ಮಂಗಳವಾರ, ಜೂನ್ 15, 2021
27 °C
ಮಳೆ ಕಾರಣದಿಂದ ಆವಕ ಕುಸಿತ

ಹೆಚ್ಚುತ್ತಲೇ ಇದೆ ಬೀನ್ಸ್‌ ಬೆಲೆ

ವಿಠಲ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಮಾರುಕಟ್ಟೆಯಲ್ಲಿ ಬೀನ್ಸ್ ದರ ಹೆಚ್ಚುತ್ತಲೇ ಇದೆ. ಕೆ.ಜಿ.ಗೆ ₹120 ರಂತೆ ಮಾರಾಟ ಆಗುತ್ತಿದೆ. ಕಳೆದ ವಾರ ಬೀನ್ಸ್‌ ಕೆ.ಜಿಗೆ ₹ 60ರಂತೆ ಮಾರಾಟವಾಗುತ್ತಿತ್ತು.

ಮಳೆ ಕಾರಣದಿಂದ ಬೀನ್ಸ್ ಆವಕ ಕಡಿಮೆ ಆಗಿದೆ. 100 ಕೆಜಿ ಬೇಕಿದ್ದಲ್ಲಿ ಈಗ 30 ಕೆಜಿಯಷ್ಟು ಮಾರುಕಟ್ಟೆಗೆ ಬರುತ್ತಿದೆ. ಕ್ಯಾರೆಟ್‌ ಸ್ಥಳೀಯವಾಗಿ ಸಿಗುತ್ತಿಲ್ಲ. ಊಟಿಯಿಂದ ತರಿಸಿಕೊಳ್ಳಲಾಗುತ್ತಿದೆ. ತರಕಾರಿ, ಹಣ್ಣುಗಳಿಗೆ ಈ ವಾರ ಸ್ವಲ್ಪ ಮಟ್ಟಿನ ಬೇಡಿಕೆ ಇದೆ.

ಕೆಲವು ವಾರಗಳಿಂದ ಟೊಮೆಟೊ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿತ್ತು. ಕಳೆದ ವಾರ ಟೊಮೆಟೊ ₹10ರಂತೆ ಮಾರಾಟವಾಗುತ್ತಿತ್ತು. ಈ ವಾರ ಟೊಮೆಟೊ ₹10 ಹೆಚ್ಚಾಗಿದ್ದು ಕೆಜಿಗೆ ₹20ರಿಂದ ₹25ರವರೆಗೂ ಮಾರಾಟವಾಗುತ್ತಿದೆ. ಈ ವಾರವೂ ಟೊಮೆಟೊ ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ನುಗ್ಗೆಕಾಯಿ ಕೆ.ಜಿ.ಗೆ ₹60 ಇದೆ. ಕ್ಯಾಪ್ಸಿಕಂ ₹60ಕ್ಕೆ ಮಾರಾಟವಾಗುತ್ತಿದೆ. ಸೌತೆಕಾಯಿ ಒಂದಕ್ಕೆ ₹5ರಂತೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಎಸ್‌ಎಂಎಲ್‌ ತರಕಾರಿ ಅಂಗಡಿಯ ಗಿರೀಶ್‌.

ಈ ವಾರದಲ್ಲಿ ಸೊಪ್ಪುಗಳ ಬೆಲೆ ಹೆಚ್ಚಾಗಿದೆ. ಕಳೆದ ವಾರ ಕೊತ್ತಂಬರಿ ಸೊಪ್ಪು ಕೆ.ಜಿಗೆ ₹70ರಿಂದ ₹80ಕ್ಕೆ ಸಿಗುತ್ತಿತ್ತು. ಆದರೆ ಈ ವಾರ ಬೆಲೆ ಹೆಚ್ಚಾಗಿದ್ದು, ಕೆಜಿಗೆ ₹150ರಂತೆ ಮಾರಾಟವಾಗುತ್ತಿದೆ. ದಂಟಿನ ಸೊಪ್ಪು ₹ 40ರಿಂದ ₹45ರವರೆಗೆ, ಮೆಂತ್ಯೆ ₹80ರಿಂದ ₹100ರವರೆಗೂ ಇದೆ. ಉತ್ತಮ ಮಳೆಯಾಗುವ ಕಾರಣ ಸೊಪ್ಪಿನ ಬೆಲೆ ಹೆಚ್ಚಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸ್ಥಳೀಯ ಕಿತ್ತಳೆ ಹಾಪ್‌ಕಾಮ್ಸ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ₹120ಕ್ಕೆ ಮಾರಾಟವಾಗುತ್ತಿದೆ. ಆಮದು ಮಾಡಿಕೊಂಡ ಕಿತ್ತಳೆಗೆ ₹ 250ರ ವರೆಗೂ ಬೆಲೆ ಇದೆ. ಕಳೆದೆರಡು ವಾರಗಳಿಂದ ಹಣ್ಣಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕಳೆದ ವಾರದಂತೆ ಈ ವಾರದಲ್ಲೂ ಏಲಕ್ಕಿ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಿದೆ. ಏಲಕ್ಕಿ ಬಾಳೆಯ ದರ ಕೆ.ಜಿಗೆ ₹65 ಇದೆ. ಮುಂದಿನ ವಾರವೂ ಏಲಕ್ಕಿ ಬಾಳೆಗೆ ಇದೇ ಬೆಲೆ ಇರುವ ಸಾಧ್ಯತೆ ಇದೆ. ಬಾಳೆಹಣ್ಣು, ಪಪ್ಪಾಯ, ಮೋಸಂಬಿ ಹೆಚ್ಚು ಮಾರಾಟವಾಗುತ್ತಿದೆ ಎಂದು ಮಾಹಿತಿ ನೀಡುವರು ಹಾಪ್‌ಕಾಮ್ಸ್‌ ಮಳಿಗೆಯ ಟಿ.ಆರ್‌.ನಾಗರಾಜು.

ಬೇಳೆ ಕಾಳು ಸ್ಥಿರ: ನಗರದ ಮಂಡಿಪೇಟೆಯಲ್ಲಿ ಬೇಳೆ ಕಾಳುಗಳ ಬೆಲೆ ಸ್ಥಿರವಾಗಿದೆ. ಕಳೆದ ಕೆಲವು ವಾರಗಳಿಂದ ಯಾವುದೇ ದಿನಸಿಗಳಿಗೆ ಬೆಲೆ ಹೆಚ್ಚಾಗಿಲ್ಲ. ಪೂಜೆ, ಇತರ ಕಾರ್ಯಕ್ರಮಗಳು ಇದ್ದರೆ ಗ್ರಾಹಕರ ಸಂಖ್ಯೆ ಸ್ವಲ್ಪ ಮಟ್ಟಿಗೆ ಹೆಚ್ಚಿರುತ್ತದೆ ಎನ್ನುತ್ತಾರೆ ಮಂಡಿಪೇಟೆ ನಂಜುಂಡೇಶ್ವರ ಟ್ರೇಡರ್ಸ್‌ನ ಆರ್‌.ಎನ್‌. ನಾಗೇಂದ್ರ.

ಸ್ಥಿರವಾದ ಮಾಂಸ ಬೆಲೆ: ಈ ವಾರ ಎಳೆಯ ಕುರಿ ಮಾಂಸದ ಬೆಲೆ ಕೆ.ಜಿ ₹600, ಸಾಧಾರಣ ಮಟನ್‌ ₹ 550ಕ್ಕೆ ಮಾರಾಟವಾಗುತ್ತಿದೆ. ಮೊಟ್ಟೆ ಒಂದಕ್ಕೆ ₹4ರಂತೆ ಮಾರಾಟವಾಗುತ್ತಿದೆ. ಕೋಳಿ ಮಾಂಸ ಕೆ.ಜಿಗೆ ₹180 ದರವಿದೆ ಎನ್ನುತ್ತಾರೆ ನಿಮ್ರಾ ಚಿಕನ್‌, ಮಟನ್‌ ಸ್ಟಾಲ್‌ನ ಶಾಹಿದ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.