ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ: ರಂಗೇರಿದ ಕಸಾಪ ಚುನಾವಣೆ

ಆರಂಭವಾಯಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಪ್ರಚಾರ
Last Updated 28 ಜನವರಿ 2021, 1:33 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಕಣ ಈಗಲೇ ರಂಗೇರಿದೆ. ‌ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇನ್ನೂ ಚುನಾವಣೆಗೆ ಮೂರು ತಿಂಗಳು ಇದೆ. ಈ ನಡುವೆಯೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಕೆಲವರು ಬಹಿರಂಗವಾಗಿಯೇ ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತೆ ಕೆಲವರು ತಮ್ಮದೇ ಆದ ಸಭೆಗಳನ್ನು ನಡೆಸುವ ಮೂಲಕ ಕಣಕ್ಕಿಳಿಯಲು ವೇದಿಕೆ ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ.

ಆಕಾಂಕ್ಷಿಗಳು ಈಗಾಗಲೇ ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಿ ಮತದಾರರ ಬೆಂಬಲ ಕೋರುತ್ತಿದ್ದಾರೆ. ಆಂತರಿಕ ಮತ್ತು ಬಹಿರಂಗ ಸಭೆಗಳನ್ನು ನಡೆಸುತ್ತಿದ್ದಾರೆ. ಕೆಲವು ಆಕಾಂಕ್ಷಿಗಳು ಅಭಿಪ್ರಾಯ ಕ್ರೋಡೀಕರಣ ಮಾಡುತ್ತಿದ್ದಾರೆ. ಚುನಾವಣೆ ಘೋಷಣೆಯಾದ ನಂತರ ಮತ್ತಷ್ಟು ಮಂದಿ ಸ್ಪರ್ಧೆಗೆ ಆಸಕ್ತಿ ತೋರುವ ಸಾಧ್ಯತೆ ಇದೆ.

ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಕೆಲಸ ಮಾಡುವವರಷ್ಟೇ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ನಿಯಮವೇನೂ ಇಲ್ಲ. ಪರಿಷತ್ ಸದಸ್ಯರಾಗಿರುವ ಕನ್ನಡಿಗರಾದ ಯಾರಾದರೂ ಸ್ಪರ್ಧೆ ಮಾಡಬಹುದು. ಮುಕ್ತ ಸ್ಪರ್ಧೆ ಕಾರಣದಿಂದ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವವರೂ ಅಧ್ಯಕ್ಷ ಸ್ಥಾನದ ಮೇಲೆ ದೃಷ್ಟಿ ನೆಟ್ಟಿದ್ದಾರೆ.

ಕಳೆದ ಬಾರಿಯ ಕಸಾಪ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸುಮಾರು 8 ಸಾವಿರ ಮತದಾರರು ಇದ್ದರು. ಆದರೆ ಈಗ ಅದು 12 ಸಾವಿರಕ್ಕೆ ತಲುಪಿದೆ. ಕಸಾಪ ಚುನಾವಣೆಯಲ್ಲಿ ಮತದಾನಕ್ಕೆ ಸದಸ್ಯತ್ವ ಪಡೆದು ಮೂರು ವರ್ಷಗಳಾಗಿರಬೇಕು. ಮತ್ತೆ ಕೆಲವು ಸದಸ್ಯರು ನಿಧನ ಹೊಂದಿದ್ದಾರೆ. ಈ ಎಲ್ಲ ಕಾರಣದಿಂದ ಕನಿಷ್ಠ 10 ಸಾವಿರ ಮತದಾರರಾದರೂ ಇದ್ದೇ ಇರುತ್ತಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಲಗಳು ತಿಳಿಸಿವೆ.

ಜಾತಿಯೂ ಪ್ರಧಾನ: ಜಿಲ್ಲಾ ಕಸಾಪ ಚುನಾವಣೆಯಲ್ಲಿಯೂ ಜಾತಿ ಆಧಾರಿತಮತಗಳ ವಿಭಜನೆ, ಕ್ರೋಡೀಕರಣ ನಡೆಯುತ್ತದೆ. ಹಣ ಬಲ, ಜಾತಿ ಪ್ರಭಾವ, ತಮ್ಮದೇ ಆದ ವೈಯಕ್ತಿಕ ಸಂಪರ್ಕ, ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಹೀಗೆ ವಿವಿಧ ವಿಚಾರಗಳು ಪ್ರಮುಖವಾಗುತ್ತವೆ. ಚುನಾವಣೆ ಅಧಿಕೃತವಾಗಿ ಘೋಷಣೆಯಾದ ತರುವಾಯ ಈ ಜಾತಿ ಆಧಾರಿತ ಚರ್ಚೆಗಳು ಮತ್ತಷ್ಟು ಗರಿಗೆದರುತ್ತವೆ ಎನ್ನಲಾಗುತ್ತಿದೆ.

ಗುಂಪುಗಳಾಗಿ ಪ್ರಚಾರ: ಆಕಾಂಕ್ಷಿಗಳು ಈಗಾಗಲೇ ತಮ್ಮದೇ ಆದ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಮಾಡಿಕೊಂಡಿದ್ದಾರೆ. ಈ ಮೂಲಕ ಮತ ಕೋರುತ್ತಿದ್ದಾರೆ. ಸಾಹಿತ್ಯ ಮತ್ತಿತರ ಕಾರ್ಯಕ್ರಮಗಳು ನಡೆಯುವ ಸ್ಥಳಗಳಿಗೆ ತೆರಳಿ ಮತ ಕೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT