ಗುರುವಾರ , ಅಕ್ಟೋಬರ್ 22, 2020
22 °C
ಮೀಸಲಾತಿ ಪ್ರಕಟವಾದ ನಂತರ ಸಕ್ರಿಯರಾದ ಸದಸ್ಯರು; ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ಅಧ್ಯಕ್ಷ ಗಾದಿ ಹಾದಿ ಸುಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದು, ಈ ಸ್ಥಾನಗಳು ಬಿಜೆಪಿಗೆ ಒಲಿಯುವುದು ಬಹುತೇಕ ಖಚಿತವಾಗಿದೆ.

ನಗರಸಭೆಯಲ್ಲಿ ಒಟ್ಟು 31 ವಾರ್ಡ್‍ಗಳಿದ್ದು, ಬಿಜೆಪಿ 11, ಕಾಂಗ್ರೆಸ್‌ 9, ಜೆಡಿಎಸ್‌ 5 ವಾರ್ಡ್‌ಗಳಲ್ಲಿ ಗೆದ್ದಿತ್ತು. ಪಕ್ಷೇತರ ಅಭ್ಯರ್ಥಿಗಳು 6 ವಾರ್ಡ್‌ಗಳಲ್ಲಿ ವಿಜೇತರಾಗುವ ಮೂಲಕ ಅತಂತ್ರ ಸ್ಥತಿ ನಿರ್ಮಾಣವಾಗಿತ್ತು.

ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿಯಲು ಪಕ್ಷೇತರರ ಒಲವೇ ನಿರ್ಣಾಯಕವಾಗಿತ್ತು. ಆದರೆ ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದ ಮುಖಂಡ ಲೋಕೇಶ್ವರ ಬಿಜೆಪಿಯತ್ತ ಒಲವು ತೋರಿರುವುದು ಅಧ್ಯಕ್ಷ ಗಾದಿ ಬಿಜೆಪಿಗೆ ದೊರೆಯುವುದು ಬಹುತೇಕ ಖಚಿತವಾಗಿದೆ.

ಎಪಿಎಂಸಿ ಚುನಾವಣೆಯಲ್ಲಿ ಶಾಸಕ ಬಿ.ಸಿ.ನಾಗೇಶ್ ಮತ್ತು ಲೋಕೇಶ್ವರ ಒಗ್ಗೂಡಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅದೇ ಹೊಂದಾಣಿಕೆಯ ರಾಜಕೀಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲೂ ಮುಂದುವರೆಯಲಿದೆ. ನಗರಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಈ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು ಎನ್ನುತ್ತಿವೆ ಬಿಜೆಪಿ ಮೂಲಗಳು.

ಅಧ್ಯಕ್ಷ ಸ್ಥಾನಕ್ಕೆ ನಗರಸಭೆಗೆ ಎರಡನೇ ಬಾರಿ ಆಯ್ಕೆಯಾಗಿರುವ ರಾಮಮೋಹನ್ ಹೆಸರು ಬಹುತೇಕ ಖಚಿತವಾಗಿದೆ. ಶಾಸಕ ಬಿ.ಸಿ.ನಾಗೇಶ್ ಆಪ್ತರಾಗಿರುವ ರಾಮಮೋಹನ್‌ ಅವರು ಲೋಕೇಶ್ವರ ಅವರೊಂದಿಗೂ  ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರವಾಗಿ ಆಯ್ಕೆಯಾಗಿರುವ 13 ವಾರ್ಡ್‌ನ ಸದಸ್ಯೆ ಯಮುನಾ ಧರಣೀಶ್ ಹಾಗೂ  ಸೊಪ್ಪು ಗಣೇಶ್ ನಡುವೆ ಪೈಪೋಟಿ ಇದೆ. 19ನೇ ವಾರ್ಡ್‌ ಸದಸ್ಯ‌ ಸಂಗಮೇಶ್ ಕಳ್ಳಿಹಾಲ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಅವರ ಹೆಸರೂ ಕೇಳಿ ಬರುತ್ತಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.