ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಮಾತು ಕೊಟ್ಟರೂ ಭರ್ತಿಯಾಗದ ಕೆರೆ

ವಿಧಾನಸಭೆ ಉಪಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ ಶಿರಾ ತಾಲ್ಲೂಕಿನ ಮದಲೂರು ಕೆರೆ
Last Updated 8 ಮಾರ್ಚ್ 2021, 5:11 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ಮಟ್ಟಿಗೆ ಚುನಾವಣೆ ಅಸ್ತ್ರವಾಗಿರುವ ಮದಲೂರು ಕೆರೆಗೆ ಹೇಮಾವತಿಯಿಂದ ನೀರು ಹರಿಸುವ ವಿಚಾರ ವಿಧಾನಸಭೆ ಉಪಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿ ರಾಜ್ಯದ ಗಮನವನ್ನು ತನ್ನ ಕಡೆ ಸೆಳೆದಿತ್ತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಖುದ್ದು ಮದಲೂರು ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿ, 6 ತಿಂಗಳಲ್ಲಿ ಕೆರೆ ತುಂಬಿಸಿ ನಾನೇ ಬಂದು ಬಾಗಿನ ಅರ್ಪಿಸುವುದಾಗಿ ಭರವಸೆ ನೀಡಿದ್ದರು.

ಕ್ಷೇತ್ರದ ಮತದಾರರು ಮುಖ್ಯಮಂತ್ರಿಗಳ ಮಾತಿನ ಮೇಲೆ ‌ಭರವಸೆ ಇಟ್ಟು ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದರು. ಆದರೆ ಮದಲೂರು ಕೆರೆ ತುಂಬುವ ಸೂಚನೆಗಳು ಮಾತ್ರ ಕಾಣದಾಗಿವೆ.

ಶಿರಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವಿಧಾನಸಭೆ ಚುನಾವಣೆಗಳಲ್ಲಿ ಮದಲೂರು ಕೆರೆ ವಿಚಾರ ಮಹತ್ವದ ಪಾತ್ರ ವಹಿಸಿದೆ.

ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವಂತೆ ಮೊದಲು ಪ್ರಸ್ತಾಪಿಸಿದ್ದ ಪಟ್ಟ‌ನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ಮಠದ ವತಿಯಿಂದ ಸರ್ವೆ ನಡೆಸಿ ಯೋಜನೆಯ ನಕ್ಷೆಯನ್ನು 2005ರಲ್ಲಿ ನಡೆದ ಜಾತ್ರೆಯ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿ ಧ್ವನಿ ಎತ್ತಿದ್ದರು.

2006ರಲ್ಲಿ ಶಾಸಕರಾಗಿದ್ದ ಬಿ.ಸತ್ಯನಾರಾಯಣ ಅವರು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮದಲೂರು ಕೆರೆಗೆ ಕರೆತರುವ ಮೂಲಕ ಯೋಜನೆಗೆ ಮಂಜೂರಾತಿಯನ್ನು ಪಡೆದುಕೊಂಡರು.

ವಿಧಾನಸಭೆಯ ಕ್ಷೇತ್ರಗಳ ಮರುವಿಂಗಡನೆಯ ನಂತರ 2008ರಲ್ಲಿ ಪಟ್ಟನಾಯಕನಹಳ್ಳಿಯಲ್ಲಿ ನಡೆದ ನಂಜಾವಧೂತ ಸ್ವಾಮೀಜಿ ಹುಟ್ಟುಹಬ್ಬದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಟಿ‌.ಬಿ.ಜಯಚಂದ್ರ ಎರಡು ವರ್ಷದಲ್ಲಿ‌ ಮದಲೂರು ಕೆರೆಗೆ ನೀರು ಹರಿಸುವುದಾಗಿ ಹೇಳುವ ಮೂಲಕ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡರು.

ಶಿರಾ ಕ್ಷೇತ್ರದ ಜನತೆ ಟಿ.ಬಿ.ಜಯಚಂದ್ರ ಅವರಿಗೆ 2008ರಲ್ಲಿ ಆರ್ಶೀವಾದ ಮಾಡಿದರು. ಆದರೆ ರಾಜ್ಯದಲ್ಲಿ ‌ಬಿಜೆಪಿ ಸರ್ಕಾರ ಅಧಿಕಾರಕ್ಕೆ‌ ಬಂದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಜಯಚಂದ್ರ ಅವರು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತಾಯಿತು‌ ಯೋಜನೆ ಅನುಷ್ಠಾನಕ್ಕೆ ಹಲವಾರು ರೀತಿ ಅಡ್ಡಿಗಳು ಬಂದರು ಸಹ ಅಂದು ಕೇಂದ್ರದಲ್ಲಿ‌ ಅಧಿಕಾರದಲ್ಲಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದಲ್ಲಿ ಪ್ರಭಾವ ಬೀರಿ ಕೇಂದ್ರ ಸರ್ಕಾರದಿಂದ ₹ 59.85 ಕೋಟಿ ಅನುದಾನವನ್ನು ತಂದು
2012ರಲ್ಲಿ ಅಂದಿನ ಕೇಂದ್ರ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರಿಂದ ಯೋಜನೆಗೆ ಶಂಕುಸ್ಥಾಪನೆ
ನಡೆಸಲಾಯಿತು.

ಯೋಜನೆಗೆ ಅಂದು ಜಿಲ್ಲೆಯ ಬಿಜೆಪಿ ಶಾಸಕರಾದ ಸೊಗಡು ಶಿವಣ್ಣ, ಸುರೇಶ್ ಗೌಡ, ನಾಗೇಶ್ ಅವರು ಅಡ್ಡಿ ಮಾಡಿ ಹೈಕೋರ್ಟ್ ಮೆಟ್ಟಿಲೇರಿದಾಗ ಸ್ವಂತಹ ಟಿ.ಬಿ.ಜಯಚಂದ್ರ ಕಪ್ಪು ಕೋಟ್ ಧರಿಸಿ ನ್ಯಾಯಾಲಯದಲ್ಲಿ ವಾದ ಮಂಡಿಸಿ ಯೋಜನೆಗೆ ನ್ಯಾಯಾಲಯದಿಂದ ಹಸಿರು ನಿಶಾನೆ ಪಡೆದಿದ್ದರು.

ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಸುವ 32 ಕಿ.ಮೀ ನಾಲೆ 2018ರಲ್ಲಿ ಪೂರ್ಣಗೊಂಡು ಪ್ರಾಯೋಗಿಕವಾಗಿ 13 ದಿನಗಳ‌ ಕಾಲ ನೀರು ಹರಿಸಿದರು. ಆದರೆ ಬದಲಾದ ರಾಜಕಾರಣದಲ್ಲಿ ಜಯಚಂದ್ರ ಅವರು ಚುನಾವಣೆಯಲ್ಲಿ ಸೋತರು. ಜೆಡಿಎಸ್ ಪಕ್ಷದ ಬಿ.ಸತ್ಯನಾರಾಯಣ ಶಾಸಕರಾಗಿ ಆಯ್ಕೆಯಾದರೂ ಸಹ ಮದಲೂರು ಕೆರೆಗೆ ನೀರು ಬರುವುದು ಮರೀಚಕೆಯಾಯಿತು.

ಮದಲೂರು ಕೆರೆಗೆ ನೀರು ಹಂಚಿಕೆಯಾಗಿಲ್ಲ. ಆದ್ದರಿಂದ ನೀರು ಹರಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಪದೇ ಪದೇ ಹೇಳುತ್ತಿದ್ದರು. ಆದರೆ ಶಾಸಕ ಬಿ.ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾದ ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಖುದ್ದು ಮುಖ್ಯಮಂತ್ರಿಗಳೇ
ನೀರು ಹರಿಸುವ ಭರವಸೆ ನೀಡಿದಾಗ ಜನತೆ ಪುಳಕಿತರಾದರು.

ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಮದಲೂರು ಕೆರೆಗೆ ಸುಮಾರು 50 ದಿನಗಳ ಕಾಲ‌ ನೀರು ಹರಿಸಿದರು ಸಹ ಆರ್ಧ ಕೆರೆ ಸಹ ಭರ್ತಿಯಾಗಲಿಲ್ಲ. ಬಿಟ್ಟ ನೀರು ಕೆರೆಯಲ್ಲಿ ‌ನಡೆದಿದ್ದ ಅಕ್ರಮ ಮರಳು ಗಣಿಗಾರಿಕೆಯ ಗುಂಡಿಗಳು ಸಹ ತುಂಬಲಿಲ್ಲ.

ವಿಧಾನಸಭೆ ಉಪಚುನಾವಣೆ ಸಮಯದಲ್ಲಿ ಹೆಚ್ಚು ಸದ್ದು ಮಾಡಿದ ಮದಲೂರು ಕೆರೆ ವಿಚಾರ ಬಿಜೆಪಿ ಪಕ್ಷಕ್ಕೆ ಹೆಚ್ಚು ಲಾಭವನ್ನು ತಂದು ಕೊಟ್ಟರು ಸಹ ಕೆರೆ ಭರ್ತಿಯಾಗದಿರುವುದು ಜನರಲ್ಲಿ ಅಸಮಾಧಾನಕ್ಕೆ ‌ಕಾರಣವಾಗಿದೆ.

ಕೆರೆಗೆ ನೀರು ಹರಿದಿರುವ ಬಗ್ಗೆ ಪರ ವಿರೋಧದ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಬಿಜೆಪಿ ಬೆಂಬಲಿಗರು ಕೊಟ್ಟ ಮಾತಿನಂತೆ ನೀರು ಹರಿಸಲಾಗಿದೆ. ಇದರಿಂದಾಗಿ ಶಿರಾ ತಾಲ್ಲೂಕಿ‌ನಲ್ಲಿ ಅಂತರ್ಜಲದ ಮಟ್ಟ ಹೆಚ್ಚಿದೆ ಎಂದು ಹೇಳಿದರೆ, ವಿರೋಧ ಪಕ್ಷದವರು ತಾಲ್ಲೂಕಿನ ಅಂತರ್ಜಲ ಮಟ್ಟ ಹೆಚ್ಚಲು ವಾಣಿವಿಲಾಸ ಸಾಗರದಲ್ಲಿ ನೀರು ಶೇಖರಣೆಯಾಗಿರುವುದು ಹಾಗೂ ಒಳಚರಂಡಿ ನೀರನ್ನು ಕಲ್ಲುಕೋಟೆ ಹಳ್ಳಕ್ಕೆ ಬಿಟ್ಟಿರುವುದರಿಂದ ನೀರು ಶೇಖರಣೆಯಾಗಿ ಅಂತರ್ಜಲ ವೃದ್ಧಿಯಾಗಿದೆ. ಕೆರೆಗೆ ನೀರು ಬಂದ ತಕ್ಷಣ ಅಂತರ್ಜಲ ವೃದ್ಧಿಸುವುದಿಲ್ಲ. ಕನಿಷ್ಠ 6 ತಿಂಗಳಾದರೂ ನೀರು ನಿಂತಿರಬೇಕು ಎಂದು ವಾದಿಸುತ್ತಾರೆ.

ಒಟ್ಟಿನಲ್ಲಿ ಮದಲೂರು ಕೆರೆಗೆ ನೀರು ಹರಿಸುವ ವಿಚಾರ ಮುಂದಿನ‌ ವಿಧಾನಸಭೆ ಚುನಾವಣೆಯಲ್ಲಿ ಸಹ ಮಹತ್ವದ ಪಾತ್ರ ವಹಿಸುವುದರಲ್ಲಿ‌ ಯಾವುದೇ ಅನುಮಾನವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT