ಶನಿವಾರ, ಜುಲೈ 31, 2021
25 °C
ತಾ.ಪಂ ಅಧ್ಯಕ್ಷೆ ಅರಕೆರೆ ಕವಿತಾ

ತುಮಕೂರು ತಾಲೂಕು ಪಂಚಾಯಿತಿ: ಪರಸ್ಪರ ‘ಕೈ’ಕೊಟ್ಟ ಜೆಡಿಎಸ್– ಬಿಜೆಪಿ ಸದಸ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆ ಮತ್ತೊಮ್ಮೆ ತುಮಕೂರು ಗ್ರಾಮಾಂತರ ಕ್ಷೇತ್ರದ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಯಿತು.

ಜೆಡಿಎಸ್ ಮತ್ತು ಬಿಜೆಪಿ ನಡುವೆ ಅಧಿಕಾರಕ್ಕಾಗಿ ನಾನಾ ‘ಆಟ’ಗಳು ನಡೆದವು. ಅಂತಿಮವಾಗಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನ ಬಿಜೆಪಿಯ ಅರಕೆರೆ ಕ್ಷೇತ್ರದ ಸದಸ್ಯೆ ಕವಿತಾ ಅವರಿಗೆ ಒಲಿಯಿತು.

ತಾಲ್ಲೂಕು ಪಂಚಾಯಿತಿ ಅಧಿಕಾರ ಬಿಜೆಪಿ ಹಿಡಿತದಲ್ಲಿ ಇದೆ. ಆ ಪಕ್ಷದ ಗಂಗಾಂಜನೇಯ ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದರು. ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎನ್ನುವ ವಿಚಾರದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡ ನಿರ್ಧಾರವೇ ಅಂತಿಮವಾಗಿತ್ತು. ಅರಕೆರೆ ಕ್ಷೇತ್ರದ ಕವಿತಾ ಉಮೇದುವಾರಿಕೆ ಸಲ್ಲಿಸಲು ಸೂಚಿಸಿದ್ದರು.

30 ಸದಸ್ಯ ಬಲದ ಪಂಚಾಯಿತಿಯಲ್ಲಿ ಬಿಜೆಪಿ 17, ಜೆಡಿಎಸ್ 12 ಹಾಗೂ ಕಾಂಗ್ರೆಸ್‌ನ ಒಬ್ಬ ಸದಸ್ಯರು ಇದ್ದಾರೆ. ಗುರುವಾರ ನಡೆದ ಚುನಾವಣೆ ವೇಳೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಅರಕೆರೆ ಕ್ಷೇತ್ರದ ಕವಿತಾ ರಮೇಶ್ ಹಾಗೂ ಜೆಡಿಎಸ್‌ನಿಂದ ಎತ್ತೇನಹಳ್ಳಿ ಕ್ಷೇತ್ರದ ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದರು. ಹೀಗೆ ಇಬ್ಬರು ನಾಮಪತ್ರ ಸಲ್ಲಿಸುವ ಮೂಲಕ ರಾಜಕೀಯ ಅಂಗಳವನ್ನು ಕುತೂಹಲಕ್ಕೆ ಕೊಂಡೊಯ್ದರು.

ಜೆಡಿಎಸ್‌ನ ಬಿಟ್ಟಿನಕುರಿಕೆ ಕ್ಷೇತ್ರದ ಸದಸ್ಯ ಮಂಜುನಾಥ್, ಕೆಸ್ತೂರು ಕ್ಷೇತ್ರದ ಸದಸ್ಯೆ ನೇತ್ರಾವತಿ ಗೈರುಹಾಜರಾದರು. ಅಲ್ಲದೆ ಬಿಜೆಪಿಯ ಕೋರ ಕ್ಷೇತ್ರದ ಸದಸ್ಯೆ ಕವಿತಾ ರಮೇಶ್, ಕುರುವೇಲು ಕ್ಷೇತ್ರದ ಸುಧಾ ಜೆಡಿಎಸ್ ಬೆಂಬಲಿಸಿದರು. ಕಾಂಗ್ರೆಸ್ ಸದಸ್ಯರೂ ಜೆಡಿಎಸ್‌ಗೆ ಸಾಥ್ ನೀಡಿದರು. ಕವಿತಾ 15 ಮತ್ತು ಶಿವಕುಮಾರ್ 11 ಮತಗಳನ್ನು ಪಡೆದರು. ಈ ಮೂಲಕ ಮತ್ತೆ ಬಿಜೆಪಿ ಅಧಿಕಾರ ಉಳಿಸಿಕೊಂಡಿತು.

ಕವಿತಾ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಬಿ.ಸುರೇಶ್ ಗೌಡ ಪರ ಘೋಷಣೆ ಕೂಗಿದರು. ಮತ್ತೊಂದು ಕಡೆ ಜೆಡಿಎಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಹಾಲನೂರು ಅನಂತ್ ನೇತೃತ್ವದಲ್ಲಿ ಆ ಪಕ್ಷದ ಕಾರ್ಯಕರ್ತರು ಶಾಸಕ ಡಿ.ಸಿ.ಗೌರಿಶಂಕರ್ ಪರ ಘೋಷಣೆ ಕೂಗಿದರು.

ರಾಜಕೀಯ ಮೇಲಾಟ: ಬಿಜೆಪಿ ಬಹುಮತ ಹೊಂದಿರುವ ಕಾರಣ ನಿರೀಕ್ಷೆಯಂತೆ ಆ ‍ಪಕ್ಷದವರೇ ಅಧ್ಯಕ್ಷರಾಗುವುದು ಖಚಿತವಾಗಿತ್ತು. ಆದರೆ ಶಾಸಕ ಗೌರಿಶಂಕರ್ ಮತ್ತು ಜೆಡಿಎಸ್ ಮುಖಂಡರ ಪ್ರವೇಶದೊಂದಿಗೆ ನಾನಾ ಲೆಕ್ಕಾಚಾರ ಗರಿಗೆದರಿದ್ದವು. ಪಕ್ಷದ ಅಧಿಕೃತ ಅಭ್ಯರ್ಥಿ ಕವಿತಾ ಅವರಿಗೆ ಮತ ನೀಡುವಂತೆ ಸದಸ್ಯರಿಗೆ ಬಿ.ಸುರೇಶ್‌ಗೌಡ ವಿಪ್ ಜಾರಿಮಾಡಿದ್ದರು.

ಜೆಡಿಎಸ್ ಸದಸ್ಯರಾದ ಮಂಜುನಾಥ್, ನೇತ್ರಾವತಿ ಅವರು ಕೊರಟಗೆರೆ ಮಾಜಿ ಶಾಸಕ ಸುಧಾಕರ್ ಲಾಲ್ ಬೆಂಬಲಿಗರು ಎನ್ನಲಾಗುತ್ತಿದೆ. ಕೊನೆಕ್ಷಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ಘಟಿಸುವ ಕಾರಣದಿಂದ ಬಿಜೆಪಿ ಮುಖಂಡರು ಈ ಇಬ್ಬರ ಗೈರು ಹಾಜರಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು