ಶನಿವಾರ, ಮೇ 8, 2021
20 °C
ಮರಳಿ ರಾಜ್ಯಕ್ಕೆ ಬಂದವರು 14 ದಿನಗಳ ಕಾಲ ಕ್ವಾರಂಟೈನ್‌

ನಾಳೆಯಿಂದ ಹೊರರಾಜ್ಯಕ್ಕೆ ಕೊಬ್ಬರಿ, ಹುಣಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಹುಣಸೆ ಹಣ್ಣು ಮತ್ತು ಕೊಬ್ಬರಿಯನ್ನು ಕೆಲವು ನಿಬಂಧನೆಗಳಿಗೆ ಒಳಪಟ್ಟು ಏ.24ರಿಂದ ಹೊರ ರಾಜ್ಯಗಳಿಗೆ ಕಳುಹಿಸಲು ನಿರ್ಧರಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಶಾಸಕರು ಮತ್ತು ಅಧಿಕಾರಿಗಳ ಸಭೆಯಲ್ಲಿ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಹೊರ ರಾಜ್ಯಗಳಿಗೆ ಹುಣಸೆ ಮತ್ತು ಕೊಬ್ಬರಿ ತೆಗೆದುಕೊಂಡು ಹೋಗಿ ವಾಪಸ್ ಬರುವ ಲಾರಿ ಚಾಲಕರನ್ನು 14 ದಿನಗಳವರೆಗೆ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು ಎಂದರು.

ಈಗಾಗಲೇ ಅಕ್ಕಿಗಿರಣಿಗಳು ಹೊರ ರಾಜ್ಯಗಳಿಂದ ಭತ್ತ ತರಿಸುತ್ತಿವೆ. ಅಕ್ಕಿಯನ್ನು ಹೊರರಾಜ್ಯಕ್ಕೆ ಸರಬರಾಜು ಮಾಡುತ್ತಿವೆ. ಇದನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ. ಅದೇ ರೀತಿ ಕೊಬ್ಬರಿ ಹಾಗೂ ಹುಣಸೆ ಹಣ್ಣಿನ ವರ್ತಕರು, ಎಪಿಎಂಸಿಗಳು ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್, ಹೊರ ರಾಜ್ಯಗಳಿಗೆ ತೆರಳುವ ಲಾರಿ ಚಾಲಕರನ್ನು ತಪಾಸಣೆಗೆ ಒಳಪಡಿಸಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಅವರನ್ನು ಕ್ವಾರಂಟೈನ್ ಮಾಡುವ ಷರತ್ತುಗೊಳಪಟ್ಟು ವಹಿವಾಟಿಗೆ ಅನುಮತಿ ನೀಡಲಾಗುತ್ತಿದೆ. ವಾಹನ ಚಾಲಕರು ಮಾಸ್ಕ್, ಸ್ಯಾನಿಟೈಸರ್‌ ಬಳಸಬೇಕು. ಊಟವನ್ನು ಪಾರ್ಸಲ್ ತಂದು ಲಾರಿಯಲ್ಲಿಯೇ ತಿನ್ನಬೇಕು ಎಂದರು.

ಹೊರರಾಜ್ಯಗಳಿಗೆ ಹುಣಸೆ ಹಾಗೂ ಕೊಬ್ಬರಿ ಮಾರಾಟಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಜಿಲ್ಲಾಡಳಿತ ರೂಪಿಸಲಿದೆ. ಎಪಿಎಂಸಿ, ವರ್ತಕರು ಈ ಸೂಚನೆಗಳನ್ನು ಪಾಲಿಸಬೇಕು. ಚಾಲಕ ಆರೋಗ್ಯ ಪರಿಶೀಲಿಸಲು ಎಪಿಎಂಸಿಗೆ ಆರೋಗ್ಯ ಇಲಾಖೆಯಿಂದ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಏ.23ರಿಂದ ಮನೆಮನೆ ಸಮೀಕ್ಷೆ ನಡೆಸಲಾಗುವುದು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ರೋಗಿಗಳ ಮಾಹಿತಿ ಪಡೆಯಲಾಗುವುದು. ಹೊರ ಜಿಲ್ಲೆಯಿಂದ ಬಂದವರ ಮೇಲೆ ನಿಗಾವಹಿಸಲು 53 ಮೊಬೈಲ್ ಸ್ಕ್ವಾಡ್‍ಗಳನ್ನು ರಚಿಸಲಾಗಿದೆ. ಗ್ರಾಮ ಕಾರ್ಯಪಡೆಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿವೆ ಎಂದು ಹೇಳಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ, ಜಿಲ್ಲಾಸ್ಪತ್ರೆಯಲ್ಲಿ ಈ ತಿಂಗಳ ಅಂತ್ಯದೊಳಗೆ ಪ್ರಯೋಗಾಲಯ ಸ್ಥಾಪನೆಯಾಗಲಿದೆ. ಈಗಾಗಲೇ 2 ತಂಡಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿ ತರಬೇತಿ ಕೊಡಿಸಲಾಗಿದೆ ಎಂದರು.

ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಬಿ.ಸಿ.ನಾಗೇಶ್, ಜ್ಯೋತಿಗಣೇಶ್, ವೀರಭದ್ರಯ್ಯ, ಸತ್ಯನಾರಾಯಣ, ಜಯರಾಂ, ರಂಗನಾಥ್, ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಬೆಮೆಲ್ ಕಾಂತರಾಜ್, ಚೌಡರೆಡ್ಡಿ ತೂಪಲ್ಲಿ, ಜಿ.ಪಂ ಸಿಇಒ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಎಪಿಎಂಸಿ ಕಾರ್ಯದರ್ಶಿ ಪುಷ್ಪಾ ಇದ್ದರು.

***

ಚಾಲಕರಿಗೆ ಸಹಾಯವಾಣಿ
ಜಿಲ್ಲೆಯಿಂದ ಹೊರ ಹೋಗುವ ಚಾಲಕರಿಗಾಗಿಯೇ ಸಹಾಯವಾಣಿ ತೆರೆಯಲಾಗುವುದು. ಯಾವುದೇ ರೀತಿಯ ಸಮಸ್ಯೆಯಾದಲ್ಲಿ ಸಂಪರ್ಕಿಸಬಹುದು. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಜಿಲ್ಲಾಡಳಿತ ಸೂಚಿಸಿರುವ ಸ್ಥಳ ಹೊರತುಪಡಿಸಿ ಬೇರೆ ಕಡೆ ಚಾಲಕರು ಸಾಗಬಾರದು ಎಂದು ರಾಕೇಶ್ ಕುಮಾರ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು