ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಗಂಗಾಶ್ರೀ ಭೇಟಿ ಮಾಡಿದ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು

Last Updated 14 ಡಿಸೆಂಬರ್ 2018, 17:29 IST
ಅಕ್ಷರ ಗಾತ್ರ

ತುಮಕೂರು: ಚೆನ್ನೈನ ಡಾ.ರೇಲಾ ಇನ್‌ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್‌ನಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಶುಕ್ರವಾರ ವಿಚಾರಿಸಿದರು.

ಸಂಜೆ ಭೇಟಿ ಮಾಡಿದ್ದ ಕುಮಾರಸ್ವಾಮಿ ಅವರು, ‘ಶ್ರೀಗಳು ಶೀಘ್ರವೇ ಗುಣಮುಖರಾಗಿ ಜನತಾ ಜನಾರ್ದನನ ಸೇವೆಯಲ್ಲಿ ತೊಡಗಲಿ. ಶ್ರೀಗಳು ಮಾಡುತ್ತಿರುವ ತ್ರಿವಿಧ ದಾಸೋಹ ಕೈಂಕರ್ಯ ಇಡೀ ದೇಶಕ್ಕೆ ಮಾದರಿಯಾಗಿದ್ದು, ಅವರ ಆಶೀರ್ವಾದ ಎಲ್ಲರ ಮೇಲೂ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದರು.‌

ಮಧ್ಯಾಹ್ನ ಭೇಟಿ ನೀಡಿದ್ದ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಸಿದ್ಧಗಂಗಾಶ್ರೀಗಳ ದರ್ಶನ ಪಡೆದಿದ್ದು , ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡಿದ ಡಾ.ಮಹಮ್ಮದ್ ರೇಲಾ ಅವರಿಗೆ ನಾಡಿನ ಆರೂವರೆ ಕೋಟಿ ಜನರ ಪರವಾಗಿ ಅಭಿನಂದಿಸುತ್ತೇನೆ. ಸ್ವಾಮೀಜಿಯವರು ಬೇಗ ಮಠಕ್ಕೆ ಬರಲಿದ್ದಾರೆ’ ಎಂದು ಹೇಳಿದರು.

ಬೆಳಿಗ್ಗೆ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದ ಎಸ್.ಎಂ.ಕೃಷ್ಣ ಅವರು, ಸ್ವಾಮೀಜಿಯವರು ನಮ್ಮೆಲ್ಲರ ಆಸ್ತಿ. ಆರೋಗ್ಯವಾಗಿದ್ದು, ಸಂತೋಷವಾಯಿತು ಬೇಗ ಮಠಕ್ಕೆ ಬರ್ತಾರೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ. ನಾನೂ ಕೂಡಾ ವಾರ್ಡಿನ ಒಳಗಡೆ ಹೋಗಲಿಲ್ಲ. ದೂರದ ಕಿಟಕಿಯಿಂದಲೇ ನೋಡಿದ್ದೇನೆ. ಸೋಂಕು ತಗಲುವ ಸಾಧ್ಯತೆ ಇರುವುದರಿಂದ ವೈದ್ಯರು ಭಕ್ತರ ಭೇಟಿಗೆ ನಿರ್ಬಂಧಿಸಿದ್ದಾರೆ. ಭಕ್ತರಾದ ನಾವೆಲ್ಲ ಸಹಕರಿಸಬೇಕು’ ಎಂದರು.

ನಡೆದಾಡಿದ ಸ್ವಾಮೀಜಿ
ದಿನದಿಂದ ದಿನಕ್ಕೆ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಶುಕ್ರವಾರ ಎಳನೀರು, ಹಣ್ಣಿನ ರಸ ಮತ್ತು ಇಡ್ಲಿ ಸೇವನೆ ಮಾಡಿದ್ದಾರೆ. ಇಷ್ಟಲಿಂಗ ಪೂಜೆಯನ್ನೂ ನೆರವೇರಿಸಿದ್ದಾರೆ. ವಿಶೇಷ ವಾರ್ಡಿನಲ್ಲಿಯೇ ವೈದ್ಯರ ಸೂಚನೆ ಮೇರೆಗೆಆರೈಕೆದಾರರು ಸ್ವಾಮೀಜಿ ಅವರನ್ನು ನಡೆದಾಡಿಸಿದ್ದಾರೆ.

‘ಅತೀ ಗಣ್ಯರನ್ನು ಹೊರತುಪಡಿಸಿ ಬೇರೆಯವರನ್ನು ಸ್ವಾಮೀಜಿ ಭೇಟಿಗೆ ನಿರ್ಬಂಧಿಸಲಾಗಿದೆ. ಅತೀ ಗಣ್ಯರೊಂದಿಗೆ ತೆರಳುವ ಆಪ್ತರೂ ಮೊಬೈಲ್‌ಗಳನ್ನು ವಾರ್ಡ್‌ಗೆ ತರುವುದನ್ನು ನಿರ್ಬಂಧಿಸಲಾಗಿದೆ’ ಎಂದು ಸ್ವಾಮೀಜಿ ಚಿಕಿತ್ಸೆ ಉಸ್ತುವಾರಿಯಲ್ಲಿರುವ ತುಮಕೂರು ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪರಮೇಶ್ ತಿಳಿಸಿದ್ದಾರೆ.

ಮುಖ್ಯಮಂತ್ರಿಯವರ ಜತೆಯಲ್ಲಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಇದ್ದರು.

ಸ್ವಾಮೀಜಿ ಮತ್ತೆ ತೀವ್ರ ನಿಗಾ ಘಟಕಕ್ಕೆ
ಶಿವಕುಮಾರ ಸ್ವಾಮೀಜಿ ಅವರನ್ನು ಶುಕ್ರವಾರ ಮತ್ತೆ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ.

‘ಬುಧವಾರದರೆಗೂ ಅವರು ತೀವ್ರ ನಿಗಾ ಘಟಕದಲ್ಲಿಯೇ ಇದ್ದ ಸ್ವಾಮೀಜಿ ಅವರನ್ನು ಗುರುವಾರ ವಿಶೇಷ ವಾರ್ಡಿಗೆ ಸ್ಥಳಾಂತರಿಸಲಾಗಿತ್ತು. ವಿಶೇಷ ವಾರ್ಡಿನಲ್ಲಿ ಸೋಂಕು ತಗಲುವ ಸಾಧ್ಯತೆ ಹಾಗೂ ಸ್ವಾಮೀಜಿಯವರಿಗೆ ಹೆಚ್ಚಿನ ಆರೈಕೆ ಅಗತ್ಯದ ಹಿನ್ನೆಲೆಯಲ್ಲಿ ವೈದ್ಯರು ತೀವ್ರ ನಿಗಾ ಘಟಕಕ್ಕೆ ಶುಕ್ರವಾರ ಸ್ಥಳಾಂತರ ಮಾಡಿದ್ದಾರೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಸಿದ್ಧಗಂಗಾಮಠದ ಕಿರಿಯಶ್ರೀಗಳಾದ ಡಾ.ಸಿದ್ಧಲಿಂಗ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT