಈ ಅನ್ಯಾಯದ ಬಗ್ಗೆ ಅವರೇ ಮಾತನಾಡುತ್ತಿದ್ದಾರೆ. ಅನ್ಯಾಯ ಸರಿಪಡಿಸುವ ಭರವಸೆ ನೀಡಿದ್ದಾರೆ’ ಎಂದರು.

‘ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿ ಫಾರಂ ನೀಡಿ ವಾಪಸ್ ಪಡೆಯುವಾಗ ಆಗ್ನೇಯ ಪದವೀಧರ ಕ್ಷೇತ್ರದ ಟಿಕೆಟ್ ನೀಡುವುದಾಗಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಜಿ.ಎಸ್.ಬಸವರಾಜ್ ನನಗೆ ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರಿಸಲಿಲ್ಲ. ನಾನು ಬಿಜೆಪಿ ಬಿಟ್ಟಿಲ್ಲ’ ಎಂದರು.

‘ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಶಿವಯೋಗಿಸ್ವಾಮಿ ಸೇರಿದಂತೆ ಹಲವು ಮುಖಂಡರು ನನ್ನ ಜತೆ ಮಾತನಾಡಿದರು. ಮುಖ್ಯಮಂತ್ರಿ ಬಳಿ ಮಾತುಕತೆಗೆ ಕರೆದರು. ಆದರೆ ನನಗೆ ಆಗಿರುವ ಅನ್ಯಾಯ ಸರಿಪಡಿಸುವುದಾದರೆ ಮಾತ್ರ ಮಾತುಕತೆಗೆ ಬರುತ್ತೇನೆ. ಅಲ್ಲಿ ನಾಮಪತ್ರ ವಾಪಸ್ ತೆಗೆಸುವ ಬಗ್ಗೆ ಮಾತನಾಡಿದರೆ ಖಂಡಿತ ಬರುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ. ಮುಖ್ಯಮಂತ್ರಿ ಜತೆ ನಾನು ಮಾತುಕತೆ ನಡೆಸಿಲ್ಲ’ ಎಂದು ಸ್ಪಷ್ಟಪಡಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು