ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದನಾಮಕ್ಕಾಗಿ ಶಿಕ್ಷಕರ ಪ್ರತಿಭಟನೆ

ಧರಣಿಗೆ ಬಂದ ನೂರಾರು ಶಿಕ್ಷಕರು : ಶಾಲೆಗಳಿಗೆ ಅಘೋಷಿತ ರಜೆ
Last Updated 9 ಜುಲೈ 2019, 10:52 IST
ಅಕ್ಷರ ಗಾತ್ರ

ತುಮಕೂರು: ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿ, ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ವೇತನ ಶ್ರೇಣಿ ನಿಗದಿ ಪಡಿಸಬೇಕೆಂದು ಆಗ್ರಹಿಸಿ ಜಿಲ್ಲೆಯಲ್ಲಿನ ನೂರಾರು ಶಿಕ್ಷಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ಶಿಕ್ಷಕರೆಲ್ಲರೂ ಸಾಂದರ್ಭಿಕ ರಜೆ ಹಾಕಿ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿದ್ದರಿಂದ ಎಲ್ಲ ಶಾಲೆಗಳ ಬಾಗಿಲುಗಳು ಬಂದ್‌ ಆಗಿದ್ದವು. ಮಕ್ಕಳಿಗೆಲ್ಲ ಅಘೋಷಿತ ಶಾಲಾರಜೆ ಘೋಷಣೆಯಾಗಿತ್ತು.

ಪ್ರತಿಭಟನೆಯ ನೇತೃತ್ವವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ವಹಿಸಿದ್ದರು. ನೂರಾರು ಸಂಖ್ಯೆಯಲ್ಲಿ ನಗರದ ಬಾಲಭವನ ಆವರಣದಲ್ಲಿ ಸೇರಿದ್ದ ಶಿಕ್ಷಕರು ತಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರ ಆದಷ್ಟು ಬೇಗ ಈಡೇರಿಸಬೇಕು ಎಂದು ಆಗ್ರಹಿಸಿದರು.

ಪದವಿ ಗಳಿಸದಿದ್ದರೂ ಬೋಧನಾ ಅನುಭವದಿಂದ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು 6ರಿಂದ 7ನೇ ತರಗತಿಯವರೆಗೂ ಉತ್ತಮವಾಗಿ ಪಾಠ ಮಾಡುತ್ತಿದ್ದಾರೆ. ಕೆಲವು ಕಡೆ 8ನೇ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಪದವೀಧರ ಶಿಕ್ಷಕರೆಂಬ ಪದನಾಮ ಕೊಡಬೇಕು. ಬಡ್ತಿಗಾಗಿ ಪರೀಕ್ಷೆ ಬರೆಯುವ ಪದ್ಧತಿಯನ್ನು ರದ್ದು ಮಾಡಬೇಕು. ಸೇವಾ ಜೇಷ್ಠತೆ ಅನುಸಾರ ವೇತನ ಬಡ್ತಿ ನೀಡಬೇಕು. 6ನೇ ವೇತನ ಆಯೋಗದ ಅಂತಿಮ ವರದಿ ಅನ್ವಯ ಬಡ್ತಿಗಳನ್ನು ನೀಡಬೇಕೆಂಬ ಬೇಡಿಕೆಗಳನ್ನು ಪ್ರತಿಭಟನಾ ನಿರತ ಶಿಕ್ಷಕರು ಒಕ್ಕೊರಲಿನಿಂದ ಅನುಮೋದಿಸಿದರು.

ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಷಣ್ಮುಖಪ್ಪ ಪ್ರಮುಖ ಬೇಡಿಕೆಗಳನ್ನು ಮಂಡಿಸುವುದರ ಜತೆಗೆ, ಶಿಕ್ಷಕರಿಗೆ ಬೋಧನೆಗಿಂತ ಶಾಲಾ ನಿರ್ವಹಣೆಯ ಇತರೇ ಕೆಲಸಗಳನ್ನು ಹೆಚ್ಚು ನೀಡಲಾಗುತ್ತಿದೆ. ಅವುಗಳನ್ನು ತಗ್ಗಿಸಬೇಕು. ಪಾಠ–ಪ್ರವಚನ ಮಾಡಲು ಹೆಚ್ಚು ಸಮಯ ಸಿಗುವಂತೆ ಮಾಡಬೇಕು.ವರ್ಗಾವಣೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು ಎಂದರು.

ಪ್ರತಿಭಟನಾ ಧರಣಿಯ ಬಳಿಕ ಶಿಕ್ಷಕರೆಲ್ಲರೂ ಜಿಲ್ಲಾಧಿಕಾರಿಯ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು. ಅದನ್ನು ಮುಖ್ಯಮಂತ್ರಿಗೆ ರವಾನಿಸುವಂತೆ ಕೋರಿದರು.

ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯದ ಎಲ್ಲ ಶಿಕ್ಷಕರು ಸೆಪ್ಟೆಂಬರ್‌ 5ರ ಶಿಕ್ಷಕರ ದಿನದಂದು ಶಾಲೆಗಳನ್ನೆಲ್ಲ ಬಂದ್‌ ಮಾಡಿ, ವಿಧಾನಸೌಧ ಚಲೋ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

*

ಪ್ರಮುಖ ಬೇಡಿಕೆಗಳು

* ವೃಂದ ಮತ್ತು ನೇಮಕಾತಿ ನಿಯಮಗಳನ್ನು ಬದಲಾಯಿಸಬೇಕು.

* ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೇ ಪಿಂಚಣಿ ಯೋಜನೆಯನ್ನೆ ಮುಂದುವರೆಸಬೇಕು.

* ಈಗ ನಡೆಯುತ್ತಿರುವ ವರ್ಗಾವಣೆ ಪ್ರಕ್ರಿಯೆಯನ್ನು ಕಾಲಾಮಿತಿಯಲ್ಲಿ ಪೂರ್ಣಗೊಳಿಸಿ, ಅಕ್ಟೋಬರ್‌ನಲ್ಲಿ ಕೇವಲ ಕೋರಿಕೆ ವರ್ಗಾವಣೆ ಮಾಡಬೇಕು.

* ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು.

* ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಪ್ರಕ್ರಿಯೆಯ ನ್ಯೂನತೆ ಸರಿಪಡಿಸಬೇಕು, ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ ಗುರುತಿಸುವಾಗ ಮುಖ್ಯ ಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕರನ್ನು ಪರಿಗಣಿಸಬಾರದು.

* 6ನೇ ವೇತನ ಆಯೋಗದ ಅಂತಿಮ ವರದಿ ಅನ್ವಯ ಮುಖ್ಯ ಶಿಕ್ಷಕರಿಗೆ 10, 15, 20, 25, 30 ವರ್ಷದ ಕಾಲಮಿತಿ ಬಡ್ತಿಗಳನ್ನು ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪನಿರ್ದೇಶಕರ ಹುದ್ದೆಯವರೆಗೂ ಬಡ್ತಿ ನೀಡಬೇಕು.

* ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT