ಸೋಮವಾರ, ಮೇ 16, 2022
27 °C
ತತ್ಕಾಲ್ ಯೋಜನೆಯಲ್ಲಿ ವಿಳಂಬ ದೋರಣೆ: ಪ್ರತಿಭಟನೆ

ಕುಣಿಗಲ್: ಟಿ.ಸಿ ವಿತರಣೆ ಅವ್ಯವಸ್ಥೆ; ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ತತ್ಕಾಲ್ ಯೋಜನೆಯಲ್ಲಿ ರೈತರಿಗೆ ವಿದ್ಯುತ್ ಪರಿವರ್ತಕ ವಿತರಿಸಿ, ಶೀಘ್ರ ಸಂಪರ್ಕ ನೀಡುವಲ್ಲಿ ಬೆಸ್ಕಾಂ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಪದಾಧಿಕಾರಿಗಳು ಕಾರ್ಯಪಾಲಕ ಎಂಜಿನಿಯರ್‌ ವಿಭಾಗೀಯ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ತಾಲ್ಲೂಕಿನಲ್ಲಿ 200 ರೈತರು ತತ್ಕಾಲ ಯೋಜನೆಯಡಿ ವಿದ್ಯುತ್ ಪರಿವರ್ತಕ ಪಡೆಯಲು ₹26 ಸಾವಿರ ಕಟ್ಟಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಂಬ ಮತ್ತು ತಂತಿ ಅಳವಡಿಸಿಕೊಂಡು ವರ್ಷದಿಂದ ಕಾಯುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ವಿದ್ಯುತ್ ಪರಿವರ್ತಕ ವಿತರಿಸಿಲ್ಲ. ಶೀಘ್ರ ವಿದ್ಯುತ್ ಸಂಪರ್ಕ ನೀಡದ ಕಾರಣ ಪರದಾಡುವಂತಾಗಿದೆ ಎಂದರು.

ಯಾವುದೇ ಯೋಜನೆಯ ವಿದ್ಯುತ್ ಪರಿವರ್ತಕ ಸುಟ್ಟು ಹೋದರೆ, ಬದಲಿಸಲು ಮತ್ತು ಅಳವಡಿಸಲು ಕೆಳಹಂತದ ಸಿಬ್ಬಂದಿಯಿಂದ ರೈತರ ಶೋಷಣೆಯಾಗುತ್ತಿದೆ. ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಕಳಪೆ ಗುಣಮಟ್ಟದ ವಿದ್ಯುತ್ ಪರಿವರ್ತಕ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ತಂತಿ ಮಾರ್ಗ ಬದಲಿಸುವ ವಿಚಾರದಲ್ಲೂ ರೈತರಿಂದ ಸುಲಿಗೆ ಮಾಡುತ್ತಿದ್ದಾರೆ ಎಂದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪುರುಷೋತ್ತಮ್ ಮಾತನಾಡಿ, ವಿದ್ಯುತ್ ಪರಿವರ್ತಕ ವಿತರಣೆಯಲ್ಲಿ ಸಮಸ್ಯೆ ಇದ್ದರೂ, ರೈತರ ಬೇಡಿಕೆಗೆ ಅನುಗುಣವಾಗಿ ವಿತರಿಸಲಾಗುತ್ತಿದೆ. ಏ‍ಪ್ರಿಲ್‌ನಿಂದ 137 ವಿದ್ಯುತ್ ಪರಿವರ್ತಕಗಳಿಗೆ ಬೇಡಿಕೆ ಬಂದಿದ್ದು, 82 ವಿತರಿಸಲಾಗಿದೆ ಎಂದು ಭರವಸೆ ನೀಡಿದರು.

ಮಾತಿನ ಚಕಮಕಿ, ಪೊಲೀಸರ ಪ್ರವೇಶ: ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಬೆಸ್ಕಾಂ ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ರೈತರು, ಸಿಬ್ಬಂದಿ ದೂರವಾಣಿ ಕರೆ ಮಾಡಿದಾಗ ಅವಾಚ್ಯ ಶಬ್ದ ಪ್ರಯೋಗ ಮಾಡುತ್ತಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಎಂಜನಿಯರ್ ಪುರುಷೋತ್ತಮ್ ರೈತರ ಆರೋಪವನ್ನು ಅಲ್ಲಗಳೆದಾಗ ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಕೈಮಿಲಾಯಿಸುವ ಹಂತಕ್ಕೆ ಹೋದಾಗ ಪೊಲೀಸರು ಪ್ರವೇಶಿಸಿ ನಿಯಂತ್ರಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಕುಮಾರ್, ಪದಾಧಿಕಾರಿಗಳಾದ ವೆಂಕಟೇಶ್, ಲಕ್ಷ್ಮಣ, ಕುಮಾರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.