ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗವನ ಬೆಟ್ಟದಲ್ಲಿ ಅಕ್ರಮ: ತಿಪ್ಪೇರುದ್ರ ಸ್ವಾಮೀಜಿ ಗಂಭೀರ ಆರೋಪ

Last Updated 16 ಜನವರಿ 2021, 11:32 IST
ಅಕ್ಷರ ಗಾತ್ರ

ತುಮಕೂರು: ಕಪರ್ದಿ ಸಿದ್ಧಲಿಂಗ ಸ್ವಾಮೀಜಿ ಮರಣದ ನಂತರ ಬಸವಕುಮಾರ ಸ್ವಾಮೀಜಿ ಅವರನ್ನು ಯೋಗವನ ಬೆಟ್ಟಗಳ ಅಧ್ಯಕ್ಷರನ್ನಾಗಿ ನೇಮಿಸಿರುವುದು ಅಕ್ರಮ. ಇದರಲ್ಲಿ ಚಿತ್ರದುರ್ಗ ಮಾಜಿ ಶಾಸಕ ಎಸ್‌.ಕೆ.ಬಸವರಾಜನ್, ಸಿದ್ದಲಿಂಗ ಸ್ವಾಮೀಜಿ ಅವರ ಪೂರ್ವಾಶ್ರಮದ ಸಂಬಂಧಿ ಪವಿತ್ರಾ ಅವರ ಕೈವಾಡ ಇದೆ. ಇವರಿಂದ ಯೋಗವನ ಬೆಟ್ಟಗಳಲ್ಲಿ ಅಕ್ರಮಗಳು ಹೆಚ್ಚಿವೆ ಎಂದು ತಿಪ್ಪೇರುದ್ರ ಸ್ವಾಮೀಜಿ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ಧಲಿಂಗ ಸ್ವಾಮೀಜಿ ಅವರ ಬಳಿ 15ಕ್ಕೂ ಹೆಚ್ಚು ವರ್ಷ ಶಿಷ್ಯನಾಗಿದ್ದೆ. ಅರ್ಹತೆ, ಮೌಲ್ಯಗಳ ಪ್ರಕಾರ ನನ್ನನ್ನು ಉತ್ತರಾಧಿಕಾರಿಯಾಗಿ ನೇಮಿಸಬೇಕು. ಸ್ವಾಮೀಜಿ ಅವರು ಮರಣ ಹೊಂದಿದ ನಂತರ ಅವರು ಬರೆದ ಉಯಿಲು ಪತ್ರ (ವಿಲ್) ತೆಗೆದು ನೋಡಿದರೆ ಅದರಲ್ಲಿ ಉತ್ತರಾಧಿಕಾರಿ ನೇಮಕದ ಪ್ರಸ್ತಾಪವಿಲ್ಲ’ ಎಂದರು. ‌

ಈಗ ಬಸವಕುಮಾರ ಸ್ವಾಮೀಜಿ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಸಿದ್ಧಲಿಂಗ ಸ್ವಾಮೀಜಿ ಅವರ ಪೂರ್ವಾಶ್ರಮದ ಸಂಬಂಧಿ ಪವಿತ್ರಾ ಸೇರಿದಂತೆ ಕೆಲವರು ಯೋಗವನಗಳ ಬೆಟ್ಟವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ನನ್ನ ಹಾಗೂ ನನ್ನ ಪೂರ್ವಾಶ್ರಮದ ತಂದೆ ತಾಯಿಯನ್ನು ರಾತ್ರೋರಾತ್ರಿ ಅಲ್ಲಿಂದ ಹೊರ ಹಾಕಿದರು ಎಂದು ಆರೋಪಿಸಿದರು.

ಈಗಾಗಲೇ ಹಾಸನ ಜಿಲ್ಲೆಯ ಆಲೂರಿನಲ್ಲಿರುವ ಯೋಗವನ ಬೆಟ್ಟವನ್ನು ಸ್ವಾಮೀಜಿ ಅವರ ಸಂಬಂಧಿಕರು ನೋಡಿಕೊಳ್ಳುತ್ತಿದ್ದಾರೆ. ಬೇಕಿದ್ದರೆ ಅದನ್ನು ಅವರೇ ನಿರ್ವಹಿಸಲು. ನನ್ನ ಕುಣಿಗಲ್‌ ಯೋಗವನಕ್ಕೆ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

‘ಯೋಗವನ ಬೆಟ್ಟಗಳು ಸರ್ಕಾರಿ ಸ್ವತ್ತು. ಅವುಗಳನ್ನು ಟ್ರಸ್ಟ್ ನಿರ್ವಹಿಸುತ್ತಿದೆ ಅಷ್ಟೇ. ಈ ಪ್ರದೇಶದಲ್ಲಿ ಬಸವಕುಮಾರ ಸ್ವಾಮೀಜಿ ಪರಿಸರಕ್ಕೆ ಹಾನಿ ಆಗುವಂತೆ ಕುಟೀರದ ಹೆಸರಿನಲ್ಲಿ ಬಹುಮಹಡಿ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ’ ಎಂದರು.

ಈ ಹಿಂದೆ ಅವರನ್ನು ಗಾಣಿಗ ಗುರುಪೀಠಕ್ಕೆ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ ಅವರು ಅಲ್ಲಿ ಹೆಚ್ಚು ಕಾಲ ಇರಲಿಲ್ಲ. ಇದಕ್ಕೆ ಕಾರಣಗಳೇನು? ಈ ಬಗ್ಗೆ ಕೆದಕಿದರೆ ಅವರ ಅವ್ಯವಹಾರಗಳು ಬಯಲಿಗೆ ಬರುತ್ತವೆ ಎಂದು ಹೇಳಿದರು.

ಕಪರ್ದಿ ಸಿದ್ಧಲಿಂಗ ಸ್ವಾಮೀಜಿ ಅನೇಕ ಬಾರಿ ಇಂಗ್ಲಿಷ್ ಔಷಧ ಪದ್ಧತಿಯಡಿ ಚಿಕಿತ್ಸೆ ಪಡೆದಿದ್ದಾರೆ. ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿಯೇ ಮೃತಪಟ್ಟರು. ಯೋಗವನ ಟ್ರಸ್ಟಿಗಳು ಮತ್ತು ಔಷಧಿಗಳ ಬಗ್ಗೆ ಸಾರ್ವಜನಿಕರು ಅನುಮಾನ ಪಡುವಂತೆ ಆಗಿದೆ. ಬೇರೆ ಕಂಪನಿಗಳ ಔಷಧಿಗಳ ಲೇಬಲ್ ಬದಲಿಸಿ ಯೋಗವನ ಬೆಟ್ಟದ ಲೇಬಲ್ ಹಾಕಿ ಮಾರಾಟ ಮಾಡುತ್ತಿರುವ ಸಂಶಯ ಸಹ ವ್ಯಕ್ತವಾಗುತ್ತಿದೆ ಎಂದು ದೂರಿದರು.

ಮುರುಘಾ ಶರಣರ ಗಮನಕ್ಕೆ
‘ಕಪರ್ದಿ ಸಿದ್ಧಲಿಂಗ ಸ್ವಾಮೀಜಿ, ನನಗೆ ಮತ್ತು ಬಸವಕುಮಾರ ಸ್ವಾಮೀಜಿ ಅವರಿಗೆ ದೀಕ್ಷೆ ನೀಡಿದ್ದೇ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು. ಈ ವಿವಾದದ ತಿಳಿಸಲು ನಾನು ಅವರನ್ನು ಭೇಟಿಯಾಗಲು ಹೋಗಿದ್ದೆ. ಅವರು ಮಠದಲ್ಲಿ ಇರಲಿಲ್ಲ’ ಎಂದು ತಿಪ್ಪೇರುದ್ರ ಸ್ವಾಮೀಜಿ ತಿಳಿಸಿದರು.

‘ನನಗೆ ಆಗಿರುವ ಅನ್ಯಾಯಗಳನ್ನು ಮುರುಘಾ ಶರಣರಿಗೆ ತಿಳಿಸುವೆ. ನ್ಯಾಯ ಕೋರುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT