ಸೋಮವಾರ, ಮೇ 16, 2022
30 °C
‘ಕಾರುಣ್ಯ’ ಕೃತಿ ಬಿಡುಗಡೆ: ಸಾಹಿತಿ ಮಲ್ಲೇಪುರಂ ಜಿ.ವೆಂಕಟೇಶ ಅಭಿಪ್ರಾಯ

ಜಗತ್ತಿಗೆ ‘ಕಾರುಣ್ಯ’ ನೀಡಿದ ದಲೈಲಾಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಗತ್ತಿನಲ್ಲಿ ಹಿಂಸಾ ಚಟುವಟಿಕೆಗಳು ಚುರುಕಾಗಿರುವ ಸಂದರ್ಭದಲ್ಲಿ ಟಿಬೆಟ್ ಧರ್ಮಗುರು ದಲೈಲಾಮಾ ಅವರ ‘ಕಾರುಣ್ಯ’ದ ಮಾತುಗಳು ದಾರಿದೀಪವಾಗಿವೆ ಎಂದು ಸಾಹಿತಿ ಮಲ್ಲೇಪುರಂ ಜಿ.ವೆಂಕಟೇಶ ಅವರು ಇಲ್ಲಿ ಬುಧವಾರ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಹೊರ ತಂದಿರುವ ದಲೈ
ಲಾಮಾ ಅವರ ಇಂಗ್ಲಿಷ್ ಉಪನ್ಯಾಸಗಳ ಕನ್ನಡದ ಅನುವಾದಿತ ‘ಕಾರುಣ್ಯ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಎಲ್ಲೆಡೆ ಹಿಂಸಾತ್ಮಕ ಚಟುವಟಿಕೆಗಳನ್ನು ನೋಡುತ್ತಿದ್ದೇವೆ. ಮಹಾತ್ಮ ಗಾಂಧೀಜಿ ಶಾಂತಿ ಸ್ಥಾಪಿಸಲು ಸತ್ಯಾಗ್ರಹ ಎಂಬ ಪ್ರಮೇಯ ಹಿಡಿದು ಹೊರಟಿದ್ದರು. ಅದೇ ರೀತಿ ದಲೈಲಾಮಾ ಅವರು ಶಾಂತಿ ಬಾವುಟ ಹಿಡಿದಿದ್ದಾರೆ. ‘ಕಾರುಣ್ಯ’ದ ಮೂಲಕ ಸಮಾಜದಲ್ಲಿ ಶಾಂತಿ ಮೂಡಿಸಿದ್ದಾರೆ. ಈ ಕಾರುಣ್ಯದಲ್ಲಿ ಪ್ರೀತಿ, ಶಾಂತಿ, ಮಾನವೀಯತೆ– ಎಲ್ಲವನ್ನೂ ಒಳಗೊಂಡಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮನುಷ್ಯನಿಗೆ ಕಾರುಣ್ಯ ಸ್ಥಿತಿ ಮೂಡಬೇಕಿದೆ ಎಂದು
ಹೇಳಿದರು.

ದಲೈಲಾಮಾ ಅವರು ತಮ್ಮ ಮಾತುಗಳ ಮೂಲಕ ಮಾನವೀಯತೆ ಅರಳಿಸಿದ್ದಾರೆ. ಅಧಿಕಾರಹಿಡಿದ ಪ್ರಭುತ್ವಕ್ಕೆ ದುರಹಂಕಾರ ಇರಬಾರದು. ಒಂದು ವೇಳೆ ಅಂತಹ ಸ್ಥಿತಿ ಬಂದರೆ ಇಡೀ ದೇಶವೇ ಸರ್ವನಾಶವಾಗುತ್ತದೆ. ಅಮೆರಿಕ ಸೇರಿದಂತೆ ಇತರೆಡೆ ದಲೈಲಾಮಾ ಅವರು ಮಾಡಿದ ಭಾಷಣಗಳಲ್ಲಿ ಶಾಂತಿ ಚಿಂತನೆಗಳನ್ನು ನೀಡಿದ್ದಾರೆ ಎಂದು
ನೆನಪಿಸಿಕೊಂಡರು.

ಪ್ರಸ್ತುತ ಜಗತ್ತು ಯಂತ್ರ ನಾಗರಿಕತೆ ಕಡೆಗೆ ಹೋಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಯಂತ್ರ ನಾಗರಿಕತೆಯ ಅಪಾಯದ ಅರಿವಿರಬೇಕು. ಅಪಾಯದ ಬದಲು ಉಪಾಯದ ಯಂತ್ರ ನಾಗರಿಕತೆ ಕಟ್ಟಬೇಕಿದೆ. ಸಮಾಜದ ಎಲ್ಲಾ ಸ್ತರಗಳಲ್ಲೂ ಕಂದಕಗಳು ನಿರ್ಮಾಣವಾಗುತ್ತಿವೆ. 21ನೇ ಶತಮಾನದಲ್ಲಿ ಇದು ಗೋಚರಿಸುತ್ತಿದೆ. ನಮ್ಮೊಳಗೆ ದೃಷ್ಟ ಶಕ್ತಿ ಇರುತ್ತವೆ. ಅದರ ನಿವಾರಣೆಗೆ ಪ್ರಮೇಯ ಇಟ್ಟುಕೊಂಡರೆ ಈ ಕಂದಕಗಳನ್ನು ದೂರ ಮಾಡಬಹುದು ಅವರು ಸಲಹೆ ಮಾಡಿದರು.

‘ಕಾರುಣ್ಯ’ ಕೃತಿ ಹೊರ ತರಲು ಶ್ರಮಿಸಿದ ಪ್ರೊ.ನಿತ್ಯಾನಂತ ಬಿ.ಶೆಟ್ಟಿ ಅವರ ಕಾರ್ಯವನ್ನು ಶ್ಲಾಘಿಸಿದರು.

ಸೆರೆ ಜೆ ಮೊನಾಸ್ಟಿಕ್ ಯೂನಿವರ್ಸಿಟಿ ಮುಖ್ಯ ಕಾರ್ಯದರ್ಶಿ ಗೀಶೆ ನವಾಂಗ್ ಝಾಂಗ್ ಪೋ, ಮಂತ್ರೋಕ್ತಿ ಮುಖ್ಯಸ್ಥ ಗೆಂಡೆನ್ ದರ್ಜಿ, ವಿ.ವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಪ್ರಸಾರಾಂಗ ನಿರ್ದೇಶಕ ಪ್ರೊ.ನಿತ್ಯಾನಂತ ಬಿ.ಶೆಟ್ಟಿ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು