ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮೆ ಭಗ್ನ: ಕನ್ನಡಿಗರ ಆಕ್ರೋಶ

ತುಮಕೂರು ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ
Last Updated 21 ಡಿಸೆಂಬರ್ 2021, 5:04 IST
ಅಕ್ಷರ ಗಾತ್ರ

ತುಮಕೂರು: ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವುದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ನಗರದ ಬಿಜಿಎಸ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಧರಣಿ ನಡೆಸಿಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಪುಂಡಾವನ್ನು ಖಂಡಿಸಿದರು. ಎಂಇಎಸ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಂಇಎಸ್ ಕಾರ್ಯಕರ್ತರು ಒಂದಲ್ಲೊಂದು ಸಮಸ್ಯೆ ಸೃಷ್ಟಿಸುತ್ತಲೇ ಇದ್ದಾರೆ. ರಾಜ್ಯದ ನೆಲದಲ್ಲಿ ಇದ್ದುಕೊಂಡು ಇಂತಹ ಪುಂಡಾಟ ನಡೆಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡು, ಮುಂದಿನ ದಿನಗಳಲ್ಲಿ ಎಂಇಎಸ್ ಕಾರ್ಯಕರ್ತರನ್ನು ನಿಯಂತ್ರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಶಂಕರ್, ‘ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿರುವ ಎಂಇಎಸ್ ಸಂಘಟನೆ ನಿಷೇಧಿಸಬೇಕು. ಈ ಕೃತ್ಯದಲ್ಲಿ ಭಾಗಿಯಾದವರನ್ನು ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿದರು.

ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಘುರಾಮ್, ‘ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕು. ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಬೆಳಗಾವಿ ಸುವರ್ಣಸೌಧದ ಮುಂದೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಮಾಡಬೇಕು. ಬೆಳಗಾವಿ, ಕರ್ನಾಟಕದ ಅವಿಭಾಜ್ಯ ಅಂಗ. 7 ಕೋಟಿ ಕನ್ನಡಿಗರ ಸ್ವತ್ತು. ಸರ್ಕಾರದ ಸವಲತ್ತುಗಳನ್ನು ಪಡೆದು ಈ ರೀತಿಯ ಪುಂಡಾಟಿಕೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.

ಕನ್ನಡ ಪರ ಸಂಘಟನೆ ಮುಖಂಡ ಧನಿಯಾಕುಮಾರ್, ‘ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ, ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.

ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಆರ್.ಸುರೇಶ್, ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಬೇಕು ಎಂದು ಆಗ್ರಹಿಸಿದರು. ರಾಯಣ್ಣನ ಪ್ರತಿಮೆ ವಿರೂಪಗೊಳಿಸಿರುವುದನ್ನು ಖಂಡಿಸಿದರು. ಇಂತಹ ಘಟನೆ ನಡೆಯದಂತೆ ರಾಜ್ಯ ಸರ್ಕಾರ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಕುರುಬರ ಸಂಘಟನೆ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಯ ಕರ್ನಾಟಕ ಸಂಘಟನೆಯ ಅರುಣ್‍ಕುಮಾರ್, ಕನ್ನಡ ವಿಜಯ ಸೇನೆಯ ಅಧ್ಯಕ್ಷ ಸುಧೀರ್, ಗೌರವಾಧ್ಯಕ್ಷ ಮಹದೇವಣ್ಣ, ಆನಂದ್, ಕುರುಬರ ಸಂಘದ ರಾಜಣ್ಣ, ಮುಖಂಡರಾದ ಸೋಮಶೇಖರ್, ಗಿರೀಶ್‍ಗೌಡ, ಪ್ರಸನ್ನ, ಯಲ್ಲೇಶ್‍ಗೌಡ, ಪ್ರಕಾಶ್, ಸಂಗೋಳಿ ರಾಯಣ್ಣ ವೇದಿಕೆಯ ರಮೇಶ್, ರಾಜು, ಭಾಗ್ಯಲಕ್ಷ್ಮಿ, ಸುಕನ್ಯ, ಎನ್.ರಾಜು, ಯೋಗೀಶ್, ಗೂಳೂರು ರಾಜಣ್ಣ, ಡಮರುಗ ಉಮೇಶ್ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT