ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛಮೇವ ಜಯತೆ–ಜಲಾಮೃತಕ್ಕೆ ಚಾಲನೆ

ನೀರು ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲು ಹೊರಟಿದೆ ಸ್ವಚ್ಛತಾ ರಥ
Last Updated 11 ಜೂನ್ 2019, 16:17 IST
ಅಕ್ಷರ ಗಾತ್ರ

ತುಮಕೂರು: ನೀರಿನ ಮಹತ್ವ ಮತ್ತು ಸ್ವಚ್ಛತೆ ಅಗತ್ಯತೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ‘ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ’ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್‌ ಅವರು ಮಂಗಳವಾರ ಚಾಲನೆ ನೀಡಿದರು.

ಈ ಅರಿವಿನ ಆಂದೋಲನಗಳನ್ನು ಯಶಸ್ವಿಗೊಳಿಸಲು ಎರಡು ಸ್ವಚ್ಛತಾ ರಥಗಳನ್ನು ರೂಪಿಸಲಾಗಿದೆ. ಅದರಲ್ಲಿ ಹಸಿ ಮತ್ತು ಒಣ ಕಸದ ವಿಲೇವಾರಿ, ಶೌಚಾಲಯ ನಿರ್ಮಾಣ ಹಾಗೂ ಬಳಕೆಯ ಕುರಿತ ಸಂದೇಶದ ಫಲಕಗಳು ಇವೆ. ನೈರ್ಮಲ್ಯದ ಕುರಿತು ಸಂದೇಶ ಸಾರುವ ಧ್ವನಿವರ್ಧಕಗಳ ವ್ಯವಸ್ಥೆ ಇದೆ.

ಈ ವಿಶೇಷ ವಾಹನವು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳಲ್ಲಿ ಜಾಥಾ ಮಾಡಲಿದೆ. ಈ ಆಂದೋಲನ ಜುಲೈ 10ಕ್ಕೆ ಮುಕ್ತಾಯಗೊಳ್ಳಲಿದೆ. ಇದರಲ್ಲಿ ಬೀದಿ ನಾಟಕಗಳ ಮೂಲಕವು ಜಾಗೃತಿ ಮೂಡಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ₹ 5 ಲಕ್ಷ ಖರ್ಚು ಮಾಡಲಾಗುತ್ತಿದೆ.

ಲತಾ ರವಿಕುಮಾರ್‌, ಪ್ರತಿ ಮನೆಯಿಂದಲೂ ಅರಿವಿನ ಅಭಿಯಾನ ಆರಂಭವಾಗಬೇಕು. ಗಿಡಗಳನ್ನು ನೆಟ್ಟು ಪರಿಸರ ಬೆಳೆಸಬೇಕು. ಆಗ ನೀರಿನ ಕೊರತೆ ಮತ್ತು ನೈರ್ಮಲ್ಯದ ಸಮಸ್ಯೆ ತಲೆದೊರುವುದಿಲ್ಲ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ವಿದೇಶಗಳಲ್ಲಿ ಇರುವಷ್ಟು ಸ್ವಚ್ಛತೆಯ ಅರಿವು ನಮ್ಮ ದೇಶದಲ್ಲಿ ಇಲ್ಲ. ಹಾಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಪೊರಕೆ ಹಿಡಿದು ಕಸ ಗುಡಿಸಿ ಸ್ವಚ್ಛತೆಗಾಗಿ ಸ್ವಚ್ಛ ಭಾರತ ಎಂಬ ಉತ್ತಮ ಯೋಜನೆಯನ್ನು ರೂಪಿಸಿದ್ದಾರೆ. ನಾವು ಸಾರ್ವಜನಿಕ ಸ್ಥಳಗಳಲ್ಲಿ ಕಸ ಬೀಸಾಡಲೇಬಾರದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಅಧಿಕಾರಿ ಬಾಲರಾಜು, ಜಿಲ್ಲೆಯನ್ನು ಬಯಲು ಶೌಚ ಮುಕ್ತ ಮಾಡಲು ಕುಟುಂಬಕ್ಕೊಂದು ಹಾಗೂ ಸಾಮುದಾಯಿಕ ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಮಾಂಸದ ಅಂಗಡಿಗಳು, ಕಲ್ಯಾಣ ಮಂಟಪ ಹಾಗೂ ಹೊಟೇಲ್‌ಗಳ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಪ್ರತಿ ಗ್ರಾಮವೂ ಮಾಲಿನ್ಯಗೊಳ್ಳುತ್ತಿದೆ. ಹಳ್ಳಿಗಳ ಎಲ್ಲ ಓಣಿಗಳು ಸಹ ಪ್ಲಾಸ್ಟಿಕ್‌ ಮುಕ್ತವಾಗಬೇಕು. ಹಾಗಾಗಿ ತ್ಯಾಜ್ಯ ವಿಲೇವಾರಿ ಮತ್ತು ಶೌಚಾಲಯ ಬಳಕೆಯ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂದರು.

ಆಂದೋಲನದ ಭಾಗವಾಗಿ ಪಂಚಾಯಿತಿ ಆವರಣದಲ್ಲಿ ನೆರಳೆ, ಬೇವಿನ ಗಿಡಗಳನ್ನು ಮತ್ತು ದಾಸವಾಳದ ಸಸಿಯನ್ನು ಜನಪ್ರತಿನಿಧಿಗಳು ನೆಟ್ಟರು. ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಕಾಮಾಕ್ಷಮ್ಮ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

*

‘ಶೇ 0.2ರಷ್ಟು ನೀರು ಮಾತ್ರ ಬಳಕೆಗೆ ಲಭ್ಯ’

ಈ ಭೂಮಿಯ ಮೇಲಿರುವ ಒಟ್ಟು ನೀರಿನಲ್ಲಿ ಶೇ 0.2ರಷ್ಟು ನೀರು ಮಾತ್ರ ಬಳಕೆಗೆ ಲಭ್ಯವಿದೆ. ಅದನ್ನು ಮಿತವಾಗಿ ಬಳಸಬೇಕು ಎಂದು ಪಂಚಾಯಿತಿಯ ಉಪಕಾರ್ಯದರ್ಶಿ(ಅಭಿವೃದ್ಧಿ) ಬಿ.ಕೃಷ್ಣಪ್ಪ ಕಿವಿಮಾತು ಹೇಳಿದರು.

ಭೂಪ್ರದೇಶದ ಶೇ 71 ಭಾಗ ನೀರಿನಿಂದ ಆವರಿಸಿದೆ. ಅದರಲ್ಲಿ ಶೇ 98 ನೀರು ಬಳಕೆಗೆ ಯೋಗ್ಯವಲ್ಲ. ಉಳಿದಿರುವ ಶೇ 2ರಲ್ಲಿಯೇ ಶೇ 98 ಭಾಗ ಮಂಜುಗಡ್ಡೆಯಿಂದ ಕೂಡಿದೆ. ಒಟ್ಟು ನೀರಿನಲ್ಲಿ ಉಳಿದಿರುವ ಶೇ 0.2ರಲ್ಲಿಯೇ ಕೆರೆ, ಹಳ್ಳ, ನದಿಯ ನೀರಿದೆ. ಇದರಲ್ಲಿಯೇ ನಾವು ನೀರಾವರಿಗೆ, ಕುಡಿಯಲು ಎಚ್ಚರಿಕೆಯಿಂದ ಬಳಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.

ವ್ಯಕ್ತಿಯ ಪ್ರತಿದಿನ ಊಟದ ಮೂಲವಾದ ಧಾನ್ಯ, ಹಣ್ಣು, ತರಕಾರಿ ಬೆಳೆಯಲು 3,000 ಲೀಟರ್‌ ನೀರು ಬೇಕು. ಜಲಸಾಕ್ಷರತೆ, ಜಲ ಸಂರಕ್ಷಣೆ, ನೀರಿನ ಸದ್ಭಳಕೆ ಮತ್ತು ಹಸಿರೀಕರಣಕ್ಕಾಗಿ ಜಲಾಮೃತ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT