ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಪಿಸಿಆರ್ ಪ್ರಯೋಗಾಲಯದ ಅವ್ಯವಸ್ಥೆ

ವಿಳಂಬವಾಗುತ್ತಿದೆ ಕೋವಿಡ್‌ ಫಲಿತಾಂಶ
Last Updated 16 ಮೇ 2021, 17:02 IST
ಅಕ್ಷರ ಗಾತ್ರ

ತಿಪಟೂರು: ತಾಲ್ಲೂಕಿನ ಸಾರ್ವಜನಿಕರಿಗೆ ತ್ವರಿತವಾಗಿ ಸೇವೆ ಒದಗಿಸಲು ಕೋವಿಡ್-19 ಆರ್‌ಟಿಪಿಸಿಆರ್ ಪ್ರಯೋಗಾಲಯ ಪ್ರಾರಂಭಿಸಲಾಗಿದೆ. ಆದರೆ ಹಲವು ಬಾರಿ ಕೆಟ್ಟುನಿಂತು ಫಲಿತಾಂಶ ದೊರಕುವಲ್ಲಿ ವಿಳಂಬವಾಗುತ್ತಿದೆ.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆರ್‌ಟಿಪಿಸಿಆರ್ ಪ್ರಯೋಗಾಲಯವನ್ನು ₹70 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು, ನವಂಬರ್ 20ರಂದು ಉದ್ಘಾಟಿಸಿದ್ದರು. ಪ್ರಯೋಗಾಲಯ ಪ್ರಾರಂಭವಾಗಿ ಆರು ತಿಂಗಳಲ್ಲಿ ಹಲವು ಬಾರಿ ಕೆಟ್ಟು ಹೋಗಿದ್ದು, ಫಲಿತಾಂಶ ನೀಡುವುದು ತಡವಾಗಿತ್ತು. ಸಾರ್ವಜನಿಕರು ಸ್ಯಾಪ್ ನೀಡಿ ನಾಲ್ಕೈದು ದಿನವಾದರೂ ತಡವಾಗುತ್ತಿದೆ. ಹಲವರಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಾಗ ಪರೀಕ್ಷೆಗೆ ಒಳಪಟ್ಟರೆ ಸೋಕಿತ ಮೃತಪಟ್ಟ ನಂತರದಲ್ಲಿ ಫಲಿತಾಂಶ ಬಂದಿರುವ ಉದಾಹರಣೆಗಳು ಬಹಳಷ್ಟಿವೆ. ಕೋವಿಡ್‌ ಪರೀಕ್ಷೆಗೆ ನೀಡಿದ್ದ ವ್ಯಕ್ತಿಯ ಫಲಿತಾಂಶ ಬಾರದೆ ಮೃತಪಟ್ಟವರನ್ನು ಕೋವಿಡ್‌ ಸೋಂಕಿತರು ಎಂದು ನಮೂದು ಮಾಡಲು ಸಾಧ್ಯವಾಗದೇ ಇರುವುದರಿಂದ ನೀಡುವ ವರದಿಯಲ್ಲಿ ಸಾವಿನ ಸಂಖ್ಯೆಯಲ್ಲಿ ವ್ಯತ್ಯಯವಾಗುತ್ತಿದೆ.

ಕಳೆದ ತಿಂಗಳು ಎಂಟು ದಿನ ಆರ್‌ಟಿಪಿಸಿಆರ್ ಪ್ರಯೋಗಾಲಯ ಘಟಕ ಕೆಟ್ಟುಹೋಗಿ 12 ಸಾವಿರಕ್ಕೂ ಅಧಿಕ ಗಂಟಲುದ್ರವ ಮಾದರಿಗಳು ಹಾಗೆಯೇ ಉಳಿದು, ಅನೇಕರಿಗೆ ಫಲಿತಾಂಶವೇ ದೊರಕಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ ಭೇಟಿ ನೀಡಿ ಸಮರ್ಪಕ ಕಾರ್ಯನಿರ್ವಹಣೆಗೆ ತಾಕೀತು ಮಾಡಿದ್ದಾರೆ.

ತಂತ್ರಜ್ಞರ ಕೊರತೆ: ಪ್ರಯೋಗಾಲಯದಲ್ಲಿರುವ ಘಟಕವನ್ನು ಬಳಕೆ ಮಾಡಲು ಅಗತ್ಯವಿರುವ ತಂತ್ರಜ್ಞರ ಕೊರತೆಯಿದೆ. ಒಬ್ಬರೇ ತಂತ್ರಜ್ಞರಿದ್ದಾರೆ. ಕೊರೊನಾ ಪ್ರಾರಂಭದಿಂದ ಇದುವರೆಗೂ ರಜೆ ತೆಗೆದುಕೊಳ್ಳದೇ ಕಾರ್ಯನಿರ್ವಹಿಸುತ್ತಿದ್ದಾರೆ. ಘಟಕದಲ್ಲಿ ಗಂಟಲದ್ರವದ ಮಾದರಿ ಹಾಕಿದಾಗ ‘ಎರರ್ ಕೋಡ್’ ಬರುತ್ತಿದೆ. ಅದನ್ನು ಸರಿಪಡಿಸಲು ಚನ್ನೈಯಿಂದ ತಂತ್ರಜ್ಞರು ಪ್ರತಿ ಬಾರಿಯೂ ಬರಬೇಕು. ಆರು ತಿಂಗಳ ಹಿಂದೆಯಷ್ಟೇ ₹70 ಲಕ್ಷ ನೀಡಿ ಖರೀದಿಸಿದ ಘಟಕ ಹಲವು ಬಾರಿ ಹಾಳಾಗಲು ಕಾರಣವೇನು ಎನ್ನುವುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಪ್ರಯೋಗಾಲಯದ ಘಟಕವು ಮೇ 14ರಿಂದ ಎರರ್ ಕೋಡ್ ತೋರಿಸುತ್ತಿತ್ತು. ಅದನ್ನು ಸರಿಪಡಿಸಲು ಚನ್ನೈನಿಂದ ತ್ರಂತ್ರಜ್ಞರು ಬರಲು ಒಂದು ದಿನ ಬೇಕು. ಶನಿವಾರ ರಾತ್ರಿ 11 ಗಂಟೆಯಾದರೂ ಘಟಕವನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಎರಡು ಸಾವಿರಕ್ಕೂ ಅಧಿಕ ಸ್ಯಾಪ್ ಇಲ್ಲಿಯೇ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT