ಶುಕ್ರವಾರ, ಜೂನ್ 25, 2021
21 °C
ರಾಜಕಾಲುವೆ ಮರಳಲ್ಲಿ ಮಗು ಅಂತ್ಯಕ್ರಿಯೆ l ದಲಿತರು, ಬಡವರಿಗಿಲ್ಲ ಸ್ಮಶಾನ

ಕೊರಟಗೆರೆ: ಗುಂಡಿಯಲ್ಲಿಟ್ಟಿದ್ದ ಮಗುವಿನ ಶವ ಹೊರತೆಗೆಸಿದ್ದು ಯಾಕೆ?

ಎ.ಆರ್.ಚಿದಂಬರ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ (ತುಮಕೂರು): ತಾಲ್ಲೂಕಿನ ಜಂಪೇನಹಳ್ಳಿ ಕ್ರಾಸ್ ಬಳಿ ಸ್ಮಶಾನದಲ್ಲಿ ಭಾನುವಾರ ಶವಸಂಸ್ಕಾರಕ್ಕಾಗಿ ಗುಂಡಿಯಲ್ಲಿಟ್ಟಿದ್ದ ಮೂರು ತಿಂಗಳ ಮಗುವಿನ ಶವವನ್ನು ಹೊರತೆಗೆಸಿ, ಬೇರೆಡೆ ಕಳಿಸಿದ ಘಟನೆ ನಡೆದಿದೆ.

ಎತ್ತಿನಹೊಳೆ ಪೈಪ್‌ಲೈನ್‌ ಕಾಮಗಾರಿಗಾಗಿ ಕಲ್ಲುಬಂಡೆ ಸಿಡಿಸಿದ ಶಬ್ದಕ್ಕೆ ಬೆಚ್ಚಿಬಿದ್ದು ಮಲಗಿದ್ದ ಮೂರು ತಿಂಗಳ ಮಗುವೊಂದು ಶನಿವಾರ ರಾತ್ರಿ ಮೃತಪಟ್ಟಿತ್ತು. ಪೋಷಕರು ಭಾನುವಾರ ಸ್ಮಶಾನದಲ್ಲಿ ಮಗುವಿನ ಅಂತ್ಯಸಂಸ್ಕಾರ ಮಾಡುವಾಗ ಅಲ್ಲಿಗೆ ಧಾವಿಸಿದ ಪಕ್ಕದ ಜಮೀನಿನ ಕಾವಲುಗಾರ ಶವಸಂಸ್ಕಾರ ಮಾಡದಂತೆ ಅಡ್ಡಿಪಡಿಸಿದ್ದಾನೆ.

ಎಷ್ಟು ಮನವಿ ಮಾಡಿದರೂ ಆತ ಪಟ್ಟು ಸಡಿಲಿಸದ ಕಾರಣ ಗುಂಡಿಯಲ್ಲಿ ಇಟ್ಟಿದ್ದ ಮಗುವಿನ ಶವವನ್ನು ಸಮೀಪದ ರಾಜಕಾಲುವೆಯಲ್ಲಿ ಶವಸಂಸ್ಕಾರ ಮಾಡಲಾಗಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಕಾವಲುಗಾರ ಮತ್ತು ಗಾರ್ಮೆಂಟ್ಸ್‌ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಗುಂಡಿಯಿಂದ ಶವ ಹೊರತೆಗಿಸಿದರು: ‘ಧಾರ್ಮಿಕ ವಿಧಿವಿಧಾನ ಮುಗಿಸಿದ ಬಳಿಕ ಮಗುವನ್ನು ಗುಂಡಿಯಲ್ಲಟ್ಟು ಮಣ್ಣು ಹಾಕಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ನಮ್ಮನ್ನು ತಡೆದ. ಇದು ಗಾರ್ಮೆಂಟ್ಸ್‌ ಕಂಪನಿಗೆ ಸೇರಿದ ಜಾಗ. ಶವ ಹೂಳುವಂತಿಲ್ಲ ಎಂದು ಗಲಾಟೆ ಮಾಡಿದ’ ಎಂದು ಪೋಷಕರಾದ ರಂಗನಾಥ್‌ ಮತ್ತು ನೇತ್ರಾವತಿ ಕಣ್ಣೀರಾದರು.

‘ಎಷ್ಟೇ ಮನವಿ ಮಾಡಿದರೂ ಆತನ ಮನ ಕರಗಲಿಲ್ಲ. ಗುಂಡಿಯಲ್ಲಿಟ್ಟಿದ್ದ ಶವವನ್ನು ಹೊರತೆಗೆದು ಹೆಗಲ ಮೇಲೆ ಹೊತ್ತೊಯ್ದು ಪಕ್ಕದಲ್ಲಿನ ರಾಜಕಾಲುವೆಯಲ್ಲಿ ಗುಂಡಿ ತೆಗೆದು ಮುಚ್ಚಿದೆವು’ ಎಂದು ಅಳಲು ತೋಡಿಕೊಂಡರು.

ಗ್ರಾಮದಲ್ಲಿರುವ ಸರ್ಕಾರಿ ಜಾಗದಲ್ಲಿ ಸ್ಮಶಾನವಿದೆ. ಅದರ ಪಕ್ಕದಲ್ಲಿ ಬೆಂಗಳೂರಿನ ಗಾರ್ಮೆಂಟ್ಸ್‌ ಕಂಪನಿಯೊಂದು ಜಮೀನು ಖರೀದಿಸಿ, ಸುತ್ತಲೂ ಕಾಂಪೌಂಡ್ ಕಟ್ಟಿದ್ದಾರೆ.‌ ಕಾವಲುಗಾರರನ್ನೂ ನೇಮಕ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ಸ್ಮಶಾನದ ಜಾಗ ಗಾರ್ಮೆಂಟ್ಸ್‌ ಕಂಪನಿಗೆ ಸೇರುತ್ತದೆ. ಅಲ್ಲಿ ಶವಸಂಸ್ಕಾರ ಮಾಡುವಂತಿಲ್ಲ ಎಂಬುವುದು ಕಾವಲುಗಾರನ ವಾದ. ಸ್ಮಶಾನ ಸರ್ಕಾರಿ ಜಮೀನಿನಲ್ಲಿದ್ದು, ಗಾರ್ಮೆಂಟ್ಸ್ ಕಂಪನಿ ಜಾಗ ಮತ್ತು ಸ್ಮಶಾನದ ಮಧ್ಯೆ ರಾಜಕಾಲುವೆ ಇದೆ. ಈ ಸ್ಮಶಾನದಲ್ಲಿ ಮುಂಚಿನಿಂದಲೂ ಶವಸಂಸ್ಕಾರ ಮಾಡಲಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. 

ಘಟನೆ ನಂತರ ಸ್ಥಳಕ್ಕೆ ಕೊರಟಗೆರೆ ತಹಶೀಲ್ದಾರ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮನುಷ್ಯತ್ವ ಮರೆತು ಮೃಗದಂತೆ ವರ್ತಿಸಿದ ಕಾವಲುಗಾರ ಹಾಗೂ ಗಾರ್ಮೆಂಟ್ಸ್ ಮಾಲೀಕನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು