ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರೋರಾತ್ರಿ ದೇಗುಲ ತೆರವು; ವಿರೋಧ

Last Updated 20 ಜೂನ್ 2021, 16:23 IST
ಅಕ್ಷರ ಗಾತ್ರ

ತುಮಕೂರು: ನಗರದ ಬಾಳನಕಟ್ಟೆ ಮಾರುಕಟ್ಟೆ ಪ್ರದೇಶದ ಸಿದ್ದಿವಿನಾಯಕ ಮಾರುಕಟ್ಟೆ ಪ್ರಾಂಗಣದಲ್ಲಿದ್ದ ಗಣೇಶ ದೇಗುಲ ತೆರವು ಮಾಡಲು ವಿರೋಧ ವ್ಯಕ್ತವಾಗಿದೆ. ರಾತ್ರೋರಾತ್ರಿ ತೆರವು ಮಾಡಿ, ದೇವರ ಮೂರ್ತಿಗಳನ್ನು ಭಗ್ನ ಗೊಳಿಸಲಾಗಿದೆ ಎಂದು ಬಜರಂಗ ದಳ ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಶನಿವಾರ ರಾತ್ರಿ ದೇಗುಲ ತೆರವು ಮಾಡುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಬಜರಂಗದಳ ಸಂಘಟನೆ ಮುಖಂಡರು ಸ್ಥಳಕ್ಕೆ ಬಂದು ತೆರವು ಮಾಡದಂತೆ ವಿರೋಧ ವ್ಯಕ್ತಪಡಿಸಿ ತಡೆದಿದ್ದಾರೆ. ಇದಕ್ಕೆ ಮಣಿದ ಸಿಬ್ಬಂದಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.

‘ದೇಗುಲವನ್ನು ಏಕಾಏಕಿ ರಾತ್ರಿ ಸಮಯದಲ್ಲಿ ತೆರವುಗೊಳಿಸುವ ಪ್ರಯತ್ನ ನಡೆದಿದೆ. ದೇವರ ಮೂರ್ತಿಗಳನ್ನು ಸ್ಥಳಾಂತರಿಸಲು ಯಾವುದೇ ವಿಧಿವಿಧಾನ ಅನುಸರಿಸಿಲ್ಲ. ಮೂರ್ತಿಗಳನ್ನು ಭಗ್ನಗೊಳಿಸಲಾಗಿದೆ. ಇದರಿಂದ ಸಮಾಜದವರಿಗೆ ಸಾಕಷ್ಟು ನೋವಾಗಿದೆ’ ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಹಿನ್ನೆಲೆ: ದಶಕದ ಹಿಂದೆ ಬಾಳನಕಟ್ಟೆ ಮೈದಾನದಲ್ಲಿ ತರಕಾರಿ ಮಾರುಕಟ್ಟೆ ಇತ್ತು. ಮಾರುಕಟ್ಟೆಯನ್ನು ಅಂತರಸನಹಳ್ಳಿ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. ಆ ನಂತರ ಈ ಪ್ರದೇಶ ಖಾಲಿ ಉಳಿದಿತ್ತು. ಈ ಪ್ರದೇಶ ತಮಗೆ ಸೇರಬೇಕು ಎಂದು ಎಪಿಎಂಸಿ ಆಡಳಿತ ಮಂಡಳಿ ವಾದಿಸಿತ್ತು. ಮಹಾನಗರ ಪಾಲಿಕೆಯವರು ಇದು ನಮಗೆ ಸೇರಬೇಕು ಎಂದು ಪಟ್ಟುಹಿಡಿದಿದ್ದರು. ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಕೊನೆಗೆ ಸರ್ಕಾರದ ಮಟ್ಟದಲ್ಲಿ ನಿರ್ಧರಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

ಅದರಂತೆ ಈ ಸ್ಥಳದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಬರುವ ಆದಾಯವನ್ನು ಪಾಲಿಕೆ ಹಾಗೂ ಎಪಿಎಂಸಿಗೆ ಶೇ 50ರ ಅನುಪಾತದಲ್ಲಿ ಹಂಚಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಅಲ್ಲಿ ಕಟ್ಟಡ ನಿರ್ಮಿಸುವ ಸಲುವಾಗಿ ದೇಗುಲ ತೆರವು ಮಾಡಲು ಮುಂದಾದಾಗ ಕೆಲವರು ಅಡ್ಡಿಪಡಿಸಿದ್ದು, ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು ಎಂದು ಪಾಲಿಕೆ ಆಯುಕ್ತೆ ರೇಣುಕಾ ಸ್ಪಷ್ಟಪಡಿಸಿದರು.

ಸರ್ಕಾರದ ನಿರ್ಧಾರದಂತೆ ತೆರವು ಕಾರ್ಯಾಚರಣೆ ಮಾಡಲಾಯಿತು. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂದು ಅವರು ಹೇಳಿದರು.

‘ತೆರವು ಕಾರ್ಯಾಚರಣೆ ಮಾಡುವ ಮುನ್ನ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ದೇವರ ವಿಗ್ರಹಗಳನ್ನು ಭಗ್ನ ಮಾಡಲಾಗಿದೆ. ವಿಧಿವಿಧಾನ ಅನುಸರಿಸಿಲ್ಲ. ರಾತ್ರಿ ವೇಳೆ ತೆರವಿಗೆ ಮುಂದಾಗಿರುವುದನ್ನು ಗಮನಿಸಿದರೆ ನಮ್ಮ ಸಮಾಜಕ್ಕೆ ರಕ್ಷಣೆ ಇಲ್ಲವಾಗಿದೆ. ಈ ಎಲ್ಲಾ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಶಿವಣ್ಣ ತಿಳಿಸಿದರು.

ಆರೋಪ: ದೇವಸ್ಥಾನವನ್ನು ತರಾತುರಿ
ಯಲ್ಲಿ ತೆರವುಗೊಳಿಸಿರುವ ಪಾಲಿಕೆ
ಅಧಿಕಾರಿಗಳು ಕರ್ತವ್ಯ ಲೋಪವೆಸಗಿ
ದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಫೀಕ್ ಅಹ್ಮದ್ ಆರೋಪಿಸಿದ್ದಾರೆ.

ಯಾವುದೇ ಮಾಹಿತಿ ನೀಡದೆ ತೆರವುಗೊಳಿಸಿರುವ ಮಹಾನಗರ ಪಾಲಿಕೆ ನಡೆಯನ್ನು ಪ್ರಶ್ನಿಸಿದ್ದಾರೆ. ಸೂಕ್ತ ಕ್ರಮಗಳನ್ನು ಕೈಗೊಳ್ಳದೆ, ನಿಯಮಗಳನ್ನು ಗಾಳಿಗೆ ತೂರಿ ಸ್ಥಳೀಯರಿಗೆ ಯಾವುದೇ ಮಾಹಿತಿ
ನೀಡದೆ ರಾತ್ರೋ ರಾತ್ರಿ ತೆರವುಗೊಳಿಸಿ
ರುವುದು ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT