ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಪ್ರಮಾಣ ಹೆಚ್ಚಳ ಸ್ವೀಪ್ ಫಲಶ್ರುತಿ: ಶುಭಾ ಕಲ್ಯಾಣ್

Last Updated 21 ಏಪ್ರಿಲ್ 2019, 14:58 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಮತದಾನ ಜಾಗೃತಿ ಸಮಿತಿ (ಸ್ವೀಪ್) ಹಾಗೂ ಉಪ ಸಮಿತಿಗಳಿಂದ ಜಿಲ್ಲೆಯಾದ್ಯಂತ ಕೈಗೊಂಡ ಮತದಾನ ಜಾಗೃತಿ ಕ್ರಮಗಳು ಏ.18ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಮತದಾನ ಜಾಗೃತಿ ಸಮಿತಿ ಅಧ್ಯಕ್ಷೆ ಶುಭಾ ಕಲ್ಯಾಣ್ ಹೇಳಿದ್ದಾರೆ.

ಮತದಾನ ಕುರಿತು ಜಿಲ್ಲೆಯಾದ್ಯಂತ ಕರಪತ್ರ ಮತ್ತು ಭಿತ್ತಿಪತ್ರಗಳ ವಿತರಣೆ, ಪ್ರದರ್ಶನ ಫಲಕ ಅಳವಡಿಕೆ (ಹೊಲ್ಡಿಂಗ್ಸ್) ನಿರ್ಮಾಣ, ಉದ್ಯೋಗ ಮೇಳಕ್ಕೆ ಬಂದ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ನಗರ ಪ್ರದೇಶದ ಹೊಸ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಹೊಸ ಮತದಾರರಿಗೆ ನೋಂದಣಿ ಕಾರ್ಯಕ್ಕೆ ನಿಗಾವಹಿಸಲಾಗಿತ್ತು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಾತರಿಪಡಿಸಿಕೊಳ್ಳಲು ಉಚಿತ ಸಹಾಯವಾಣಿ 1950 ಬಗ್ಗೆ ಹೆಚ್ಚಿನ ಅರಿವು ಕಾರ್ಯಕ್ರಮ ನೀಡಿ ಕಾಲೇಜು ಕ್ಯಾಂಪಸ್ ಅಂಬಾಸಿಡರ್ ಮೂಲಕ ಪ್ರಚಾರ ಕೈಗೊಂಡಿದ್ದರಿಂದ ಜಿಲ್ಲೆಯಲ್ಲಿ ಅಂದಾಜು 45 ಸಾವಿರ ಮತದಾರರ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ವಿವರಿಸಿದ್ದಾರೆ.

ಚುನಾವಣೆ ಘೋಷಣೆಯಾದ ಬಳಿಕ ಮತಯಂತ್ರ ಮತ್ತು ಮತಖಾತ್ರಿ (ಇ.ವಿ.ಎಂ ಮತ್ತು ವಿವಿಪ್ಯಾಟ್) ಯಂತ್ರಗಳ ಬಗ್ಗೆ 2,708 ಗ್ರಾಮಗಳಲ್ಲಿ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. ಎಲ್ಲ ಸಫಾಯಿ ಕರ್ಮಚಾರಿ, ಪ್ರಾಂಶುಪಾಲರು, ನಗರದ ವಾಯುವಿಹಾರಿಗಳು, ವಿದ್ಯಾರ್ಥಿಗಳಿಗೆ, ಸಿದ್ಧಉಡುಪು ತಯಾರಿಕಾ ಘಟಕ ಕಾರ್ಮಿಕರಿಗೆ, ಕೈಗಾರಿಕಾ ಪ್ರದೇಶದ ನೌಕರರು, ಕಾರ್ಮಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿವಳಿಕೆ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಸಿ–ವಿಜಿಲ್‌ ಜಾಗೃತಿಗೆ ಗಮನ

ಚುನಾವಣಾ ಸಂದರ್ಭದಲ್ಲಿ ಅಕ್ರಮ ತಡೆಯಲು ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ಅನುಷ್ಠಾನಗೊಳಿಸಿದ ‘ಸಿ–ವಿಜಿಲ್ ’ಕುರಿತು ಜನಜಾಗೃತಿಗೆ ಆಟೊ ರಿಕ್ಷಾ, ಸಾರಿಗೆ ಸಂಸ್ಥೆ ಬಸ್‌ಗಳಿಗೆ ಪೋಸ್ಟರ್ ಅಂಟಿಸಿ ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ ಮಾಡಲಾಯಿತು ಎಂದು ಶುಭಾ ಕಲ್ಯಾಣ್ ಹೇಳಿದ್ದಾರೆ.

ಜಿಲ್ಲೆಯಲ್ಲಿನ ಹಿರಿಯ ನಾಗರಿಕರು, ವಯೋವೃದ್ಧರು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ನೌಕರರು, ಲೈಂಗಿಕ ಅಲ್ಪಸಂಖ್ಯಾತರು, ಅಂಗವಿಕಲರಿಗೆ ತರಬೇತಿ ನೀಡಿ ಮತದಾನ ಮಾಡಲು ಜಾಗೃತಿ ಮೂಡಿಸಲಾಯಿತು. ಅಲ್ಲದೇ ಮತದಾನದ ವೇಳೆ ದೊರಕಿಸಿದ ಸೌಲಭ್ಯಗಳಾದ ಗಾಲಿಖುರ್ಚಿ, ರ್‍ಯಾಂಪ್, ಬೂತಗನ್ನಡಿ, ವಾಹನ ಸೌಕರ್ಯ, ಸ್ವಯಂ ಸೇವಕರ ವ್ಯವಸ್ಥೆ ಕುರಿತು ಹೆಚ್ಚು ಮನವರಿಕೆ ಮಾಡಿಕೊಡಲಾಗಿತ್ತು ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT