ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಪಾತ್‌ನಲ್ಲೇ ನಿಂತ ವ್ಯಾಪಾರಿಗಳ ಬದುಕು

Last Updated 24 ಮೇ 2021, 4:22 IST
ಅಕ್ಷರ ಗಾತ್ರ

ತುಮಕೂರು: ರಸ್ತೆ ಬದಿ ವ್ಯಾಪಾರಿಗಳ ಬದುಕು ಫುಟ್‌ಪಾತ್‌ನಿಂದ ರಸ್ತೆಗೆ ಬಂದೇ ಇಲ್ಲ. ಕಳೆದ ಒಂದು ವರ್ಷದ ಹಿಂದೆ ಹಳ್ಳಕ್ಕೆ ಸರಿದ ಜೀವನದ ಬಂಡಿಯನ್ನು ಮೇಲೆತ್ತುವ ಪ್ರಯತ್ನ ಸಾಗಿದ್ದರೂ ಅದು ನಿಂತಲ್ಲೇ ನಿಂತಿದೆ.

ಇಂತಹ ಶ್ರಮಿಕ ವರ್ಗದ ಬದುಕಿನ ಬಗ್ಗೆ ಬರೆಯುವ ಸಮಯದಲ್ಲಿ ‘ಬದುಕು ಬೀದಿಗೆ ಬಿತ್ತು’ ಎಂದು ಹೇಳುತ್ತೇವೆ. ಪ್ರಸ್ತುತ ರಸ್ತೆ ಬದಿ ವ್ಯಾಪಾರಿಗಳ ಬದುಕು ಬೀದಿಯಲ್ಲೇ ಇದೆ. ಎಷ್ಟು ನೂಕಿದರೂ ಒಂದೆಜ್ಜೆಯೂ ಮುಂದೆ ಹೋಗುತ್ತಿಲ್ಲ. ಬಂಡಿ ನೂಕಲಾರದೆ ಸೋತು ಸುಣ್ಣವಾಗಿ ಹೋಗಿದ್ದಾರೆ.

ಕೋವಿಡ್–19 ಮೊದಲ ಅಲೆ ಸಮಯದಲ್ಲಿ ಆರಂಭವಾದ ಸಂಕಷ್ಟ ಇನ್ನೂ ಮುಂದುವರಿದಿದೆ. ಹಿಂದಿನ ವರ್ಷದ ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದ ಸಮಯದಲ್ಲಿ ಫುಟ್‌ಪಾತ್ ವ್ಯಾಪಾರ ಬಂದ್ ಮಾಡಿಸಲಾಯಿತು. ಅಲ್ಲಿಂದ ಈವರೆಗೂ ವ್ಯಾಪಾರ ಮಾಡಿ ನಾಲ್ಕು ಕಾಸು ಸಂಪಾದಿಸಿ ಸಂಸಾರ ಮುನ್ನೆಸಲು ಸಾಧ್ಯವಾಗಿಲ್ಲ. ಮೊದಲ ಅಲೆ ಸ್ವಲ್ಪಮಟ್ಟಿಗೆ ಕಡಿಮೆಯಾದ ನಂತರ ಅಲ್ಲಲ್ಲಿ ಫುಟ್‌ಪಾತ್ ವ್ಯಾಪಾರಕ್ಕೂ ಅವಕಾಶಗಳು ಸಿಕ್ಕವು.

ಆದರೆ ವ್ಯಾಪಾರ ಮಾತ್ರ ಹಿಂದಿನಂತೆ ಇರಲಿಲ್ಲ. ಕೊರೊನಾ ಭಯದಿಂದ ಜನರೂ ಖರೀದಿಗೆ ಮುಂದಾಗಲಿಲ್ಲ. ಕೋವಿಡ್ ಎರಡನೇ ಅಲೆ ಬರಲಿದೆ ಎಂಬ ಸುದ್ದಿಗಳು ಹರಿದಾಡಿದಂತೆ ಖರೀದಿಯಿಂದ ಮತ್ತಷ್ಟು ದೂರವೇ ಉಳಿದರು. ಮುಂದೆ ಪರಿಸ್ಥಿತಿ ಯಾವ ರೀತಿ ಇರುವುದೊ ಗೊತ್ತಿಲ್ಲ. ಇರುವ ಹಣ ವೆಚ್ಚ ಮಾಡದೆ ಉಳಿತಾಯ ಮಾಡೋಣ ಎಂಬ ಮನೋಭಾವನೆಯೂ ಬೆಳೆಯಿತು. ಜತೆಗೆ ಕೋವಿಡ್ ಕಾಣಿಸಿಕೊಂಡ ನಂತರ ವಸ್ತುಗಳ ಬೆಲೆಯೂ ದುಬಾರಿಯಾಗಿದೆ. ಮೊದಲೇ ಉದ್ಯೋಗ ನಷ್ಟ ಅನುಭವಿಸಿದವರು, ಕೂಲಿ ಸಿಗದವರು, ಕಾರ್ಮಿಕರು ಜೀವನ ನಡೆಸುವುದೇ ಕಷ್ಟ ಎಂಬಂತಹ ಪರಿಸ್ಥಿತಿಗೆ ಸಿಲುಕಿದವರು ಬೆಲೆ ಹೆಚ್ಚಳದಿಂದ ಖರೀದಿಯತ್ತ ಮುಖ ಮಾಡಲಿಲ್ಲ. ಕೊನೆಗೆ ಅಲ್ಪಸ್ವಲ್ಪ ವ್ಯಾಪಾರವೂ ಇಲ್ಲವಾಯಿತು.

ಅಕ್ಟೋಬರ್ ನಂತರ ಚೇತರಿಕೆಯತ್ತ ಸಾಗಿತ್ತು. ಫೆಬ್ರುವರಿ ವೇಳೆಗೆ ಹಬ್ಬಗಳು ಆರಂಭವಾಗಿದ್ದು ವ್ಯಾಪಾರ ಸುಧಾರಿಸಬಹುದು ಎಂದುಕೊಳ್ಳುವಾಗಲೇ ಮತ್ತೊಮ್ಮೆ ಕೋವಿಡ್ ವಕ್ಕರಿಸಿದೆ. ಮಾರ್ಚ್ ವೇಳೆಗೆ ವ್ಯಾಪಾರ ಇಳಿಮುಖವಾಗಿತ್ತು. ಲಾಕ್‌ಡೌನ್ ಘೋಷಣೆಯಾದ ನಂತರ ಸಂಪೂರ್ಣ ಬಂದ್ ಆಗಿದೆ. ನಮ್ಮ ‘ಜೀವ’ವೂ ಬಂದ್ ಆಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ದುಡಿಮೆ ನಂಬಿ: ರಸ್ತೆ ಬದಿ ವ್ಯಾಪಾರಿಗಳು ಅಂದಿನ ದುಡಿಮೆಯನ್ನು ಅಂದೇ ನಂಬಿ ಜೀವನ ಕಟ್ಟಿಕೊಂಡವರು. ಎಷ್ಟೊ ದಿನಗಳು ಬಂಡವಾಳ ತೊಡಗಿಸಲು ಸಾಧ್ಯವಾಗದೆ ಬೆಳಿಗ್ಗೆ ಬಡ್ಡಿಗೆ ಹಣ ತಂದು, ವ್ಯಾಪಾರ ಮುಗಿಸಿ ಸಂಜೆ ಅಸಲು, ಬಡ್ಡಿ ತೀರಿಸಿ, ಉಳಿದ ಹಣದಲ್ಲಿ ಕುಟುಂಬ ಮುನ್ನಡೆಸಬೇಕಾದ ಪರಿಸ್ಥಿತಿಯಲ್ಲಿ ಇದ್ದಾರೆ. ವ್ಯಾಪಾರ ಇಲ್ಲವಾದರೆ ಮನೆ ಬಾಡಿಗೆ ಕಟ್ಟಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ದುರ್ಲಬವಾಗುತ್ತದೆ. ಅನಾರೋಗ್ಯ ಕಾಡಿದರಂತೂ ಸಾಲಕ್ಕೆ ಕೈಯೊಡ್ಡಬೇಕು. ಹೊಟ್ಟೆಗಾದರೆ ಬಟ್ಟೆಗಿಲ್ಲ. ಬಟ್ಟೆಗಾದರೆ ಮತ್ತೊಂದಕ್ಕಿಲ್ಲ ಎಂಬಂತಹ ಜೀವನ.

ಕಿರು ಸಾಲ: ಬೀದಿ ಬದಿ ವ್ಯಾಪಾರಿಗಳ ನೆರವಿಗೆ ಪ್ರಧಾನ ಮಂತ್ರಿಗಳ ‘ಆತ್ಮ ನಿರ್ಭರ ಭಾರತ’ ಯೋಜನೆಯಲ್ಲಿ ₹10 ಸಾವಿರ ಕಿರು ಸಾಲ ನೀಡಲಾಗುತ್ತಿದೆ. ಪ್ರತಿ ತಿಂಗಳು ₹886 ಕಂತು ಕಟ್ಟಬೇಕು. ಈ ಯೋಜನೆಯಲ್ಲಿ ಫುಟ್‌ಪಾತ್ ವ್ಯಾಪಾರಿಗಳು ಬಡ್ಡಿಗೆ ಹಣ ತಂದು ವ್ಯಾಪಾರಮಾಡಿ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಕಾರಣಕ್ಕೆ ಸಾಲ ನೀಡುವ ಯೋಜನೆ ಆರಂಭಿಸಲಾಯಿತು. ಈ ಸಾಲಕ್ಕೆ ವ್ಯಾಪಾರಿಗಳು ಯಾವುದೇ ಬಡ್ಡಿ ಕಟ್ಟಬೇಕಿಲ್ಲ. ಬಡ್ಡಿ ಹಣವನ್ನು ಸರ್ಕಾರ ತುಂಬಿ ಕೊಡಲಿದೆ.

ಸಾಲ ಯೋಜನೆ ಜಾರಿಯಾದರೂ ಹೆಚ್ಚು ಜನರಿಗೆ ಪ್ರಯೋಜನ ಸಿಗಲಿಲ್ಲ. ಕಳೆದ ವರ್ಷ ತುಮಕೂರು ನಗರದಲ್ಲಿ 3,063 ಮಂದಿ
ಅರ್ಜಿ ಸಲ್ಲಿಸಿದ್ದು, ಕೇವಲ 1,850 ಜನರಿಗೆಸಾಲ ಸಿಕ್ಕಿದೆ. ಬಹುತೇಕರಿಗೆ ಸಾಲ ಸಿಗುತ್ತಿಲ್ಲ. ಹಲವರಿಗೆ ಸಾಲ ಕೊಡಲು ಬ್ಯಾಂಕ್‌ಗಳು ಮುಂದಾಗುತ್ತಿಲ್ಲ. ಕೊನೆಗೆ ಬಡ್ಡಿಗೆ ಹಣ ತಂದು ವ್ಯಾಪಾರ ಮಾಡುವುದು ತಪ್ಪುತ್ತಿಲ್ಲ.

ಪರಿಹಾರ ಹೆಚ್ಚು ಬೇಕು

ಈಗ ರಾಜ್ಯ ಸರ್ಕಾರ ₹2 ಸಾವಿರ ಪರಿಹಾರ ಪ್ರಕಟಿಸಿದೆ. ಇದು ಏನೇನೂ ಸಾಲದಾಗಿದ್ದು, ಪರಿಹಾರದ ಮೊತ್ತ ಹೆಚ್ಚಿಸಬೇಕು. ಆತ್ಮ ನಿರ್ಭರ ಯೋಜನೆಯಲ್ಲಿ ಸಾಲ ಪಡೆದವರು ಲಾಕ್‌ಡೌನ್ ಘೋಷಣೆ ನಂತರ ಸಾಲದ ಕಂತು ಕಟ್ಟಲು ಸಾಧ್ಯವಾಗಿಲ್ಲ. ಈಗ ಬರುವ ಪರಿಹಾರ ಹಣವನ್ನು ಬ್ಯಾಂಕ್‌ನವರು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ.

***

ವ್ಯಾಪಾರಮಾಡಿ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಈಗ ಬಹುತೇಕ ವ್ಯಾಪಾರ ನಡೆಯುತ್ತಿಲ್ಲ. ಕೈ ಸಾಲವೂ ಸಿಗುತ್ತಿಲ್ಲ. ಸರ್ಕಾರ ನೀಡುವ ಪರಿಹಾರವೂ ಅತ್ಯಲ್ಪ. ಫುಟ್‌ಪಾತ್ ವ್ಯಾಪಾರಿಗಳ ಬದುಕು ಅತಂತ್ರವಾಗಿದೆ. ಮುಂದಿನ ದಿನಗಳಲ್ಲಿ ಕಿರು ಸಾಲದ ಮೊತ್ತವನ್ನು ₹50 ಸಾವಿರಕ್ಕೆ ಹೆಚ್ಚಿಸಬೇಕು.

- ವಸೀಂ ಅಕ್ರಮ್, ಅಧ್ಯಕ್ಷ, ಸಿಐಟಿಯು ತುಮಕೂರುಬೀದಿ ಬದಿ ವ್ಯಾಪಾರಿಗಳ ಸಂಘ

***

ಹೆಚ್ಚಿದ ನಷ್ಟ

ಸಾಲಮಾಡಿ ಹಣ್ಣು ತಂದು ಮಾರಾಟ ಮಾಡಿ ಜೀವನ ನಡೆಸಬೇಕಿದೆ. ಬೆಳಿಗ್ಗೆ 6ರಿಂದ 10 ಗಂಟೆವರೆಗೂ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿದ್ದು, ಅತ್ಯಲ್ಪ ಸಮಯದಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗದೆ ಹಣ್ಣುಗಳು ಕೊಳೆಯುತ್ತಿವೆ. ಇದರಿಂದ ನಷ್ಟ ಅನುಭವಿಸುತ್ತಿದ್ದೇವೆ. ಸರ್ಕಾರ ಬೀದಿ ಬದಿ ವ್ಯಾಪಾರಿಗಳ ಕಷ್ಟಗಳಿಗೆ ಸ್ಪಂದಿಸಬೇಕು.

-ಶ್ರೀನಿವಾಸ್, ಮಧುಗಿರಿ ಬೀದಿ ಬದಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT