ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಹಿತವೇ ಜೆಡಿಎಸ್ ಗುರಿ

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆ
Last Updated 14 ಮಾರ್ಚ್ 2023, 6:12 IST
ಅಕ್ಷರ ಗಾತ್ರ

ಕುಣಿಗಲ್: ‘ನನಗೆ ಮುಖ್ಯಮಂತ್ರಿ, ಮಂತ್ರಿಯಾಗುವ ಆಸೆಯಿಲ್ಲ. ಹಿಂದೂ, ಮುಸ್ಲಿಂಮರು ಒಂದೇ ತಾಯಿಯ ಮಕ್ಕಳಂತೆ ಬಾಳುವುದನ್ನು ನೋಡುವ ಆಸೆಯಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಧ್ವನಿ ಎತ್ತುವವರಿಲ್ಲ. ಧ್ವನಿ ಎತ್ತುವವರನ್ನು ದಮನಗೊಳಿಸುವ ಯತ್ನ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ನಿರಂತರವಾಗಿ ನಡೆಯುತ್ತಿದೆ. ಜೆಡಿಎಸ್ ಮಾತ್ರ ಅಲ್ಪಸಂಖ್ಯಾತರ ಪರವಾಗಿ ನಿಲ್ಲುವ ಪಕ್ಷವಾಗಿದೆ ಎಂದರು.

‘ಡಿ.ಕೆ. ಶಿವಕುಮಾರ್ ಪಕ್ಷದ ಅಲ್ಪಸಂಖ್ಯಾತರನ್ನು ಗೌರವಿಸುವುದನ್ನೇ ಕಲಿಯಲಿಲ್ಲ. ಕೋಟ್ಯಂತರ ರೂಪಾಯಿ ಇಟ್ಟುಕೊಂಡು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇನ್ನೂ ಸಿದ್ದರಾಮಯ್ಯ ನಿಯತ್ತಿಲ್ಲದ ಮನುಷ್ಯ. ಬಾದಾಮಿಯಲ್ಲಿ ತೀವ್ರ ವಿರೋಧವಿದ್ದರೂ ಅವರ ಗೆಲುವಿಗೆ ಶ್ರಮಿಸಿದ ನನಗೆ ಎಂಎಲ್‌ಸಿ ಮಾಡಿದ್ದೇ ಹೆಚ್ಚು ಎಂದು ಹೀಯಾಳಿಸಿದರು. ಹಾಗಾಗಿ, ರಾಜೀನಾಮೆ ಬಿಸಾಕಿ ಹೊರಬಂದೆ’ ಎಂದು ತಿಳಿಸಿದರು.

ಇನ್ನೂ ಬಿಜೆಪಿ ಗೋರಕ್ಷಣೆ ಹೆಸರಿನಲ್ಲಿ ಹಣ ಭಕ್ಷಣೆ ಮಾಡುತ್ತಿದೆ. ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದರು.

ಪಕ್ಷದ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ನಜ್ಮಾ ನಜೀರ್ ಮಾತನಾಡಿ, 2023ರ ಚುನಾವಣೆ ನಾಡಿನ ಅಲ್ಪಸಂಖ್ಯಾತರ ಅಳಿವು, ಉಳಿವಿನ ಪ್ರಶ್ನೆಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ನ ‘ಬಿ’ ಟೀಮ್ ಕಾರಣ. ಟಿಪ್ಪು ಜಯಂತಿ, ಹಲಾಲ್ ಕಟ್, ಹಿಜಾಬ್ ಸಮಸ್ಯೆಗಳಿಂದ ಮುಸ್ಲಿಂಮರು ನೊಂದಾಗ ಧ್ವನಿ ಎತ್ತದ ಕಾಂಗ್ರೆಸ್ ಚುನಾವಣೆ ಬರುತ್ತಿರುವಾಗ ಅಲ್ಪಸಂಖ್ಯಾತರನ್ನು ಓಲೈಸಲು ಬರುತ್ತಿದೆ ಎಂದು ಟೀಕಿಸಿದರು.

ತಾಲ್ಲೂಕಿನ ಮುಸ್ಲಿಂ ಮಹಿಳೆಯರು ಕಾಂಗ್ರೆಸ್ ಶಾಸಕ ನೀಡುವ ₹ 150 ಬೆಲೆಯ ಸೀರೆ, ತವಾ ಮತ್ತು ಕುಕ್ಕರ್‌ಗಳಿಗೆ ಕೈಚಾಚಬಾರದು. ಸ್ವಾಭಿಮಾನಿಗಳಾಗಿ ಅಲ್ಪಸಂಖ್ಯಾತರ ಹಿತ ಬಯಸುವ ಜೆಡಿಎಸ್‌ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್‌ ಅಭ್ಯರ್ಥಿ ಡಿ. ನಾಗರಾಜಯ್ಯ, ‘ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ತಪ್ಪಿಸುವ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದ್ದರ ಕಾರಣ ಜೆಡಿಎಸ್ ಸೋಲು ಅನುಭವಿಸಿತ್ತು’ ಎಂದು ತಿಳಿಸಿದರು.

ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಆಂಜನಪ್ಪ, ಮುಖಂಡರಾದ ಇಮ್ರಾನ್ ಆರಿಫ್ ಪಾಷಾ, ಶಂಶೇರ್ ಖಾನ್, ಜಿಯಾ ಉಲ್ಲಾ, ಲಿಯಾಖತ್, ಅನ್ಸರ್ ಪಾಷಾ, ಆತೀಕ್, ಸುಭಾನ್ ಖುರೇಷಿ, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎನ್. ಜಗದೀಶ್, ಡಾ.ರವಿ ಡಿ. ನಾಗರಾಜಯ್ಯ, ತರಿಕೆರೆ ಪ್ರಕಾಶ್, ಕೆ.ಎಲ್. ಹರೀಶ್, ರಂಗಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT