ಸಿದ್ದಗಂಗಾ ಶ್ರೀಗಳ ದರ್ಶನಕ್ಕೆ ಜನ ಸಾಗರ

ತುಮಕೂರು: ಹಳೇಮಠದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಸ್ವಾಮೀಜಿ ಅವರ ದರ್ಶನಕ್ಕೆ ನಾಡಿನ ಗಣ್ಯರು ಹಾಗೂ ವಿವಿಧ ಕಡೆಯ ಭಕ್ತರು ಭಾನುವಾರ ಮಠಕ್ಕೆ ಭೇಟಿ ನೀಡಿದ್ದರು.
ಭಾನುವಾರ ರಜಾದಿನವಾದ ಕಾರಣ ಭಕ್ತರ ಸಂಖ್ಯೆ ಹೆಚ್ಚಿತ್ತು. ವಿಶೇಷವಾಗಿ ಬೆಂಗಳೂರಿನಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಮಧ್ಯಾಹ್ನ ಸುಡುಬಿಸಿಲಿನಲ್ಲೂ ಸಾಲುಗಟ್ಟಿ ನಿಂತು ಸ್ವಾಮೀಜಿ ದರ್ಶನ ಪಡೆದರು.
ಹಳೇಮಠದ ಹಿಂಭಾಗದ ಕಿಟಕಿ ಮೂಲಕ ಸ್ವಾಮೀಜಿ ಅವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ನೂಕುನುಗ್ಗಲು ಇರಲಿಲ್ಲ. ಪೊಲೀಸ್ ಸಿಬ್ಬಂದಿ ಜೊತೆಗೆ ಮಠದ ಸಿಬ್ಬಂದಿ, ಮಠದ ವಿದ್ಯಾರ್ಥಿಗಳು ಭಕ್ತರು ಸಾಲುಗಟ್ಟಿ ದರ್ಶನ ಪಡೆಯಲು ಸಹಕರಿಸಿದರು.
ಸ್ವಾಮೀಜಿ ಅವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿ ಮತ್ತು ಅವರಿಗೆ ಭಾರತ ರತ್ನ ನೀಡುವಂತೆ ಒತ್ತಾಯಿಸಿ ತುಮಕೂರು ವಿಶ್ವವಿದ್ಯಾನಿಲಯದಿಂದ ಸಿದ್ಧಗಂಗಾಮಠದವರೆಗೆ ಪಾದಯಾತ್ರೆ ಮಾಡಿದರು.
ಯಡಿಯೂರಪ್ಪ ಮನವಿ
‘ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆಯುರ್ವೇದ ವಿಶೇಷ ಔಷಧಿ ಕೊಡುತ್ತಿದ್ದೇವೆ. ಸುಧಾರಣೆ ಆಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ, ಭಕ್ತರು ಆತಂಕಕ್ಕೆ ಒಳಗಾಗಬಾರದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
‘ಯಾವುದೋ ದೈವ ಶಕ್ತಿ ಸ್ವಾಮೀಜಿ ಅವರ ಆರೋಗ್ಯ ಸುಧಾರಣೆ ಮಾಡುತ್ತಿದೆ. ಇದು ನಮ್ಮೆಲ್ಲರಿಗೂ ಸಮಾಧಾನ ತಂದಿದೆ. ಕಳೆದ ಹನ್ನೆರಡು ದಿನಗಳಿಂದ ಆರೋಗ್ಯ ಸ್ಥಿತಿ ಒಂದೇ ರೀತಿಯಲ್ಲಿದೆ’ ಎಂದರು.
ಆರೋಗ್ಯ ಸ್ಥಿರ
‘ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ಅಲ್ಬುಮಿನ್ ಪೋಷಕಾಂಶ ಕಡಿಮೆ ಇದೆ. ಅದರ ಸುಧಾರಣೆಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಭಕ್ತರು ಆತಂಕಪಡುವ ಅಗತ್ಯವಿಲ್ಲ’ ಎಂದು ಸುತ್ತೂರುಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಭಾರತ ರತ್ನ ನೀಡಿ: ‘ಸ್ವಾಮೀಜಿ ಅವರು ಬೇಗ ಗುಣಮುಖರಾಗಲು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರಿಗೆ ಕೇಂದ್ರ ಸರ್ಕಾರವು ಭಾರತ ರತ್ನ ಪುರಸ್ಕಾರ ನೀಡಬೇಕು’ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.
‘ಸಮಾಜಕ್ಕೆ ಇಷ್ಟೊಂದು ಸೇವೆ ಮಾಡಿರುವ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡುವುದರಿಂದ ಭಾರತ ರತ್ನಕ್ಕೇ ಗೌರವ ದೊರೆಯಲಿದೆ’ ಎಂದರು.
‘ಮಠಕ್ಕೆ ನಾನು 60 ವರ್ಷಗಳಿಂದ ಭಕ್ತೆ. ನಾನು ಚಿಕ್ಕವಳಿದ್ದಾಗ ನಮ್ಮ ತಂದೆ ಮಠಕ್ಕೆ ಕರೆದುಕೊಂಡು ಬರುತ್ತಿದ್ದರು. ನಾನು ಮತ್ತು ನಮ್ಮ ಮನೆಯವರು ಸ್ವಾಮೀಜಿ ಪಾದಪೂಜೆ ಮಾಡಿದ್ದೆವು’ ಎಂದು ನುಡಿದರು. ನಟ ಹಾಗೂ ಅವರ ಅಳಿಯ ಅನಿರುದ್ಧ ಜೊತೆಗಿದ್ದರು.
ಬರಹ ಇಷ್ಟವಾಯಿತೆ?
3
0
0
0
0
0 comments
View All