ಭಾನುವಾರ, ಜನವರಿ 26, 2020
22 °C

ಪ್ರೀತಿಯೊಂದಿಗೆ ಸಹಕಾರವೂ ನನಗಿರಲಿ : ಟಿ.ಭೂಬಾಲನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಟಿ.ಭೂಬಾಲನ್ ಅವರು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಬುಧವಾರ ಪುನಃ ಅಧಿಕಾರ ವಹಿಸಿಕೊಂಡರು.

ಅವರನ್ನು ಸ್ವಾಗತಿಸಲು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲಿಕೆ ಆವರಣ ತುಂಬಾ ಪಟಾಕಿಗಳನ್ನು ಸಿಡಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು. ಅಧಿಕಾರಿಗೆ ಹಾರ ಹಾಕಿ, ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಬರಮಾಡಿಕೊಂಡರು. ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು, ನೌಕರರು ಸಹ ಗುಂಪು–ಗುಂಪಾಗಿ ಬಂದು ಸನ್ಮಾನ ಮಾಡಿದರು.

ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಭೇಟಿಯಾಗಲು ಬಂದ ಸಿಬ್ಬಂದಿಯ ಕುಶಲೋಪರಿಯನ್ನು ಆಯುಕ್ತರು ವಿಚಾರಿಸಿದರು. 'ನಗರದಲ್ಲಿ ಮಳೆ ಇಲ್ವಾ' ಎಂದು ಕೇಳಿದರು. 'ನಾನು ಹೋದ ಮೇಲೆ ಬದಲಾವಣೆಯೇ ಆಗಿಲ್ಲವಲ್ಲ' ಎಂದಾಗ ‘ಈಗ ನೀವು ಮತ್ತೆ ಬಂದಿದ್ದಿರಲ್ಲ, ಇನ್ನು ಮುಂದೆ ಬದಲಾವಣೆ ಆಗುತ್ತೆ ಸರ್’ ಎಂದು ಪತ್ರಿಕಾ ಛಾಯಾಗ್ರಾಹಕರೊಬ್ಬರು ಚಟಾಕಿ ಹಾರಿಸಿದರು.

‘ಆಶಾ ಮೇಡಮ್ ನಮಗೆ ಬೇಕು’: ಪಾಲಿಕೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದ ಕಾರ್ಯನಿರ್ವಾಹಕ ಎಂಜಿನಿಯರ್ ಆಶಾ ಅವರಿಗೆ ಸ್ಮಾರ್ಟ್ ಸಿಟಿಯ ಹೆಚ್ಚುವರಿ ಹೊಣೆ ಹೊರೆಸಲಾಗಿದೆ. ಇದರಿಂದ ಪಾಲಿಕೆ ವ್ಯಾಪ್ತಿಯ ಮೂಲಸೌಕರ್ಯ ಕಾಮಗಾರಿಗಳು ವೇಗವಾಗಿ ನಡೆಯುತ್ತಿಲ್ಲ. ಸ್ಮಾರ್ಟ್ ಸಿಟಿಯಂಬ ಮನೆ ಉದ್ಧಾರ ಮಾಡಲು ಅವರು ಹೋದರೆ, ಪಾಲಿಕೆ ಎಂಬ ಮನೆ ಹಾಳಾಗುತ್ತದೆ. ಅವರಿಗೆ ಪಾಲಿಕೆಯ ಹೊಣೆಯನ್ನು ಮಾತ್ರ ನೀಡಿ ಎಂದು ಸದಸ್ಯರಾದ ನಯಾಜ್ ಮತ್ತು ಹಿನಾಯತ್ ಅವರು ಆಯುಕ್ತರಿಗೆ ಮನವಿ ಮಾಡಿದರು.

ಭೂಬಾಲನ್ ಸರ್ ಯಾವಾಗ ತುಮಕೂರಿಗೆ ಬರುತ್ತಾರೆ ಎಂದು ತಿಳಿಯಲು ದಿನಾಲು ಪತ್ರಿಕೆ ಓದುತ್ತಿದ್ದೆ. ಅವರು ಮತ್ತೆ ಬಂದಿದ್ದಕ್ಕೆ ತುಂಬಾ ಖುಷಿಯಾಗಿದೆ ಎಂದು ವಿಜಯನಗರದಿಂದ ಬೆಳಿಗ್ಗೆಯೇ ಬಂದು ಕಾದು, ಆಯುಕ್ತರನ್ನು ಭೇಟಿಯಾದ ನಿವೃತ್ತ ಅಧ್ಯಾಪಕ ಬಸವರಾಜು ತಿಳಿಸಿದರು.

ಪಾಲಿಕೆಯ ಸದಸ್ಯರಾದ ಗಿರಿಜಾ ಧನಿಯಾ ಕುಮಾರ್‌, ಮಲ್ಲಿಕಾರ್ಜುನ್‌, ಮಹೇಶ್‌ ಅವರು ಆಯುಕ್ತರ ಕಚೇರಿಗೆ ಬಂದು ಶುಭಕೋರಿ, ಸ್ವಾಗತಿಸಿದರು. ಈ ಸಂಭ್ರಮದಲ್ಲಿ ಮೇಯರ್‌ ಲಲಿತಾ ರವೀಶ್‌ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

‘ಉತ್ತಮ ಆಡಳಿತವೇ ನನ್ನ ಗುರಿ’

ಟಿ.ಭೂಬಾಲನ್ ಅವರು 'ಪ್ರಜಾವಾಣಿ'ಯೊಂದಿಗೆ ಮಾತನಾಡುತ್ತ, ತುಮಕೂರು ಜನರ ಪ್ರೀತಿ, ವಿಶ್ವಾಸ ಕಂಡು ನನಗೆ ತುಂಬಾ ಖುಷಿಯಾಗುತ್ತಿದೆ. ಇನ್ನೂ ಚನ್ನಾಗಿ ಕೆಲಸ ಮಾಡಬೇಕು ಅನಿಸುತ್ತಿದೆ ಎಂದರು.

ಈ ಮೊದಲು ಪಾಲಿಕೆಯಲ್ಲಿ ಇದ್ದಾಗ ಕಸದ ಸಮಸ್ಯೆ ನಿವಾರಣೆ, ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕಠಿಣ ಕ್ರಮ ಕೈಗೊಂಡಿದ್ದೆ. ಎರಡು ದಿನ ನಗರದಲ್ಲಿ ರೌಂಡ್ಸ್ ಹೋಗಿ ಆ ಕ್ರಮಗಳ ಅನುಷ್ಠಾನದ ಕುರಿತು ತಿಳಿದುಕೊಳ್ಳುತ್ತೇನೆ. ನಮ್ಮ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಹೆಚ್ಚಿದ್ದರೆ ಕ್ರಮ ವಹಿಸುತ್ತೇನೆ. ತೆರಿಗೆ ಸಂಗ್ರಹ, ಕಸದ ನಿರ್ವಹಣೆ ಸೇರಿದಂತೆ ನಗರ ಅಭಿವೃದ್ಧಿಯ ಪ್ರತಿ ಕೆಲಸಕ್ಕೂ ಜನರ ಸಹಕಾರ ನನಗೆ ಬೇಕು ಎಂದು ತಿಳಿಸಿದರು.

ಗೋಕಾಕ್ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ನಿಯೋಜಿಸಲು ಸರ್ಕಾರ ನನ್ನನ್ನು ಬೆಳಗಾವಿಯ ಮಲಪ್ರಭಾ-ಘಟಪ್ರಭಾ ಯೋಜನೆಯ ವಿಶೇಷ ಜಿಲ್ಲಾಧಿಕಾರಿ(ಭೂ ಸ್ವಾಧೀನ) ಆಗಿ ವರ್ಗಾವಣೆ ಮಾಡಿತ್ತು. ಮತ್ತೆ ತುಮಕೂರಿಗೆ ಬರುತ್ತೇನೆ ಎಂಬ ವಿಶ್ವಾಸ ಇತ್ತು. ಈ ನಗರಕ್ಕೆ ಬರುವ ಇಚ್ಛೆಯೂ ಇತ್ತು ಎಂದು ಮನದ ಮಾತು ಬಿಚ್ಚಿಟ್ಟರು.

ಸರ್ಕಾರದ ನಿರ್ಧಾರದಿಂದ ಪುನಃ ಬಂದಿದ್ದೇನೆ. ಉತ್ತಮ ಆಡಳಿತಕ್ಕಾಗಿ ನಾನು ಎಲ್ಲರಿಂದ ಸಹಕಾರ ಮಾತ್ರ ನಿರೀಕ್ಷಿಸುತ್ತೇನೆ. ಉತ್ತಮ ಆಡಳಿತವೇ ನನ್ನ ಗುರಿ ಎಂದು ಅವರು ಹೇಳಿದರು.

'ನೀವಿಲ್ಲದೆ ಬೋರ್ ಆಗಿತ್ತು ಸರ್'

ಭೂಬಾಲನ್ ಅವರಿಗೆ ಶುಭಕೋರಲು ಬಂದಿದ್ದ ಉಪಮೇಯರ್ ರೂಪಶ್ರೀ ಶೆಟ್ಟಳಯ್ಯ ಅವರು, ನೀವಿಲ್ಲದೆ ನಮಗೆಲ್ಲಾ ಬೋರ್ ಆಗಿತ್ತು ಸರ್. ನಿಮ್ಮೊಂದಿಗೆ ಖುಷಿಯೂ ಪಾಲಿಕೆಗೆ ಬಂದಿದೆ ಎಂದಾಗ ಕಚೇರಿಯಲ್ಲಿದ್ದವರು ನಗೆ ಬೀರಿದರು.

ಸ್ವಾಗತಿಸಲು ಬಂದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸರ್ ನೀವು ತುಮಕೂರಿನಲ್ಲಿ ಮನೆ ಮಾತಾಗಿದ್ದಿರಾ, ನಿಮ್ಮ ಸೇವೆ ಹಿಂದಿನಂತೆ ದಕ್ಷವಾಗಿಯೇ ಇರಲಿ. ಈ ಹಿಂದೆ ಆಡಳಿತ ನಡೆಸಿದ ರೋಹಿಣಿ ಸಿಂಧೂರಿ, ಮಣಿವಣ್ಣನ್ ಅವರಂತೆ ನೀವೂ ಪಾಲಿಕೆ ಆಸ್ತಿಗಳನ್ನು ರಕ್ಷಣೆ ಮಾಡಬೇಕು. ಒತ್ತುವರಿಗಳನ್ನು ತಡೆಯಬೇಕು, ತೆರವು ಮಾಡಬೇಕು ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು