ಮಂಗಳವಾರ, ಸೆಪ್ಟೆಂಬರ್ 17, 2019
24 °C

ಸಾಂಸ್ಕೃತಿಕ ಕಲೆ ಕಲಿಸಿದ ಗುರುವಿಗೆ ಪ್ರಶಸ್ತಿಯ ಗರಿ

Published:
Updated:
Prajavani

ತುಮಕೂರು: ಕಲಿಕೆಗೆ ಪೂರಕ ವಾತಾವರಣವನ್ನು ರೂಪಿಸಿ, ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಆಸಕ್ತಿ ಮೂಡಿಸಿ, ಶಾಲಾ ಫಲಿತಾಂಶ ಸುಧಾರಿಸುವಲ್ಲಿಯೂ ಶ್ರಮಿಸುತ್ತಿರುವ ತುಮಕೂರು ತಾಲ್ಲೂಕು ಗೂಳೇ ಹರವಿ ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಎಚ್‌.ಆರ್‌.ರೇಣುಕಯ್ಯ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ಸಮಾಜ ವಿಜ್ಞಾನ ಶಿಕ್ಷಕರಾಗಿರುವ ರೇಣುಕಯ್ಯ ಅವರ ಮಾರ್ಗದರ್ಶನದಲ್ಲಿ ಜನಪದ ಕಲೆಗಳನ್ನು ಕರಗತ ಮಾಡಿಕೊಂಡ ಮಕ್ಕಳು, ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ 10 ವರ್ಷಗಳಿಂದ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದಾರೆ. ಇವರು ಹೇಳಿಕೊಡುವ ಕೋಲಾಟ, ವೀರಗಾಸೆ, ಗೀಗಿ ಪದ, ಕರಪಾಲಮೇಳ ಕಲಿಯಲು ಮಕ್ಕಳು ಆಸಕ್ತಿ ತೋರುತ್ತಿದ್ದಾರೆ.

1.5 ಎಕರೆ ಆವರಣದಲ್ಲಿ ಹಸಿರು ಪರಿಸರ ನಿರ್ಮಾಣ ಮಾಡಲು ಸಹ ರೇಣುಕಯ್ಯ ಬೆವರು ಹರಿಸಿದ್ದಾರೆ. ಶಾಲಾಂಗಣದಲ್ಲಿ ಅಶೋಕ, ಹೊಂಗೆ, ಹೂವರಸಿ, ಬಸವನ ಪಾದ, ಸಿಲ್ವರ್‌ ಓಕ್‌, ಮಹಾಗನಿ ಸೇರಿದಂತೆ 400ಕ್ಕೂ ಹೆಚ್ಚು ಗಿಡ–ಮರಗಳನ್ನು ಬೆಳೆಸಿದ್ದಾರೆ. ಇದಕ್ಕೆ ಸಹದ್ಯೋಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹ ಕೈ ಜೋಡಿಸಿದ್ದಾರೆ.

ಪೋಷಕರ ಮನವೊಲಿಸಿ ಶಾಲೆ ಬಿಟ್ಟ 15 ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಸಾಫ್ಟವೇರ್‌ ಕಂಪನಿಯ ಸಹಕಾರದೊಂದಿಗೆ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸುವ ಕೈಂಕರ್ಯವನ್ನು ಮಾಡುತ್ತಿದ್ದಾರೆ. ಉತ್ತಮ ಬೋಧನೆಯಿಂದಾಗಿ ಪ್ರತಿವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಶಾಲಾ ಫಲಿತಾಂಶ ಶೇ 97 ದಾಟುತ್ತಿದೆ.

ಶಿಕ್ಷಕರಾಗಿ 32 ವರ್ಷಗಳ ಸೇವೆ ಸಲ್ಲಿಸಿರುವ ರೇಣುಕಯ್ಯ ಅವರಿಗೆ 58ರ ಇಳಿವಯಸ್ಸು. ಆದರೂ, ಸದಾ ಉತ್ಸಾಹದಿಂದ ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸುತ್ತಿದ್ದಾರೆ.

Post Comments (+)