ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಯ ಆಗರವಾದ ಮಾರುಕಟ್ಟೆ ಪ್ರಾಂಗಣ

Last Updated 5 ಡಿಸೆಂಬರ್ 2021, 16:29 IST
ಅಕ್ಷರ ಗಾತ್ರ

ತಿಪಟೂರು: ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ದೊರಕಿಸುವ ಉದ್ದೇಶದಿಂದ ಸ್ಥಾಪನೆಯಾದ ಹೂವು, ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಉಪಪ್ರಾಂಗಣ ಮಧ್ಯವರ್ತಿಗಳ ಹಾವಳಿಗೆ ನಲುಗಿದೆ. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದರೂ ಲಾಭವಿಲ್ಲದೆ ಸೊರಗಿದೆ ಎಂಬ ಆರೋಪ ದಟ್ಟವಾಗಿದೆ.

ನಗರದ ಹಳೇಪಾಳ್ಯ ರಸ್ತೆಯಲ್ಲಿ ನಿರ್ಮಾಣವಾಗಿರುವ ಹೂವು, ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಉಪಪ್ರಾಂಗಣ ಸುಮಾರು 2 ಎಕರೆ ವಿಸ್ತೀರ್ಣ ಹೊಂದಿದ್ದು, ₹7.80 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣವನ್ನು 2015ರಲ್ಲಿ ನಿರ್ಮಿಸಲಾಗಿದೆ.

ಮಾರುಕಟ್ಟೆಯಲ್ಲಿ ಸಂಪೂರ್ಣ ಹಿಡಿತವನ್ನು ಮಧ್ಯವರ್ತಿಗಳು ಸಾಧಿಸಿದ್ದಾರೆ. ರೈತರು ತಂದ ಯಾವುದೇ ಪದಾರ್ಥಗಳನ್ನು ಮಾರಾಟ ಮಾಡಲು ಜಾಗ ಕೊಡದೇ ಕೇವಲ ಹರಾಜಿನಲ್ಲಿ ಭಾಗವಹಿಸಲು ಆ ಬೆಲೆಗೆ ಖರೀದಿಸಲು ಒತ್ತಾಯಿಸುತ್ತಾರೆ ಎನ್ನುವುದು ರೈತರ ಆರೋಪ.

ರೈತರು ಮಾರಾಟ ಮಾಡಲು ಮಾರುಕಟ್ಟೆ ಪ್ರಾಂಗಣದಲ್ಲಿ ಜಾಗಕ್ಕಾಗಿ ಪರದಾಡುವಂತಾಗಿದೆ. ಎಲ್ಲ ಕಡೆಗಳಲ್ಲಿಯೂ ಮಧ್ಯವರ್ತಿಗಳು ಜಾಗವನ್ನು ಖಾಯಂ ಆಗಿ ನಿಗದಿ ಪಡಿಸಿಕೊಂಡಿದ್ದಾರೆ. ಇದರಿಂದಾಗಿ ರೈತರಿಗೆ ಮಾರಾಟಕ್ಕೆ ಸ್ಥಳ ಸಿಗದಂತಾಗಿದೆ. ಸ್ಥಳ ಸಿಕ್ಕರೂ ಮಾರುಕಟ್ಟೆಯ ಮೂಲೆಯಲ್ಲಿ ಮಾತ್ರ ಸಿಗುತ್ತದೆ. ಹಾಗಾಗಿ ರೈತರು
ವ್ಯಾಪಾರ ಮಾಡಲು ಸಾಧ್ಯವಾಗದೆ, ಕಡಿಮೆ ಬೆಲೆಗೆ ಮಾರಾಟ ಮಾಡಿ ಮನೆಗೆ ತೆರಳುತ್ತಾರೆ. ಎಪಿಎಂಸಿ ಅಧಿಕಾರಿಗಳು ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎನ್ನುವುದು ವ್ಯಾಪಾರಿಗಳ
ಅಳಲು.

ಅವ್ಯವಸ್ಥೆಯ ಆಗರ: ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ತರಕಾರಿ, ಹೂವು, ಹಣ್ಣು ಮಾರಾಟ ನಡೆಯುತ್ತಿದೆ. ಎಪಿಎಂಸಿ ಅಧಿಕಾರಿಗಳು ನಿಗದಿಪಡಿಸಿದ ಜಾಗದಲ್ಲಿ ಕುಳಿತು ಮಾರಾಟ ಮಾಡದೆ, ರಸ್ತೆಗಳಲ್ಲಿಯೇ ಮಾರುತ್ತಾರೆ. ಈರುಳ್ಳಿ ಮಧ್ಯವರ್ತಿಗಳು ರಾಶಿ, ರಾಶಿ ಈರುಳ್ಳಿ ತಂದು ಮಾರುಕಟ್ಟೆಯಲ್ಲಿ ಸುರಿದಿದ್ದಾರೆ. ಕೆಲವು ಕೊಳೆತ ಸ್ಥಿತಿಯಲ್ಲಿದ್ದು ದುರ್ವಾಸನೆ ಬೀರುತ್ತದೆ. ಮಾರುಕಟ್ಟೆಯಲ್ಲಿ ಸ್ವಚ್ಛತೆ‌ ಕಣ್ಮರೆಯಾಗಿದೆ.

ಮಾರುಕಟ್ಟೆಯು ದ್ವಿಚಕ್ರ ವಾಹನಗಳ ನಿಲುಗಡೆ ಸ್ಥಳವಾಗಿ ಮಾರ್ಪಟ್ಟಿದೆ. ಆದರೆ ಮಾರುಕಟ್ಟೆಯ ಹೊರಗೆ ‘ಯಾವುದೇ ವಾಹನಗಳಿಗೆ ಪ್ರವೇಶವಿಲ್ಲ’ ಎಂಬ ದೊಡ್ಡ ಬೋರ್ಡ್ ಕಾಣಸಿಗುತ್ತದೆ. ಮಾರುಕಟ್ಟೆಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಲಿ, ಸೆಕ್ಯೂರಿಟಿ ಗಾರ್ಡ್‍ಗಳಾಗಲಿ ಕಾಣ ಸಿಗುವುದಿಲ್ಲ.

ಖಾಲಿ ಉಳಿದಿರುವ ವಾಣಿಜ್ಯ ಮಳಿಗೆ: ಮಾರುಕಟ್ಟೆಯಲ್ಲಿ ಒಟ್ಟು 57 ಗೋದಾಮು ನಿರ್ಮಿಸಿದ್ದು, ಹಂಚಿಕೆ ಆಗಿರುವ ಗೋದಾಮುಗಳ ಸಂಖ್ಯೆ 22 ಮಾತ್ರ. ಉಳಿದವು ಖಾಲಿ ಇವೆ. 22 ವಾಣಿಜ್ಯ ಮಳಿಗೆಗಳನ್ನು ಹರಾಜು ಪ್ರಕ್ರಿಯೆಯಲ್ಲಿ ತಿಂಗಳ ವಂತಿಕೆಗೆ ನಿಗದಿಪಡಿಸಲಾಗಿತ್ತು. ಆದರೆ 6 ಜನ ಸುಮಾರು 8 ಮಳಿಗೆಗಳನ್ನು ಹರಾಜಿನಲ್ಲಿ ಪಡೆದು ಎಪಿಎಂಸಿ ವಿರುದ್ಧ ಕೋರ್ಟ್‍ನಲ್ಲಿ ದಾವೆ ಹೂಡಿ ತಿಂಗಳ ವಂತಿಕೆ ಕೊಡುವುದನ್ನೇ ನಿಲ್ಲಿಸಿದ್ದಾರೆ. ಇನ್ನೂ ಉಳಿದ 14 ಮಳಿಗೆಯವರು ವಂತಿಕೆ ಪಾವತಿ ಮಾಡದೇ ಬಳಸುತ್ತಿದ್ದು, ಕೆಲವರು ಸ್ವಲ್ಪ ವಂತಿಕೆಯನ್ನು ಮಾತ್ರ ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಯನಿರ್ವಹಿಸದ ಶಿಥಿಲೀಕರಣ ಘಟಕ: ಮಾರುಕಟ್ಟೆಯ ಪ್ರಾಂಗಣದಲ್ಲಿ ತರಕಾರಿ, ಹೂವು, ಹಣ್ಣುಗಳು ಕೆಡದಂತೆ ಇಡಲು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಶಿಥಿಲೀಕರಣ ಘಟಕ ಸ್ಥಾಪಿಸಲಾಗಿದೆ. ಆದರೆ ಈವರೆಗೆ ಅದು ಬಳಕೆಯಾಗಿಲ್ಲ. ಘಟಕದ ಬಾಗಿಲು ತೆರೆಯದೆ ವರ್ಷಗಳೇ ಕಳೆದಿದ್ದು, ಸರಿಯಾಗಿ ನಿರ್ವಹಣೆಯೂ ಆಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT