ಶುಕ್ರವಾರ, ಜುಲೈ 30, 2021
22 °C
ಕೊರಟಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ l ರೈತರಿಂದ ತೀವ್ರ ಅಸಮಾಧಾನ

ಪ್ರಾರಂಭಕ್ಕೂ ಮುನ್ನ ಮುಚ್ಚುವ ನಿರ್ಧಾರ

ಎ.ಆರ್.ಚಿದಂಬರ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ತಾಲ್ಲೂಕಿನ ರೈತರ ಬಹುದಿನದ ಕನಸಾದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಪ್ರಾರಂಭಕ್ಕೂ ಮುನ್ನವೇ ಸರ್ಕಾರ ಮುಚ್ಚಲು ನಿರ್ಧರಿಸಿದ್ದು, ರೈತರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ತಾಲ್ಲೂಕು ಸೇರಿದಂತೆ ಅಕ್ಕಪಕ್ಕದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 2017ರಲ್ಲಿ ಆಗ ಉಪ ಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ ಅವರು ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಪ್ರತ್ಯೇಕಿಸಿ ಕೊರಟಗೆರೆಗೆ ಸ್ವತಂತ್ರ ಕೃಷಿ ಉತ್ಪನ್ನ ಮಾರುಕಟ್ಟೆ
ಮುಂಜೂರು ಮಾಡಿಸಿದ್ದರು. 2017ರ ಫೆಬ್ರುವರಿ 3ರಂದು ಪಟ್ಟಣದಲ್ಲಿ ನೂತನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾರಂಭಕ್ಕೆ ಸರ್ಕಾರ ಸೂಚಿಸಿತ್ತು.

ತಾಲ್ಲೂಕಿನ ಕಸಬಾ ಹೋಬಳಿಯ ಹುಲಿಕುಂಟೆ ಬಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಡಿಗಲ್ಲು ಹಾಕಲಾಯಿತು. 92 ವಿವಿಧ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಮಾರಾಟ ನಿಯಂತ್ರಣಕ್ಕೆ ಒಳಪಡಿಸಲಾಯಿತು. 9 ಎಕರೆ ಜಾಗವನ್ನು ಮಾರುಕಟ್ಟೆಗೆ ಗುರುತಿಸಲಾಯಿತು. ಈ ಜಾಗವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸ್ವಾಧೀನಕ್ಕೆ ಪಡೆಯಲು ಆಗಸ್ಟ್ 2017ರಲ್ಲಿ ₹15.20 ಲಕ್ಷವನ್ನು ಸಮಿತಿ ಕಾರ್ಯದರ್ಶಿ ಮೂಲಕ ಸರ್ಕಾರಕ್ಕೆ ಸಂದಾಯ ಮಾಡಲಾಯಿತು.

ಕಾಂಪೌಂಡ್, ಆಡಳಿತ ಕಚೇರಿ ಹಾಗೂ ಇತರೆ ಮಳಿಗೆ ನಿರ್ಮಾಣ ಕಾಮಗಾರಿಗಾಗಿ ಸರ್ಕಾರ ಆರಂಭದಲ್ಲಿ ₹4.50 ಕೋಟಿ ಹಣ ಮುಂಜೂರು ಮಾಡಿತ್ತು. ಇದರಲ್ಲಿ ₹1 ಕೋಟಿ ವೆಚ್ಚದಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲಾಯಿತು. ಸಮಿತಿ ರಚನೆಯಾದ ಬಳಿಕ ಸ್ಥಳೀಯ ಸಮಿತಿ ಅಧ್ಯಕ್ಷರ ಓಡಾಟಕ್ಕೆಂದು ₹14 ಲಕ್ಷ ವೆಚ್ಚದ ಬೊಲೆರೊ ಜೀಪ್ ಕೂಡ ನೀಡಲಾಗಿತ್ತು. ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡು ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂಬಂಧಿಸಿದ ಕಾಮಗಾರಿ ಮುಂದುವರೆಯಲಿಲ್ಲ. ಆಡಳಿತ ಕಚೇರಿ ಸೇರಿದಂತೆ ಅಂಗಡಿ ಮಳಿಗೆ ನಿರ್ಮಾಣ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಜಾಗ ಅಭಿವೃದ್ಧಿಗೆ ಸರ್ಕಾರ ಹಣ ನೀಡಲಿಲ್ಲ. ಹಾಗಾಗಿ ಇಲ್ಲಿನ ಮಾರುಕಟ್ಟೆ ಕಾಂಪೌಂಡ್ ಗೋಡೆ ಬಿಟ್ಟರೆ ಉಳಿದ ಯಾವುದೇ ಅಭಿವೃದ್ಧಿ ಕೆಲಸ ಈವರೆಗೆ ಆಗಿಲ್ಲ. ಸರ್ಕಾರ ಈಗ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಆರ್ಥಿಕ ಸದೃಢತೆ ಹೊಂದಿಲ್ಲ ಎಂಬ ನೆಪವೊಡ್ಡಿ ಅಧಿಸೂಚನೆ ಹೊರಡಿಸುವ ಮೂಲಕ ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ವಿಲೀನಗೊಳಿಸಲು ಮುಂದಾಗಿದೆ.

ಸರ್ಕಾರ ನೂತನ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಗೆ ಹಣ ನೀಡದೇ, ಅಧಿಕೃತವಾಗಿ ಪ್ರಾರಂಭ ಮಾಡದೇ ಹಾಗೂ ಇಲ್ಲಿ ಯಾವುದೇ ಮಾರಾಟ ಪ್ರಕ್ರಿಯೆಗಳೂ ನಡೆಸದೇ ನಷ್ಟದಲ್ಲಿದೆ ಎಂದು ವಿಲೀನಗೊಳಿಸಲು ಹೊರಟಿರುವುದಕ್ಕೆ ಈ ಭಾಗದ ರೈತರಿಂದ ವಿರೋಧ ವ್ಯಕ್ತವಾಗುತ್ತಿದೆ.

ಸಮಿತಿ ರಚನೆ ಆಗಿ ನಾಲ್ಕು ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಕೈಗೊಳ್ಳದೇ ಮಾರುಕಟ್ಟೆಯನ್ನು ರದ್ದುಪಡಿಸಲು ಮುಂದಾಗಿರುವುದು ಅವೈಜ್ಞಾನಿಕ. ಕಾಂಪೌಂಡ್ ಹೊರತುಪಡಿಸಿ ಇತರೆ ಏನೂ ಕೆಲಸಗಳು ಮಾಡದೇ ಇರುವ ಕಾರಣ ಮಾರುಕಟ್ಟೆಗೆ ನಿಗಧಿ ಪಡಿಸಲಾಗಿದ್ದ 9 ಎಕರೆ ಭೂಮಿ ಕಚ್ಚಾ ಸ್ಥಿತಿಯಲ್ಲೆ ಇದೆ. ಮಾರುಕಟ್ಟೆ ಸ್ಥಾಪನೆಯಾಗಿ ಪ್ರಾರಂಭಕ್ಕೂ
ಮುನ್ನ ನಷ್ಟ ಎಂದು ಹೇಗೆ ಪರಿಗಣಿಸಲಾಯಿತು ಎಂಬುದು ತಾಲ್ಲೂಕಿನ ಜನರ ಪ್ರಶ್ನೆ.

ತಾಲ್ಲೂಕಿನ ಅಕ್ಕಿರಾಂಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿವಾರ ನಡೆಯುವ ಕುರಿ, ಮೇಕೆ, ಕೋಳಿ ವ್ಯಾಪಾರ ವಹಿವಾಟು ಕೋಟಿ ಮೀರಿದೆ. ಇದರಿಂದಾಗಿ ಪ್ರತಿ ಶನಿವಾರ ರಾಜ್ಯದ ವಿವಿಧೆಡೆಯಿಂದ ನೂರಾರು ಜನರು ಇಲ್ಲಿನ ಮಾರುಕಟ್ಟೆಗೆ ಬರುತ್ತಾರೆ. ಅದೇ ರೀತಿ ಯೋಜಿತ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥಿತವಾಗಿ ಪ್ರಾರಂಭಿಸಿದ್ದಲ್ಲಿ ಇನ್ನಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ಈ ಭಾಗದ ಜನ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.