ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಮಹಾನಗರ ಪಾಲಿಕೆ ಟ್ರೇಡ್ ಲೈಸೆನ್ಸ್‌ ತೆರಿಗೆ ಶೇ 5ರಷ್ಟು ಹೆಚ್ಚಳ

ಆಸ್ತಿ ತೆರಿಗೆ ಕಡಿತಕ್ಕೆ ಒತ್ತಡ; ಸರ್ಕಾರಕ್ಕೆ ಪತ್ರ
Last Updated 25 ಆಗಸ್ಟ್ 2020, 14:48 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆಗೆ ಆದಾಯ ಸಂಗ್ರಹ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ವ್ಯಾಪಾರ ಪರವಾನಿಗೆ (ಟ್ರೇಡ್ ಲೈಸೆನ್ಸ್‌) ತೆರಿಗೆ ದರದ ಮೂಲ ಮೊತ್ತದಲ್ಲಿ ಶೇ 5ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಯಿತು.

ಮೇಯರ್ ಫರೀದಾ ಬೇಗಂ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಟ್ರೇಡ್ ಲೈಸೆನ್ಸ್‌ ದಂಡ ಶುಲ್ಕದ ಪ್ರಮಾಣವನ್ನು ಶೇ 30ರಷ್ಟಕ್ಕೆ ಸಿಮೀತಗೊಳಿಸುವುದು, ಜಾಹೀರಾತು ದರವನ್ನು ಶೇ 5ರಿಂದ 10ರಷ್ಟು ಹೆಚ್ಚಿಸಲು ಸದಸ್ಯರು ಒಪ್ಪಿಗೆ ನೀಡಿದರು.

ಲಾಂಡ್ರಿ, ಡ್ರೈ ಕ್ಲೀನಿಂಗ್, ಕ್ಷೌರಿಕರ ಅಂಗಡಿಗಳಿಗೆ ಪರವಾನಿಗೆ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಯಿತು.

ಆಸ್ತಿ ತೆರಿಗೆ ಹೆಚ್ಚಳಕ್ಕೆ ವಿರೋಧ: ಸಾರ್ವಜನಿಕರ ಆಸ್ತಿ ತೆರಿಗೆಯನ್ನು ಶೇ 15ರಷ್ಟು ಹೆಚ್ಚಳ ಮಾಡಿರುವುದಕ್ಕೆ ಪಾಲಿಕೆ ಸದಸ್ಯ ಮನು ಸೇರಿದಂತೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಲಾಕ್‌ಡೌನ್‌ನಿಂದಾಗಿ ಉದ್ಯೋಗವಿಲ್ಲದೆ ತೀವ್ರ ಸಂಕಷ್ಟದಲ್ಲಿರುವವರಿಗೆ ತೆರಿಗೆ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಸಭೆಯಲ್ಲಿ ಇದಕ್ಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರೂ ಶೇ 15ರಷ್ಟು ಹೆಚ್ಚಿಸಿರುವುದು ಏಕೆ ಎಂದು ಪ್ರಶ್ನಿಸಿದರು. ‘ನಿಮಗೆ ಹೇಗೆ ಬೇಕೋ ಹಾಗೆ ತೆರಿಗೆ ನಿರ್ಧರಿಸುವುದಾದರೆ ಸಭೆ ಏಕೆ ನಡೆಸುತ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತೆ ರೇಣುಕಾ, ‘ಪ್ರತಿ 3 ವರ್ಷಗಳಿಗೊಮ್ಮೆ ತೆರಿಗೆ ದರ ಪರಿಷ್ಕರಿಸುವ ನಿಯಮವಿದೆ. ಕೊರೊನಾಗಿಂತ ಮುಂಚೆಯೇ ತೆರಿಗೆ ದರ ಹೆಚ್ಚಿಸಬೇಕಿತ್ತು’ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ, ತೆರಿಗೆ ಹೆಚ್ಚಿಸದಂತೆ ಸದಸ್ಯರು ಪಟ್ಟುಹಿಡಿದರು. ಸದಸ್ಯರ ಒತ್ತಾಯಕ್ಕೆ ಮಣಿದ ಆಯುಕ್ತರು, ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ಸಂಗ್ರಹ ಗುರಿ: ಟ್ರೇಡ್ ಲೈಸೆನ್ಸ್‌ ತೆರಿಗೆಯನ್ನು ಶೇ 100ರಷ್ಟು ಸಂಗ್ರಹಿಸಬೇಕು. ಇದಕ್ಕಾಗಿ ಪಾಲಿಕೆಯಲ್ಲಿ ಪ್ರತ್ಯೇಕ ತೆರಿಗೆ ಸಂಗ್ರಹ ಕೌಂಟರ್ ತೆರೆಯಬೇಕು ಎಂದು ಸದಸ್ಯರು ಆಗ್ರಹಿಸಿದರು.

ಅಂಬೇಡ್ಕರ್ ಪುತ್ಥಳಿ ನಿರ್ಮಾಣ: ಪಾಲಿಕೆ ಆವರಣದಲ್ಲಿ ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಿಸುವ ಕುರಿತು ಕೆಲ ಸದಸ್ಯರು ಪ್ರಸ್ತಾಪಿಸಿದಾಗ, ಕೆಲ ಸದಸ್ಯರು ಪ್ರತಿಕ್ರಿಯಿಸಿ, ‘ಈಗಾಗಲೇ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಸ್ವಾಮೀಜಿ ಪುತ್ಥಳಿ ನಿರ್ಮಿಸಲಾಗುತ್ತಿದೆ. ಹಾಗಾಗಿ ಅಂಬೇಡ್ಕರ್ ಪುತ್ಥಳಿ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಮೇಯರ್ ಸೇರಿದಂತೆ ಬಹುತೇಕ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಇದಕ್ಕೆ ಸರ್ಕಾರದಿಂದ ಅನುಮತಿ ಪಡೆಯುವುದಾಗಿ ಆಯುಕ್ತರು ತಿಳಿಸಿದರು.

ಪೌರಕಾರ್ಮಿಕರಿಗೆ ನೀಡುತ್ತಿರುವ ಸುರಕ್ಷಾ ಸಾಧನಗಳು ಕಳಪೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸದಸ್ಯೆ ನಳಿನಾ ಇಂದ್ರಕುಮಾರ್ ಆಗ್ರಹಿಸಿದರು.

₹40 ಕೋಟಿ ಖೋತಾ

ಪಾಲಿಕೆ ಅಧಿಕಾರಿಗಳು ಕೇವಲ ಸಾರ್ವಜನಿಕರು, ಉದ್ದಿಮೆದಾರರಿಂದ ತೆರಿಗೆ ಸಂಗ್ರಹಿಸುವುದು ಬಿಟ್ಟರೆ ಹೊಸದಾಗಿ ಆದಾಯ ವೃದ್ಧಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಬೆಸ್ಕಾಂ, ಸ್ಮಾರ್ಟ್‌ಸಿಟಿ ಸೇರಿದಂತೆ ದೂರವಾಣಿ ಕಂಪನಿಗಳು ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆದು ನಗರ ಹಾಳುಮಾಡುತ್ತಿವೆ. ಅವರಿಂದ ನಿಯಮಬದ್ಧವಾಗಿ ಶುಲ್ಕ ಪಡೆದಿದ್ದರೆ ₹40 ಕೋಟಿಯಿಂದ ₹50 ಕೋಟಿ ಆದಾಯ ಪಾಲಿಕೆಗೆ ಸಂಗ್ರಹವಾಗುತಿತ್ತು. ಆದರೆ, ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ. ಮೊದಲು ಅವರಿಂದ ಶುಲ್ಕ ಸಂಗ್ರಹಿಸಿದ ನಂತರವೇ ಕೆಲಸ ಮುಂದುವರಿಯಲು ಅವಕಾಶ ನೀಡಬೇಕು ಎಂದು ಪಟ್ಟುಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ‘ಶಿವಮೊಗ್ಗ, ಕಲಬುರ್ಗಿ, ದಾವಣಗೆರೆಯಲ್ಲಿ ಯಾವ ರೀತಿ ಶುಲ್ಕ ನಿಗದಿಪಡಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡು, ನಂತರ ಶುಲ್ಕ ಸಂಗ್ರಹಿಸಲಾಗುವುದು’ ಎಂದರು.

ನಗರದಲ್ಲಿ ಹಂದಿ ಸಾಕಾಣಿಕೆ ನಿಷಿದ್ಧ

ನಗರದಲ್ಲಿ ಹಂದಿಗಳ ಹಾವಳಿಯಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸದಸ್ಯರು ಸಭೆಯಲ್ಲಿ ಚರ್ಚಿಸಿದರು.

‘ಹಂದಿಗಳನ್ನು ಸ್ವಂತ ಶೆಡ್‌ಗಳಲ್ಲಿ ಸಾಕಬೇಕು ಎಂಬ ನಿಯಮವಿದೆ. ಬೀದಿಗೆ ಬಿಡುವುದು ಕಾನೂನು ಬಾಹಿರ. ಈ ಹಿಂದೆ ನಗರದ ಹೊರವಲಯದ ಅಜ್ಜಗೊಂಡನಹಳ್ಳಿಯಲ್ಲಿ ಸಾಕಾಣಿಕೆಗೆ ಜಾಗ ಮೀಸಲಿಟ್ಟಿದ್ದರೂ, ಅಲ್ಲಿಗೆ ಹೋಗದೆ ನಗರದಲ್ಲೇ ಜಾಗ ನೀಡಲು ಕೇಳಿಕೊಳ್ಳುತ್ತಿದ್ದಾರೆ. ನಗರ ಬೆಳೆಯುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಮಧ್ಯಭಾಗದಲ್ಲಿ ಜಾಗ ನೀಡಲು ಸಾಧ್ಯವಿಲ್ಲ. ಕೇವಲ 68 ಮಂದಿಯ ಅನುಕೂಲಕ್ಕಾಗಿ 4 ಲಕ್ಷ ಜನರಿಗೆ ತೊಂದರೆ ನೀಡಲಾಗದು. ಶೆಡ್‌ನಿಂದ ಹೊರಗೆ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT