ಮಂಗಳವಾರ, ಅಕ್ಟೋಬರ್ 20, 2020
23 °C
ಹಲವು ಬೆಳೆ ಬೆಳೆದು ನಷ್ಟ ಅನುಭವಿಸಿದ್ದರು ಬೇಡತ್ತೂರು ಗ್ರಾಮದ ಶಿವಣ್ಣ

ಕೊಡಿಗೇನಹಳ್ಳಿ: ದಾಳಿಂಬೆ ಬೆಳೆ ಮೂಡಿಸಿತು ಮಂದಹಾಸ

ಗಂಗಾಧರ್ ವಿ.ರೆಡ್ಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಕೊಡಿಗೇನಹಳ್ಳಿ: ಕೃಷಿ ಸಹವಾಸವೇ ಬೇಡ ಎನ್ನುವ ಸ್ಥಿತಿಯಲ್ಲಿ ರೈತರಿರುವಾಗ ಇಲ್ಲೊಬ್ಬರು ದಾಳಿಂಬೆ ಬೆಳೆಗಾರ ಬಂಪರ್‌ ಬೆಳೆ ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿ ಬೇಡತ್ತೂರು ಗ್ರಾಮದ ಕೆ.ಶಿವಣ್ಣ ಹಲವು ಬೆಳೆ ಬೆಳೆದು ನಷ್ಟ ಅನುಭವಿಸಿದ್ದರು. ನಂತರ ದಾಳಿಂಬೆ ಬೆಳೆಗೆ ಕೈಹಾಕಿ ಯಶಸ್ವಿಯಾಗಿದ್ದಾರೆ.

ರಾಗಿ, ಭತ್ತ, ಮೆಕ್ಕೆಜೋಳ, ದ್ವಿದಳ ಧಾನ್ಯ ಮತ್ತು ವಿವಿಧ ಬಗೆಯ ತೋಟದ ಬೆಳೆಗಳಿಂದ ಕೈಸುಟ್ಟುಕೊಂಡ ಕಾರಣ ಭಿನ್ನ ಬೆಳೆ ಬೆಳೆಯಲು ಯೋಚಿಸಿದರು. ಜತೆಗೆ ಆರ್ಥಿಕವಾಗಿ ಸದೃಢರಾಗಬೇಕೆಂಬ ದೃಷ್ಟಿಯಿಂದ ತಮ್ಮ ಒಂದುವರೆ ಎಕರೆಯಲ್ಲಿ ದಾಳಿಂಬೆ ಸಸಿ ನಾಟಿ ಮಾಡಿದರು.

ಈ ಭಾಗ ಬಯಲುಸೀಮೆ ಪ್ರದೇಶವಾಗಿದ್ದು, ನೀರಿನ ಅಭಾವ ಸಾಮಾನ್ಯ. ಆದ್ದರಿಂದ 3 ವರ್ಷಗಳ ಹಿಂದೆ ಹನಿ ನೀರಾವರಿ ಪದ್ದತಿ ಅಳವಡಿಸಿದರು. ಸುಮಾರು 500 ಸಸಿಗಳನ್ನು ನಾಟಿ ಮಾಡಿದರು. ಮೊದಲ ಎರಡು ವರ್ಷ ಬೆಳೆ ಸರಿಯಾಗಿ ಬಾರದೆ ನಷ್ಟ ಉಂಟಾಗಿದ್ದರಿಂದ ಮತ್ತು ಕೊಳವೆಬಾವಿಯಲ್ಲಿ
ನೀರು ಕಡಿಮೆ ಆಗಿದ್ದರಿಂದ ಬೇಸರಗೊಂಡು ಗಿಡಗಳನ್ನು ತೆಗೆಸಲು ನಿರ್ಧರಿಸಿದ್ದರು.

ಆದರೆ, ದಾಳಿಂಬೆ ಬೆಳೆಗಾರರೊಬ್ಬರ ಸಲಹೆಯಂತೆ ಗಿಡಗಳನ್ನು ನಾಶ ಮಾಡದೆ ಆರೈಕೆ ಮಾಡಿದರು. ಪರಿಣಾಮ ಪ್ರಸಕ್ತ ವರ್ಷ ಬಂಪರ್‌ ಬೆಳೆ ಬಂದಿದೆ.

‘ಸುಮಾರು ₹1.50 ಲಕ್ಷ ಖರ್ಚು ಮಾಡಿದ್ದೆ. ಈಗ ಸುಮಾರು ₹4 ಲಕ್ಷ ಹಣ ಬಂದಿದೆ. ಬೆಳೆ ನೋಡಿ ನಗುತ್ತಿದ್ದವರ ಬಾಯಿ ಮುಚ್ಚುವಂತೆ ಆಗಿದೆ’ ಎನ್ನುತ್ತಾರೆ ದಾಳಿಂಬೆ ಬೆಳೆಗಾರ ಕೆ.ಶಿವಣ್ಣ.

***

ಪ್ರೋತ್ಸಾಹ ಧನ ಸಿಗಲಿ
ದಾಳಿಂಬೆಯಿಂದ ಹೆಚ್ಚು ಲಾಭ ಗಳಿಸಬಹುದೆಂಬ ನಿರೀಕ್ಷೆ ಬೇಡ. ಕೆಲ ಸಂದರ್ಭದಲ್ಲಿ ಲಾಭ ಬರಬಹುದು. ಆದರೆ, ಅನೇಕ ಬಾರಿ ಹಾಕಿದ ಬಂಡವಾಳ ವಾಪಸ್‌ ಬರುವುದು ಕಷ್ಟ. ಆದ್ದರಿಂದ ಈ ಬೆಳೆ ಆರ್ಥಿಕವಾಗಿ ಸದೃಢರಾಗಿರುವ ರೈತರಿಗೆ ಹೆಚ್ಚು ಸೂಕ್ತ. ಸರ್ಕಾರ ದಾಳಿಂಬೆ ಬೆಳೆಗಾರರಿಗೆ ಪ್ರೋತ್ಸಾಹ ಹಣ ನೀಡಿದರೆ ಆಗ ಸಾಮಾನ್ಯ ರೈತರು ಕೂಡ ದಾಳಿಂಬೆ ಬೆಳೆಯಲು ಧೈರ್ಯವಾಗಿ ಮುಂದೆ ಬರುತ್ತಾರೆ.
–ಕೆ.ಶಿವಣ್ಣ, ದಾಳಿಂಬೆ ಬೆಳೆಗಾರ, ಬೇಡತ್ತೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು