ಬೆಂಗಳೂರು: ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಕಳ್ಳತನ ಹಾಗೂ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಮಂಜೇಶ್ ಎಂಬಾತನನ್ನು ನಗರದಲ್ಲಿ ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ, ಪೊಲೀಸರು ಬಂಧಿಸಿದ್ದಾರೆ.
‘ಆರೋಪಿ, 32 ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಬೆಂಗಳೂರಿನಲ್ಲಿ ಇರುವ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ₹10 ಸಾವಿರ ನಗದು ಹಾಗೂ ₹6.75 ಲಕ್ಷ ಮೌಲ್ಯದ 135 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಸದಾಶಿವನಗರದ ಟ್ರಾಫಿಕ್ ಜಂಕ್ಷನ್ ಬಳಿ ಆರೋಪಿ ಮಂಜೇಶ್ ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆಗ ಕೊರಟಗೆರೆ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ದೊಡ್ಡಲಿಂಗಯ್ಯ ಅವರು ಧೈರ್ಯ ತೋರಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆರೋಪಿಯನ್ನು ಕಾನ್‌ಸ್ಟೆಬಲ್ ಸೆರೆ ಹಿಡಿಯುತ್ತಿರುವ ದೃಶ್ಯವುಳ್ಳ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೊರಟಗೆರೆ ಮನೆಯೊಂದರಲ್ಲಿ ಆರೋಪಿ ಕಳ್ಳತನ ಮಾಡಿದ್ದ. ಆರೋಪಿ ಪತ್ತೆಗೆ ಸಿಸಿ ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗಿತ್ತು. ಆರೋಪಿ ಕಳ್ಳತನ ಮಾಡಿ, ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ಬಂದಿರುವುದು ಪೊಲೀಸರಿಗೆ ಗೊತ್ತಾಗಿತ್ತು. ಬೆಂಗಳೂರಿನ ಹಲವು ಕಡೆ ಪರಿಶೀಲನೆ ನಡೆಸಿದ್ದರು.
ಸದಾಶಿವನಗರದ ಸಿಗ್ನಲ್ ಬಳಿ ಮಂಗಳವಾರ ಆರೋಪಿಯನ್ನು ಬೈಕ್ ಸಮೇತ ಕಾನ್‌ಸ್ಟೆಬಲ್ ಅಡ್ಡಗಟ್ಟಿದ್ದರು. ಆದರೆ, ಆತ ಬೈಕ್ ನಿಲ್ಲಿಸದೆ ಪರಾರಿ ಆಗಲು ಯತ್ನಿಸಿದ್ದ. ಕಾನ್‌ಸ್ಟೆಬಲ್ ಅನ್ನು ಎಳೆದೊಯ್ದರೂ ಬಿಡದೆ ಸೆರೆ ಹಿಡಿದರು. ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಸದಾಶಿವನಗರ ಸಂಚಾರ ಠಾಣಾ ಸಹಾಯಕ ಸಬ್ ಇನ್‌ಸ್ಪೆಕ್ಟರ್ ನಾಗಮ್ಮ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಶ್ರೀಧರ್ ಹಾಗೂ ಸಾರ್ವಜನಿಕರು ನೆರವು ನೀಡಿದರು. ಆದರೂ, ತಪ್ಪಿಸಿಕೊಳ್ಳಲು ಮುಂದಾದ ವೇಳೆ ಸಾರ್ವಜನಿಕರು ಆರೋಪಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದರು ಎಂದು ಮೂಲಗಳು ಹೇಳಿವೆ.
ಆರೋಪಿ ಕಳ್ಳತನದ ಜತೆಗೆ ವೃದ್ಧಾಪ್ಯ ವೇತನ ಕೊಡಿಸುವುದಾಗಿ ಹೇಳಿ ಜನರಿಂದ ಆಧಾರ್ ಕಾರ್ಡ್, ಪಡಿತರ ಚೀಟಿ ಪಡೆದುಕೊಳ್ಳುತ್ತಿದ್ದ. ಅಲ್ಲದೇ ತನ್ನದೇ ಬೈಕ್‌ನಲ್ಲಿ ಫಲಾನುಭವಿಗಳನ್ನು ಕರೆದೊಯ್ಯುತ್ತಿದ್ದ. ಬ್ಯಾಂಕ್ ಅಥವಾ ಸರ್ಕಾರಿ ಕಚೇರಿಯ ಬಳಿ ಫಲಾನುಭವಿಗಳನ್ನು ಇಳಿಸಿ ಮೈಮೇಲೆ ಚಿನ್ನಾಭರಣ ನೋಡಿದರೆ ಅಧಿಕಾರಿಗಳು ಸೌಲಭ್ಯ ಮಂಜೂರು ಮಾಡುವುದಿಲ್ಲ ಎಂದು ಹೇಳಿ ನಂಬಿಸುತ್ತಿದ್ದ. ಅವರಿಂದ ಚಿನ್ನಾಭರಣ ಪಡೆದು ಪರಾರಿಯಾಗುತ್ತಿದ್ದ. ಚಿನ್ನಾಭರಣ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಗೋವಾಕ್ಕೆ ತೆರಳಿ ಮೋಜು–ಮಸ್ತಿ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.