ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರು ದುಶ್ಚಟಗಳಿಂದ ದೂರವಿರಿ: ಕುಮಾರ ಚಂದ್ರಶೇಖರನಾಥ ಸ್ವಾಮೀಜಿ

ಪ್ರತಿಭಾ ಪುರಸ್ಕಾರ, ಕೆಂಪೇಗೌಡ ಜಯಂತ್ಯುತ್ಸವ, ಸನ್ಮಾನ ಸಮಾರಂಭ
Last Updated 14 ಅಕ್ಟೋಬರ್ 2018, 15:50 IST
ಅಕ್ಷರ ಗಾತ್ರ

ತುಮಕೂರು: ಒಕ್ಕಲಿಗ ಸಮುದಾಯವದವರು ದುಶ್ಚಟಗಳಿಂದ ದೂರವಿರಬೇಕು. ಮಕ್ಕಳನ್ನು ಹತೋಟಿಯಲ್ಲಿಟ್ಟು ಬೆಳೆಸಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

ನಗರದ ಚಿಲುಮೆ ಸಮುದಾಯದ ಭವನದಲ್ಲಿ ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಆಯೋಜಿಸಿದ್ದ 10ನೇ ವರ್ಷದ ಪ್ರತಿಭಾ ಪುರಸ್ಕಾರ, ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ಒಳ್ಳೆಯದನ್ನು ಅನುಸರಿಸಿ ಕೆಟ್ಟದನ್ನು ಕೈ ಬಿಡಬೇಕು. ಕುಲದೈವ ಪೂಜಿಸುವ ಮೂಲಕ ಸಂಸ್ಕಾರ ಮತ್ತು ನೆಮ್ಮದಿಯ ಜೀವನ ರೂಪಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಸಮುದಾಯವನ್ನು ಬೆಳೆಸುವ ಜವಾಬ್ದಾರಿ ಹೊರಬೇಕು ಎಂದು ಸಲಹೆ ನೀಡಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ‘ಇಂದಿನ ಮಕ್ಕಳಲ್ಲಿ ಪ್ರತಿಭೆ ಹೊರತರಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ಪ್ರತಿಭೆ ನಶಿಸುತ್ತಿದೆ. ಪೋಷಕರು ಎಚ್ಚೆತ್ತುಕೊಳ್ಳಬೇಕು’ ಎಂದು ನುಡಿದರು.

ಕಾಂಗ್ರೆಸ್ ವಕ್ತಾರ ಮುರುಳೀಧರ ಹಾಲಪ್ಪ, ‘ಕುಂಚಿಟಿಗ ಒಕ್ಕಲಿಗರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಸಂಬಂಧ ವರದಿ ಸಿದ್ದಗೊಂಡಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಗುವುದು. ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ‌‌ಎಲ್ಲ ಸಂಸದರು ವರದಿ ಅನುಮೋದನೆಗೆ ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ಒಕ್ಕಲಿಗ ಸಮುದಾಯದ ಪ್ರತಿಭಾನ್ವಿತ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅವಕಾಶವಾಗುವಂತೆ ಕೃಷಿಕ ಫೌಂಡೇಷನ್ ಅಡಿಯಲ್ಲಿ ತರಬೇತಿ ನೀಡುತ್ತಿದ್ದು, ಇದನ್ನು ಸಮುದಾಯದ ಮಕ್ಕಳು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆದಿಚುಂಚನಗಿರಿ ತುಮಕೂರು ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಅಧ್ಯಕ್ಷ ಶಂಕರ್, ಆಡಿಟರ್ ಯಲಚವಾಡಿ ನಾಗರಾಜು, ಹನುಮಂತರಾಯಪ್ಪ, ಸುಜಾತ ನಂಜೇಗೌಡ, ಗಿರೀಶ್, ಕೆಂಪರಾಜು, ಸತೀಶ್, ಸಂಘದ ಉಪಾಧ್ಯಕ್ಷ ಶಿವಣ್ಣ, ರುಕ್ಮಣಿ, ಕಾರ್ಯದರ್ಶಿ ಅಶ್ವತ್ಥಕುಮಾರ್, ಸಹ ಕಾರ್ಯದರ್ಶಿ ಶಿವರಾಮಯ್ಯ ಹಾಗೂ ನಿರ್ದೇಶಕ ಎನ್.ನರಸಿಂಹ ರಾಜು ಇದ್ದರು.

ನಗರಪಾಲಿಕೆ ನೂತನ ಸದಸ್ಯರಾದ ಧರಣೇಂದ್ರಕುಮಾರ್, ಜೆ.ಕುಮಾರ್, ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪುರಸ್ಕೃತ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ರಾಷ್ಟ್ರೀಯ ದೇಹದಾಢ್ಯ ಕ್ರೀಡಾಪಟು ಬಿ.ಶ್ರೀಹರಿ, ಬೆಳ್ಳಿ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು.

2017–18ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT