ತೋವಿನಕೆರೆ: ಗ್ರಾಮದ 70 ವರ್ಷ ಹಳೆಯದಾದ ಗಂಗಾಧರೇಶ್ವರ ಪ್ರೌಢಶಾಲೆಯನ್ನು ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವಂತೆ ಸರ್ಕಾರ ಅದೇಶಿಸಿದೆ. ಇಲ್ಲಿನ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ವರ್ಗಾಹಿಸಲಾಗಿದೆ.
ಬೆಳ್ಳಾವಿ ಕ್ಷೇತ್ರದ ಮಾಜಿ ಶಾಸಕ ದಿವಂಗತ ಟಿ.ಎಚ್. ಹನುಮಂತರಾಯಪ್ಪ 1963ರಲ್ಲಿ ಗಂಗಾಧರೇಶ್ವರ ವಿದ್ಯಾ ಸೊಸೈಟಿಯನ್ನು ನೋಂದಾಯಿಸಿ ಪ್ರೌಢಶಾಲೆ ಪ್ರಾರಂಭಿಸಿದರು.
ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ, ತುಮಕೂರು ತಾಲ್ಲೂಕಿನ ಕೋರಾ, ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಮತ್ತು ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ನೂರಾರು ವಿದ್ಯಾರ್ಥಿಗಳಿಗೆ 8ರಿಂದ 10ನೇ ತರಗತಿಯವರೆಗೂ ಶಿಕ್ಷಣ ನೀಡುತ್ತಿತು. ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 500ರ ಗಡಿ ದಾಟಿತ್ತು.
ಹೆಣ್ಣುಮಕ್ಕಳನ್ನು ಶಿಕ್ಷಣಕ್ಕಾಗಿ ದೂರದ ಊರಿಗೆ ಕಳುಹಿಸಲು ಪೋಷಕರು ಇಷ್ಟ ಪಡುತ್ತಿರಲಿಲ್ಲ. ಅಂತಹ ಸಾವಿರಾರು ಹೆಣ್ಣುಮಕ್ಕಳಿಗೆ ಈ ಪ್ರೌಢಶಾಲೆ ಶಿಕ್ಷಣ ನೀಡಿತ್ತು.ಟಿ.ಎಸ್.ವಿವೇಕಾನಂದ, ಹಳೆಯ ವಿದ್ಯಾರ್ಥಿ
20 ಕಿ.ಮೀ ವ್ಯಾಪ್ತಿಯಲ್ಲಿ ಕೆಸ್ತೂರು ಬಿಟ್ಟರೆ ಬೇರೆ ಪ್ರೌಢಶಾಲೆ ಇರಲಿಲ್ಲ. ಸುತ್ತಮುತ್ತಲಿನ ಹೆಣ್ಣು ಮಕ್ಕಳಿಗೆ ಪ್ರೌಢಶಾಲೆ ಶಿಕ್ಷಣಕ್ಕೆ ಈ ಶಾಲೆ ಆಸರೆಯಾಗಿತ್ತು.
1963ರಿಂದ 1994ರವರೆಗೆ 31 ವರ್ಷ ಮುಖ್ಯ ಶಿಕ್ಷಕನ್ನಾಗಿ ಕೆಲಸ ಮಾಡಿದೆ. ಶಿಕ್ಷಣ ಪಡೆಯಲು ಸುತ್ತಲಿನ 10 ಕಿ.ಮೀನಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಶಾಲೆ ನೂರು ವರ್ಷ ತಲುಪಬಹುದು ಎನ್ನುವ ಅಸೆಯಿತ್ತು.ಕೆ.ಪಿ.ರಾಜಣ್ಣ, ಕೊರಟಗೆರೆ
ಶಾಲೆ ಮೇಲ್ವಿಚಾರಕರು, ಶಿಕ್ಷಕರು ಮತ್ತು ಸಿಬ್ಬಂದಿ ನಡುವೆ ಹೊಂದಾಣಿಕೆಯಾಗದೆ ಪ್ರವೇಶಕ್ಕೆ ಬರುವವರನ್ನು ಬೇಡ ಎಂದು ಹೇಳಿ ಹಿಂದಕ್ಕೆ ಕಳುಹಿಸಿರುವ ಘಟನೆಗಳೂ ನಡೆದಿದ್ದವು.
ಶಿಕ್ಷಣ ಇಲಾಖೆಯವರು ಹಲವು ಬಾರಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಈಗ ವಿದ್ಯಾರ್ಥಿಗಳ ತೀವ್ರ ಕೊರತೆಯಿಂದ ಶಾಲೆಯ ಬಾಗಿಲು ಮುಚ್ಚಿದೆ.
ಹೊಂದಾಣಿಕೆ ಕೊರತೆ
ಸುತ್ತಮುತ್ತಲಿನ 15 ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಈ ಪ್ರೌಢಶಾಲೆಗೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದರು. ಈಗ ಎಲ್ಲ ಕಡೆಗಳಲ್ಲಿ ಪ್ರೌಢಶಾಲೆ ಪ್ರಾರಂಭವಾಗಿವೆ. 8ನೇ ತರಗತಿ ಸೇರಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ತೀವ್ರ ಕುಸಿದಿದೆ. ಶಾಲೆ ಶಿಕ್ಷಕರು ಮತ್ತು ಸಿಬ್ಬಂದಿ ನಡುವೆ ಹೊಂದಾಣಿಕೆ ಕೊರತೆ ಹೆಚ್ಚಾಗಿ ಸಂಸ್ಥೆ ಮುಚ್ಚುವ ಹಂತ ತಲುಪಿತು. ಸರ್ಕಾರ ನಿಗದಿ ಪಡಿಸಿರುವ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆದರೆ ಮತ್ತೆ ಶಾಲೆ ತೆರೆಯಬಹುದು. ಟಿ.ಎಚ್.ರಮೇಶ್ ಸಂಸ್ಥೆಯ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.