ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಶಿಕ್ಷಕರ ಆಗ್ರಹ

Last Updated 26 ಅಕ್ಟೋಬರ್ 2021, 3:56 IST
ಅಕ್ಷರ ಗಾತ್ರ

ತುಮಕೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಸೋಮವಾರ ಡಿಡಿಪಿಐ ಸಿ. ನಂಜಯ್ಯ ಮೂಲಕ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು.

ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ, ಮುಖ್ಯ ಶಿಕ್ಷಕರಿಗೆ ನಿಯಮಿತ ವೇತನ ಬಡ್ತಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ, ದೈಹಿಕ ಶಿಕ್ಷಣ ಶಿಕ್ಷಕರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು.

ಈ ಹಿಂದೆ ಬೆಳಿಗ್ಗೆ 10.30ರಿಂದ ಸಂಜೆ 5.15ರ ವರೆಗೆ ಶಾಲಾ ಸಮಯ ನಿಗದಿಪಡಿಸಲಾಗಿತ್ತು. ಮಕ್ಕಳ ಹಿತದೃಷ್ಟಿಯಿಂದ ಮತ್ತೆ ಇದೇ ಸಮಯ ಪಾಲನೆ ಮಾಡಬೇಕು ಎಂದು ಶಿಕ್ಷಕರು ಒತ್ತಾಯಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪರಶಿವಮೂರ್ತಿ, ‘ಈಗಾಗಲೇ ತರಬೇತಿ ಬಹಿಷ್ಕಾರ ಮಾಡಿದ್ದೇವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಆರ್‌ಪಿ ಮೂಲಕ ತರಬೇತಿಯಲ್ಲಿ ಪಾಲ್ಗೊಳ್ಳುವಂತೆ ಶಿಕ್ಷಕರ ಮೇಲೆ ಒತ್ತಡ ತರುತ್ತಿದ್ದಾರೆ. ಅಸಹಕಾರ ಚಳವಳಿ ಮಾಡಿ, ಮಕ್ಕಳಿಗೆ ಅನ್ಯಾಯವಾಗದಂತೆ ಪಾಠ ಮಾಡುತ್ತಿದ್ದೇವೆ. ಹಾಗಾಗಿ ಯಾವುದೇ ಒತ್ತಡ ತಂದರೂ ಶಿಕ್ಷಕರು ತರಬೇತಿಗೆ ಹಾಜರಾಗುವುದಿಲ್ಲ’ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಬೆಳಗಾವಿ ಹಾಗೂ ತುಮಕೂರಿನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯ ತೀರ್ಮಾನದಂತೆ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು. ಈ ಬಗ್ಗೆ ಮೂರು ತಿಂಗಳ ಹಿಂದೆಯೇ ಒತ್ತಾಯಿಸಲಾಗಿತ್ತು. ಆದರೆ, ಈವರೆಗೂ ಸರ್ಕಾರ ನಿರ್ಧಾರ ಕೈಗೊಂಡಿಲ್ಲ. ಬೇಡಿಕೆಗಳನ್ನು ಈಡೇರಿಸದೆ ಇರುವುದರಿಂದ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಬೇಕಾಯಿತು ಎಂದು ಸ್ಪಷ್ಟಪಡಿಸಿದರು.

ಅ. 4ರಿಂದ ತರಬೇತಿ ಬಹಿಷ್ಕರಿಸಿದ್ದು, ಅ. 21ರಿಂದ ಕಪ್ಪುಪಟ್ಟಿ ಧರಿಸಿ ಶೈಕ್ಷಣಿಕ ಚಟುವಟಿಕೆ ನಿರ್ವಹಿಸುತ್ತಿದ್ದೇವೆ. ಸರ್ಕಾರ ಸ್ಪಂದಿಸದಿದ್ದರೆ ಅಸಹಕಾರ ಚಳವಳಿ ಮುಂದುವರಿಯಲಿದೆ. ಅ. 30ರಿಂದ ನ. 10ರವರೆಗೆ ಮಧ್ಯಾಹ್ನದ ಬಿಸಿಯೂಟದ ಮಾಹಿತಿಯನ್ನು ಅಪ್‍ಡೇಟ್ ಮಾಡುವುದಿಲ್ಲ. ನ. 11ರಿಂದ 18ರವರೆಗೆ ಸ್ಯಾಟ್ಸ್ ಮಾಹಿತಿಯನ್ನು ಅಪ್‍ಡೇಟ್ ಮಾಡದಿರಲು ನಿರ್ಧರಿಸಲಾಗಿದೆ. ನಂತರ ಸಂಘದ ಪ್ರತಿನಿಧಿಗಳು, ಪದಾಧಿಕಾರಿಗಳು, ನಿರ್ದೇಶಕರು ರಾಜ್ಯಮಟ್ಟದಲ್ಲಿ ರ‍್ಯಾಲಿ ನಡೆಸಿ, ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶಿಕ್ಷಕರ ಸಂಘದ ರಾಜ್ಯ ವಿಭಾಗೀಯ ಮಹಿಳಾ ಉಪಾಧ್ಯಕ್ಷೆ ಮಂಜುಳಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಚಿಕ್ಕಣ್ಣ, ಜಿಲ್ಲಾ ಉಪಾಧ್ಯಕ್ಷರಾದ ಕೆ.ಜಿ. ಕಾಳೇಗೌಡ, ಯಶೋದ, ಖಜಾಂಚಿ ಷಣ್ಮುಖಪ್ಪ, ಸಹ ಕಾರ್ಯದರ್ಶಿಗಳಾದ ಎಚ್.ಕೆ. ಭೈರಯ್ಯ, ಬಿ.ಆರ್. ಅನ್ನಪೂರ್ಣಮ್ಮ, ಸಂಘಟನಾ ಕಾರ್ಯದರ್ಶಿಗಳಾದ ಆರ್. ಮಂಜಣ್ಣ, ಡಿ. ಜಯಲಕ್ಷ್ಮಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT