ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕನಾಯಕನಹಳ್ಳಿ | ತೀನಂಶ್ರೀ ಭವನ: ದಶಕ ಕಳೆದರೂ ಮುಗಿಯದ ಕಾಮಗಾರಿ

ಆಚಾರ್ಯ ತೀನಂಶ್ರೀ ಭವನ ಉದ್ಘಾಟನೆಯಾಗಿದ್ದರೂ, ಪೂರ್ಣಗೊಳ್ಳದ ಮೂಲ ಸೌಕರ್ಯಗಳ ಕೆಲಸ
ಸೈಯ್ದ್ ಹುಸೇನ್ ಬಿ.ಎಸ್.
Published 19 ಆಗಸ್ಟ್ 2024, 7:08 IST
Last Updated 19 ಆಗಸ್ಟ್ 2024, 7:08 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಪಟ್ಟಣದ ಆಚಾರ್ಯ ತೀನಂಶ್ರೀ ಭವನದಲ್ಲಿ ಹತ್ತು ವರ್ಷಗಳಿಂದ ನಿರಂತರವಾಗಿ ಕಾಮಗಾರಿ ನಡೆಯುತ್ತಲೇ ಇದ್ದು, ಇಲ್ಲಿ ಒಂದು ಕೆಲಸ ಮುಗಿಯುವಷ್ಟರಲ್ಲಿ ಇನ್ನೊಂದು ದುರಸ್ತಿಗೆ ಬಂದಿರುತ್ತದೆ.

ಇಲ್ಲಿನ ಶೌಚಾಲಯ, ಕಮೋಡ್‌, ಸಿಂಕ್‌, ನಲ್ಲಿ, ಬಾಗಿಲು, ಸ್ವಿಚ್‌ಬಾಕ್ಸ್‌, ಲೈಟ್‌, ಪರದೆ, ಫ್ಯಾನ್‌, ತಾರಸಿಯ ಶೀಟ್‌ ಸೋರುವಿಕೆ ಸೇರಿದಂತೆ ಹಲವು ಸಮಸ್ಯೆಗಳಿವೆ.

ಈ ಹಿಂದೆ ಜೆ.ಸಿ. ಮಾಧುಸ್ವಾಮಿ ಶಾಸಕರಾಗಿದ್ದಾಗ ಕಾಮಗಾರಿ ಪೂರ್ಣಗೊಳ್ಳದೆ ತೀ.ನಂ.ಶ್ರೀ.ಭವನವನ್ನು ಆತುರಾತುರವಾಗಿ ಉದ್ಘಾಟಿಸಲಾಗಿತ್ತು. ಆದರೆ, ಭವನದ ಮೂಲ ಸೌಕರ್ಯಗಳ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ.

ಭವನದ ಕಾಮಗಾರಿ ಪೂರ್ಣಗೊಳ್ಳದಿದ್ದರೂ ದಿನಕ್ಕೆ ₹3,000 ಬಾಡಿಗೆ ಲೆಕ್ಕದಲ್ಲಿ ಭವನವನ್ನು ಈಗಾಗಲೇ ಜನ ಬಳಕೆಗೆ ನೀಡಲಾಗುತ್ತಿದೆ. ನೂರಾರು ಜನ ಸೇರುವ ದೊಡ್ಡ ಭವನಕ್ಕೆ ವಿದ್ಯುತ್ ಸಂಪರ್ಕವನ್ನೇ ಕಲ್ಪಸಿಲ್ಲ. ಅದಕ್ಕೂ ದಿನದ ಲೆಕ್ಕದಲ್ಲಿ ಬೆಸ್ಕಾಂಗೆ ಹಣ ಕಟ್ಟಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು, ‌ಆಯೋಜಕರು ಕಾರ್ಯಕ್ರಮ ನಡೆಸಬೇಕಾದ ಅನಿವಾರ್ಯವಿದೆ.

ಈ ಬಗ್ಗೆ ಬೆಸ್ಕಾಂ ವಿಭಾಗೀಯ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಬಿ. ಗವಿರಂಗಯ್ಯ ಅವರನ್ನು ಪ್ರಶ್ನಿಸಿದರೆ, ‘ಪುರಸಭೆ ಅಥವಾ ಲೋಕೋಪಯೋಗಿ ಇಲಾಖೆಯವರು ವಿದ್ಯುತ್ ಸಂಪರ್ಕಕ್ಕಾಗಿ ನಮ್ಮ ಇಲಾಖೆಗೆ ಇನ್ನೂ ಅರ್ಜಿ ಕೊಟ್ಟಿಲ್ಲ’ ಎನ್ನುತ್ತಾರೆ.

ಲೋಕೋಪಯೋಗಿ ಎಂಜಿನಿಯರ್ ಎಸ್.ಎನ್. ತಿಮ್ಮಣ್ಣ ಅವರನ್ನು ವಿಚಾರಿಸಿದರೆ, ಭವನದಲ್ಲಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲು ಈಗಾಗಲೇ ಯೋಜನೆ ರೂಪಿಸಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಕಾಮಗಾರಿಗಳು ಪ್ರಾರಂಭವಾಗಲಿವೆ. ಭವನದ ಭದ್ರತೆಗಾಗಿ ಸುತ್ತ ಕಾಂಪೌಂಡ್ ನಿರ್ಮಿಸಲು ಜುಲೈ 2ರಂದು ಶಾಸಕ ಸಿ.ಬಿ. ಸುರೇಶ್ ಬಾಬು ಭೂಮಿಪೂಜೆ ನಡೆಸಿದ್ದಾರೆ. ಜನರೇಟರ್ ಸೇರಿದಂತೆ ವ್ಯವಸ್ಥಿತ ಸೌಕರ್ಯ ಹಾಗೂ ಸಭಾಂಗಣಕ್ಕೆ ಅಗತ್ಯವಾದ ಹೆಚ್ಚುವರಿ ಲೈಟ್‌ಗಳನ್ನು ಅಳವಡಿಸಲಾಗುವುದು ಎಂದರು.

ರಂಗ-ಪ್ರದರ್ಶನಕ್ಕೆ ಸೂಕ್ತ ವ್ಯವಸ್ಥೆ ಇಲ್ಲ: ಲೈಟಿಂಗ್ ರೂಮ್‌ ನಿರ್ಮಿಸಲಾಗಿದೆ. ಲೈಟಿಂಗ್ ವಿನ್ಯಾಸಕ್ಕೆ ಅಗತ್ಯ ವಸ್ತುಗಳಿಲ್ಲ. ಕೇವಲ ಒಂದಷ್ಟು ಎಲ್‌ಇಡಿ ಲೈಟ್‌ಗಳನ್ನು ಕಟ್ಟಿ ಬಿಡಲಾಗಿದೆ. ಸಭಾಂಗಣದ ಹೌಸ್‌ಲೈಟ್‌ಗಳು ಹತ್ತಾರಿವೆ. ಆದರೆ ಇವು ರಂಗ ಪ್ರದರ್ಶನಕ್ಕೆ ಅನುಕೂಲವಾಗಿಲ್ಲ. ಗ್ರೀನ್ ರೂಂಗಳಲ್ಲಿ ಕನಿಷ್ಠ ಸೌಕರ್ಯದ್ದೇ ಸಮಸ್ಯೆ ಇದೆ. ಸೈಡ್ ವಿಂಗ್‌ಗಳ ಪಾರ್ಶ್ವಗಳನ್ನು ಸರಿಯಾಗಿ ಕಟ್ಟಿಲ್ಲ.

ಶೌಚಾಲಯದಲ್ಲಿ ನೀರಿಲ್ಲ, ಸಭಾಂಗಣದ ಬಾಗಿಲುಗಳು ಮುರಿದಿವೆ. ಕಾರಿಡಾರ್‌ನಿಂದ ಮುಖ್ಯ ವೇದಿಕೆಗೆ ಪ್ರವೇಶಿಸಲು ನಿರ್ಮಿಸಿರುವ ಬಾಗಿಲಿಗೆ ಬೀಗ ಹಾಕಿದ್ದರೂ ಒಳಗೆ ರಂಗದ ಮೇಲೆ ನಡೆಯುತ್ತಿರುವ ವಿದ್ಯಮಾನಗಳನ್ನು ಸಲೀಸಾಗಿ ನೋಡಬಹುದಾದಷ್ಟು ದೊಡ್ಡಗಾತ್ರದ ಕಿಂಡಿ ಬಾಗಿಲಲ್ಲಿದೆ. ಈ ಬಾಗಿಲಿಗೆ ಬೀಗ ಹಾಕಿದ್ದರೂ ಸಣ್ಣಗಿರುವ ವ್ಯಕ್ತಿಗಳು ಬಾಗಿಲ ಕಿಂಡಿ ಮೂಲಕ ನುಸುಳಿ ನೇರ ತೀನಂಶ್ರೀ ರಂಗವೇದಿಕೆಗೆ ತೆರಳಬಹುದು.

ತಾಲ್ಲೂಕಿನ ಅಭಿವೃದ್ಧಿ ಹಾಗೂ ಕುಂದುಕೊರತೆಗಳನ್ನು ತ್ವರಿತವಾಗಿ ನಿವಾರಿಸಲು ತಾಲ್ಲೂಕಿನ ಎಲ್ಲ ಅಧಿಕಾರಿಗಳು ಹಾಗೂ ಶಾಸಕರು ಜನಸ್ಪಂದನ ನಡೆಸುವ ತೀನಂಶ್ರೀ ಭವನದ ಸೌಕರ್ಯಗಳನ್ನು ಪರಿಶೀಲಿಸುವ ಬಗ್ಗೆ ಯಾರಲ್ಲೂ ಕಾಳಜಿ ಕಾಣುತ್ತಿಲ್ಲ.

-ಯೋಗೀಶ್ ಶ್ಯಾವಿಗೆಹಳ್ಳಿ

ತೀನಂಶ್ರೀ ಭವನವನ್ನು ಕೇವಲ ಸಭಾಭವನವನ್ನಾಗಿ ನೋಡದೆ ನಮ್ಮ ಪಾಲಿನ ಸುಸಜ್ಜಿತ ರಂಗಮಂದಿರ ಎಂಬಂತೆ ಗೌರವದಿಂದ ಕಾಣುತ್ತೇನೆ. ಆದರೆ ಇಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಿದೆ. ಇದು ಶೀಘ್ರ ಸುಧಾರಿಸಲಿ.

-ನರಸಿಂಹಮೂರ್ತಿ ನಾಟಕ ಕಲಾವಿದ ಗಾಂಧಿನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT