ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಚಲಾವಣೆ ಬಗ್ಗೆ ವಿಶೇಷ ನಿಗಾ ಇಡಿ

ವಿಧಾನಸಭಾ ಚುನಾವಣೆ: ಕರಪತ್ರ ಮುದ್ರಣಕ್ಕೆ ನಿರ್ಬಂಧ, ನಗದು ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಸೂಚನೆ
Last Updated 17 ಮಾರ್ಚ್ 2018, 10:18 IST
ಅಕ್ಷರ ಗಾತ್ರ

ದಾವಣಗೆರೆ: ಚುನಾವಣೆ ವೇಳೆ ಬ್ಯಾಂಕ್‌ಗಳಿಂದ ಯಾರೇ ಒಂದು ದಿನದಲ್ಲಿ ₹ 1 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಅನುಮಾನಾಸ್ಪದವಾಗಿ ಹಿಂತೆಗೆದಲ್ಲಿ ಅಥವಾ ಜಮೆ ಮಾಡಿದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು. ಇಲ್ಲದಿದ್ದರೆ ಬ್ಯಾಂಕ್‌ ಅಧಿಕಾರಿಗಳು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಎಚ್ಚರಿಕೆ ನೀಡಿದರು.

ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುದ್ರಣಾಲಯದ ಮಾಲೀಕರು, ಬ್ಯಾಂಕ್ ವ್ಯವಸ್ಥಾಪಕರು ಮತ್ತು ಆದಾಯ ತೆರಿಗೆ ಅಧಿಕಾರಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಭ್ಯರ್ಥಿಗಳು ಚುನಾವಣಾ ಪ್ರಕ್ರಿಯೆಗೆಂದೇ ಬ್ಯಾಂಕಿನಲ್ಲಿ ಹೊಸ ಖಾತೆ ತೆರೆಯಬೇಕು. ಇದೇ ಖಾತೆಯಿಂದ ₹ 1 ಲಕ್ಷಕ್ಕಿಂತ ಹೆಚ್ಚು ಹಣ ಹಿಂತೆಗೆಯುವುದು ಅಥವಾ ಜಮೆ ಮಾಡುವ ಬಗ್ಗೆ ಅಭ್ಯರ್ಥಿ ಅಫಿಡವಿಟ್ ಸಲ್ಲಿಸಬೇಕು. ಚುನಾವಣಾ ಪ್ರಕ್ರಿಯೆ ಪೂರ್ತಿ ಮುಗಿಯುವವರೆಗೆ ₹ 20 ಸಾವಿರಕ್ಕಿಂತ ಮೇಲ್ಪಟ್ಟ ದಾನ, ಸಾಲ, ಇತರೆಯನ್ನು ಕ್ರಾಸ್ಡ್ ಎ.ಸಿ. ಪೇ ಚೆಕ್ ಮುಖಾಂತರ ಮಾತ್ರ ನೀಡಬೇಕು ಎಂದು ಹೇಳಿದರು.

ಎಟಿಎಂಗಳಲ್ಲಿ ಹಣ ಜಮೆ ಮಾಡಲು ಏಜೆನ್ಸಿ ಅಥವಾ ಹೊರಗುತ್ತಿಗೆ ವ್ಯಾನ್‌ಗಳು ಯಾವುದೇ ಮೂರನೇ ವ್ಯಕ್ತಿಯ ಹಣವನ್ನು ತೆಗೆದುಕೊಂಡು ಹೋಗದಂತೆ ಬ್ಯಾಂಕ್‌ನವರು ನಿಗಾ ವಹಿಸಬೇಕು. ಅಲ್ಲದೇ, ಈ ಏಜೆನ್ಸಿಗಳು ತಾವು ತೆಗೆದುಕೊಂಡು ಹೋಗುತ್ತಿರುವ ಹಣದ ಕುರಿತು ಬ್ಯಾಂಕ್‌ ನೀಡಿರುವ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಸೂಚಿಸಿದರು.

ಸಂಶಯಾಸ್ಪದ ಏಜೆನ್ಸಿ/ವ್ಯಕ್ತಿಗಳ ಬಹಿರಂಗಪಡಿಸದ ನಗದು ಕುರಿತು ಆದಾಯ ತೆರಿಗೆ ಅಧಿಕಾರಿಗಳು ವಿಚಕ್ಷಣೆ ಮತ್ತು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ವಿವರಿಸಿದರು.

ಕರಪತ್ರಗಳಲ್ಲಿ ಮಾಹಿತಿ ಮುದ್ರಿಸಿ: ಮುದ್ರಣ ಮಾಲೀಕರು ಚುನಾವಣೆ ಭಿತ್ತಿಪತ್ರ, ಕರಪತ್ರಗಳಲ್ಲಿ ಮುದ್ರಣ ಸಂಸ್ಥೆಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಮುದ್ರಿಸಿದ ಪ್ರತಿಗಳ ಸಂಖ್ಯೆಗಳ ವಿವರವನ್ನು ಕಡ್ಡಾಯವಾಗಿ ಮುದ್ರಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಖಚಿತ ಎಂದು ಹೇಳಿದರು.

ಜಿಲ್ಲೆಯ ಎಲ್ಲ ಮುದ್ರಣಾಯಲಗಳ ಮಾಲೀಕರಿಗೆ ಚುನಾವಣಾ ವೇಳಾಪಟ್ಟಿ ಹೊರಡಿಸಿದ ಮೂರು ದಿನಗಳ ಒಳಗೆ ನೋಟಿಸ್‌ ನೀಡಬೇಕಾಗಿರುತ್ತದೆ. ಈಗಾಗಲೇ ರಾಜಕೀಯ ಪಕ್ಷಗಳು ಕರಪತ್ರ ಮತ್ತು ಭಿತ್ತಿಪತ್ರಗಳ ಮುದ್ರಣ ಕಾರ್ಯದಲ್ಲಿ ತೊಡಗಿರುವುದರಿಮದ ಅಗತ್ಯ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ನಿರ್ದೇಶಿಸಿದ್ದು, ಪ್ರಜಾಪ್ರಾತಿನಿಧ್ಯ ಕಾಯ್ದೆ 1951 ರ ಕಲಂ 127 ನ್ನು ಮುದ್ರಕರು ಪಾಲಿಸಬೇಕು ಎಂದು ಸೂಚಿಸಿದರು.

ಮುದ್ರಕರು ಮುದ್ರಣ ಕಾರ್ಯ ನೀಡುವವರಿಂದ ಮುಚ್ಚಳಿಕೆ ಪಡೆದು ಸಾಕ್ಷಿದಾರರ ಸಹಿತ ಮುದ್ರಣ ಮಾಲೀಕರು ಸಹಿ ಮಾಡಿ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮುದ್ರಣ ಕಾರ್ಯ ಪೂರ್ಣಗೊಂಡ 3 ದಿನಗಳೊಳಗೆ 4 ಪ್ರತಿಗಳೊಂದಿಗೆ ಸಲ್ಲಿಸಬೇಕು ಎಂದರು.

ಮುನ್ನೆಚ್ಚರಿಕೆ ವಹಿಸಿ: ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎನ್.ಟಿ.ಯರ‍್ರಿಸ್ವಾಮಿ ಮಾತನಾಡಿ, ‘ಬ್ಯಾಂಕ್ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆ ಸಮಯದಲ್ಲಿ ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿವರಿಸಿದರು. ಗ್ರಾಮೀಣ ಭಾಗದ ಬ್ಯಾಂಕುಗಳು ಕೂಡ ತಮ್ಮ ವ್ಯವಹಾರಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕೆಂದು’ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಆದಾಯ ತೆರಿಗೆ ಅಧಿಕಾರಿ ಭಾಸ್ಕರ್, ಚುನಾವಣಾ ತಹಶೀಲ್ದಾರ್ ಎಸ್‌.ಎ.ಪ್ರಸಾದ್, ವಿವಿಧ ಪಕ್ಷಗಳ ಮುಖಂಡರು, ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು, ಮುದ್ರಣಾ ಲಯದ ಪ್ರಕಾಶಕರು, ಆದಾಯ ತೆರಿಗೆ ಅಧಿಕಾರಿಗಳು ಉಪಸ್ಥಿತರಿದ್ದರು.

‘ಸಾರ್ವಜನಿಕರಿಗೂ ಎಚ್ಚರ ಅಗತ್ಯ’
‘ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಸಾರ್ವಜನಿಕರು ತಮ್ಮ ಬ್ಯಾಂಕ್‌ ಖಾತೆಗಳಿಂದ ಹೆಚ್ಚು ಹಣ ಹಿಂತೆಗೆದಲ್ಲಿ ಅಥವಾ ಜಮೆ ಮಾಡಿದಲ್ಲಿ ದಾಖಲೆ ತೋರಿಸಬೇಕಾಗುತ್ತದೆ. ಆದ್ದರಿಂದ ಎಚ್ಚರ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಸಾರ್ವಜನಿಕ ಸ್ಥಳ ಬಳಸಿದರೆ ಜೈಲು ಶಿಕ್ಷೆ
ಚುನಾವಣಾ ಪ್ರಚಾರ, ರ‍್ಯಾಲಿ ಇತರೆ ಕಾರ್ಯಗಳಿಗೆ ಯಾವುದೇ ಶಿಕ್ಷಣ ಸಂಸ್ಥೆಗಳನ್ನು ಬಳಸಿಕೊಳ್ಳುವಂತಿಲ್ಲ. ಅಧಿಕೃತವಾಗಿ ಅನುಮತಿ ಪಡೆಯದೇ ಸಾರ್ವಜನಿಕ ಗಮನಕ್ಕೆ ಬರುವಂತಹ ಸ್ಥಳಗಳಲ್ಲಿ, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಕರಪತ್ರ, ಫ್ಲೆಕ್ಸ್ ಪ್ರದರ್ಶಿಸುವಂತಿಲ್ಲ. ಇಂತಹ ಘಟನೆಗಳು ಕಂಡುಬಂದರೆ 6 ತಿಂಗಳ ಜೈಲು ಶಿಕ್ಷೆ ಕಾದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೊಬೈಲ್‌ ವೀಕ್ಷಿಸುತ್ತಿದ್ದ ಅಧಿಕಾರಿ
ಪ್ರೇಕ್ಷಕರ ಸಾಲಿನಲ್ಲಿದ್ದ ಪ್ರೊಬೆಷನರಿ ಉಪ ವಿಭಾಗಾಧಿಕಾರಿ ಡಾ.ಮಧು ಪಾಟೀಲ್ ಸಭೆ ನಡೆಯುತ್ತಿದ್ದ ವೇಳೆ ಪದೇ ಪದೇ ಮೊಬೈಲ್‌ ವೀಕ್ಷಿಸುತ್ತಿರುವುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT