ಪ್ರೀ ಕಾಸ್ಟ್ ತಾಂತ್ರಿಕತೆ; ಸ್ವರ್ಣಗೃಹ ಸಮೂಹ ಮನೆ ನಿರ್ಮಾಣ

7
ಅಣ್ಣೇನಹಳ್ಳಿ ಸಮೀಪ ಬೆಂಗಳೂರಿನ ಫೆಲಿಸಿಟಿ ಅಡೊಬೆ ಕಂಪನಿಯ ವಿನೂತನ ಯೋಜನೆ

ಪ್ರೀ ಕಾಸ್ಟ್ ತಾಂತ್ರಿಕತೆ; ಸ್ವರ್ಣಗೃಹ ಸಮೂಹ ಮನೆ ನಿರ್ಮಾಣ

Published:
Updated:
Deccan Herald

ತುಮಕೂರು: ನೋಡು ನೋಡುತ್ತಿದ್ದಂತೆಯೇ ಕಾಂಕ್ರೀಟ್ ಗೋಡೆಗಳು ಎದ್ದು ನಿಂತವು. ಈ ಗೋಡೆಗಳ ತಲೆ ಹಿಡಿದ ಬೃಹತ್ ಕ್ರೇನ್ ಅನಾಮತ್ತಾಗಿ ತಂದು ನಿಲ್ಲಿಸಿದವು. ಹೀಗೆ ನಾಲ್ಕು ಕಡೆ ಒಂದೊಂದು ಗೋಡೆ ಇಡುತ್ತಿದ್ದಂತೆಯೇ ಮತ್ತೊಂದು ಕ್ರೇನ್ ಸಿದ್ಧ ಚಾವಣಿಯನ್ನು ನಾಲ್ಕೂ ಗೋಡೆಗಳ ಮೇಲೆ ಕ್ರೇನ್ ತಂದಿಟ್ಟಿತು. ಹೀಗೆ ಒಂದೆರಡು ಗಂಟೆ ನಡೆದ ಕಾಮಗಾರಿ ಮುಗಿದಾಗ ‘ಪುಟ್ಟ ಮನೆ’ ಕಣ್ಮುಂದೆ ಸಿದ್ಧವಾಗಿತ್ತು.

ಹೌದು, ಮೊದಲೇ ಅಚ್ಚು ಹಾಕುವ ತಾಂತ್ರಿಕತೆ( ಪ್ರೀ ಕಾಸ್ಟ್ ) ಬಳಸಿ ಬೆಂಗಳೂರಿನ ಫೆಲಿಸಿಟಿ ಅಡೊಬೆ ಕಟ್ಟಡ ನಿರ್ಮಾಣ ಸಂಸ್ಥೆಯು ನಗರದ ಹೊರ ವಲಯದ ಕಾರಾಗೃಹ ರಸ್ತೆಯ ಅಣ್ಣೇನಹಳ್ಳಿಯ ಹತ್ತಿರ ‘ಸ್ವರ್ಣಗೃಹ’ ಯೋಜನೆಯಡಿ ನಿರ್ಮಾಣ ಮಾಡುತ್ತಿರುವ ಮನೆಗಳ ನಿರ್ಮಾಣ ಪ್ರದೇಶದಲ್ಲಿ ಗುರುವಾರ ಕಂಡು ಬಂದ ನೋಟವಿದು.

ಯೋಜನೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರೀನಂದ್ ಪ್ರೇಮಚಂದ್ರನ್,‘ ಕಡಿಮೆ ಆದಾಯ ಹೊಂದಿರುವ ಮತ್ತು ಕೈಗೆಟುಕುವ ದರದಲ್ಲಿ ತಮಗೂ ಒಂದು ಪುಟ್ಟ ಮನೆ ಬೇಕು ಎಂದು ಕನಸು ಹೊಂದಿರುವವರ ಕನಸು ಸಾಕಾರಗೊಳಿಸಲು ನಮ್ಮ ಕಂಪನಿಯು ಸ್ವರ್ಣಗೌರಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡುತ್ತಿದೆ’ ಎಂದು ಹೇಳಿದರು.

‘ಒಂದುವರೆ ಎಕರೆಯಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡ ಒಂದು ಎಕರೆಯಲ್ಲಿ ಒಟ್ಟು 268 ಮನೆ ನಿರ್ಮಿಸಲಾಗುತ್ತಿದೆ. ಮನೆ ಮಾದರಿ ‘1ಬಿಎಚ್‌ಕೆ’ಯಾಗಿದ್ದು,400 ಚದರ ಅಡಿ ವಿಸ್ತೀರ್ಣ ಹೊಂದಿದೆ. ಪ್ರತಿ ಮನೆಗೆ ಬೆಲೆ ₹ 9.95 ಲಕ್ಷ ನಿಗದಿಪಡಿಸಲಾಗಿದೆ.ಈ ಮನೆಗಳು ಅತ್ಯುತ್ತಮವಾದ ಜೀವನ ಶೈಲಿಗೆ ಅನುಗುಣವಾಗಿವೆ’ ಎಂದರು.

ಕಡಿಮೆ ಡೌನ್ ಪೇಮೆಂಟ್ ಮತ್ತು ಮಾಸಿಕ ಕಂತು(ಇಎಂಐ) ಹೊರೆ ಕಡಿಮೆ ಮಾಡಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಘೋಷಿತವಾದ ‘ಎಲ್ಲರಿಗೂ ಮನೆ’ಯಡಿ ಎಂಬ ಆಶಯದೊಂದಿಗೆ ನಿರ್ಮಿಸುತ್ತಿದೆ. ಖರೀದಿದಾರರು ತಮ್ಮ ಭವಿಷ್ಯ ನಿಧಿಯ ಶೇ 90ರಷ್ಟನ್ನು ಮೊದಲು ಪಾವತಿಸಿ (ಡೌನ್ ಪೇಮೆಂಟ್) ಆಗಿ ಉಪಯೋಗಿಸಬಹುದು, ಭವಿಷ್ಯ ನಿಧಿ ಖಾತೆಯನ್ನು ಗೃಹ ಸಾಲದ ಖಾತೆಗೆ ಸೇರಿಸಬಹುದು. ಅಲ್ಲದೇ, ಬ್ಯಾಂಕುಗಳಿಂದಲೂ ಗೃಹ ಸಾಲವನ್ನು ಕಂಪನಿಯು ಒದಗಿಸಿಕೊಡಲಿದೆ’ ಎಂದು ಹೇಳಿದರು.

‘ಪ್ರೀ ಕಾಸ್ಟ್’ ತಾಂತ್ರಿಕತೆ ಆಧರಿಸಿ ಈಗ ಎಲ್ಲೆಡೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇದನ್ನೇ ಅಳವಡಿಸಿಕೊಂಡು ನಮ್ಮ ಕಂಪನಿಯು ಈ ವಿಭಿನ್ನ ಯೋಜನೆ ಕೈಗೆತ್ತಿಕೊಂಡಿದೆ’ ಎಂದು ಹೇಳಿದರು.

ಎಸ್‌ಎಸ್‌ಐಟಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಟಿ.ವಿ.ಮಲ್ಲೇಶ್, ‘ಪ್ರೀ ಕಾಸ್ಟ್’ ತಾಂತ್ರಿಕತೆಯಲ್ಲಿ ಮನೆಗಳ ನಿರ್ಮಾಣ ವಿನೂತನ ಪ್ರಯತ್ನವಾಗಿದೆ. ತಾಂತ್ರಿಕ ಪರಿಶೀಲನೆ ನಡೆಸಿದ್ದು, ಸದೃಢವಾಗಿವೆ. ಸುದೀರ್ಘ ಬಾಳಿಕೆ ವಿಶ್ವಾಸ ಹೊಂದಿವೆ’ ಎಂದು ವಿವರಿಸಿದರು.

ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಪ್ರಣವ್ ಶರ್ಮಾ ಮಾತನಾಡಿ,‘ ಹೊಸ ತಾಂತ್ರಿಕತೆಯಲ್ಲಿ ಗುಣಮಟ್ಟದ, ಕೈಗೆಟುಕುವ ದರ ಮತ್ತು ಉತ್ತಮ ವಿನ್ಯಾಸದೊಂದಿಗೆ ಕಡಿಮೆ ಅವಧಿಯಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಯೋಜನೆ ಇದಾಗಿದೆ’ ಎಂದು ತಿಳಿಸಿದರು.

ಭೂಮಿ ನೀಡಿದ ಉದ್ಯಮಿ ಚಿದಾನಂದ್ ಮಾತನಾಡಿ,‘ ಕಂಪನಿಯ ಯೋಜನೆ ಗಮನ ಸೆಳೆಯಿತು. ಮಧ್ಯಮ ವರ್ಗದವರ ಮನೆಗಳನ್ನು ಹೊಂದುವ ಕನಸು ಸಾಕಾರಗೊಳಿಸುವ ಉದ್ದೇಶ ಹೊಂದಿದೆ. ಇಂತಹ ಯೋಜನೆಗಳು ತುಮಕೂರು ನಗರ ಮತ್ತು ಸುತ್ತಮುತ್ತ ಬರಬೇಕು ಎಂಬ ಆಶಯದೊಂದಿಗೆ ಜಮೀನು ನೀಡಲಾಯಿತು’ ಎಂದು ತಿಳಿಸಿದರು.

ಕಂಪನಿ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್ ಮಾತನಾಡಿ, ‘2019ರ ಫೆಬ್ರುವರಿ ಹೊತ್ತಿಗೆ 268 ಮನೆಗಳ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಕೆ.ಜಿ.ಬಸವಲಿಂಗಪ್ಪ ಗೋಷ್ಠಿಯಲ್ಲಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !