ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಾಂತರ: ಮುಖಂಡರಿಂದ ಒಗ್ಗಟ್ಟಿನ ಮಂತ್ರ

ಚಾಮರಾಜನಗರದ ಬಿಜೆಪಿ ಹಾಗೂ ಕೊಳ್ಳೇಗಾಲದ ಕಾಂಗ್ರೆಸ್ ಪಾಳೇಯದಲ್ಲಿ ದಿಢೀರ್‌ ಬೆಳವಣಿಗೆ
Last Updated 29 ಮಾರ್ಚ್ 2018, 8:29 IST
ಅಕ್ಷರ ಗಾತ್ರ

ಚಾಮರಾಜನಗರ: ಈಚೆಗೆ ಜಿಲ್ಲೆಯಲ್ಲಿ ನಡೆದ ಇಬ್ಬರು ಪ್ರಭಾವಿ ಮುಖಂಡರ ಪಕ್ಷಾಂತರದಿಂದ ಮೂಲ ಬಿಜೆಪಿ ಹಾಗೂ ಕಾಂಗ್ರೆಸ್ಸಿಗರಲ್ಲಿ ದಿಢೀರನೇ ಒಗ್ಗಟ್ಟು ಸೃಷ್ಟಿಯಾಗಿದೆ. ಈ ಒಗ್ಗಟ್ಟು ಪಕ್ಷಾಂತರ ಮಾಡಿದ ಮುಖಂಡರಿಗೆ ಸವಾಲಾಗಿ ಪರಿಣಮಿಸಿದೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಾಳೇಯದಲ್ಲಿ ಒಗ್ಗಟ್ಟು ಎಂಬುದು ಮರೀಚಿಕೆ ಎಂಬಂತಾಗಿತ್ತು. ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಜಿ.ನಿಜಗುಣರಾಜು, ಮಲ್ಲೇಶ್‌, ಕೆಲ್ಲಂಬಳ್ಳಿ ಸೋಮನಾಯಕ, ಜಿ.ಎಂ.ಗಾಡ್ಕರ್‌, ನಾಗಶ್ರೀ ಪ್ರತಾಪ್ ಹೀಗೆ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇತ್ತು. ಇದು ವರಿಷ್ಠರಿಗೆ ತಲೆನೋವಾಗಿತ್ತು.

ಇದರ ಮಧ್ಯೆ ವಿ.ಸೋಮಣ್ಣ ಮತ್ತು ಮಲ್ಲಿಕಾರ್ಜುನಪ್ಪ ಅವರ ನಡುವಿನ ಭಿನ್ನಾಭಿಪ್ರಾಯ ತಾರಕ ಸ್ವರೂಪವನ್ನೂ ಪಡೆದು ಪರಿಸ್ಥಿತಿಯನ್ನು ಬಿಗಡಾಯಿಸಿತ್ತು. ಈ ಬಾರಿಯಾದರೂ ಚಾಮರಾಜನಗರ ಕ್ಷೇತ್ರವನ್ನು ಪಡೆದು ಕೊಳ್ಳಬೇಕು ಎಂಬ ಬಿಜೆಪಿ ವರಿಷ್ಠರ ಕನಸು ಕನಸಾಗಿಯೇ ಉಳಿಯುವ ಸ್ಥಿತಿ ಉದ್ಭವಿಸಿತ್ತು.

ಪಕ್ಷಕ್ಕೆ ಬಂದ ರಾಮಚಂದ್ರ: ಕಾಂಗ್ರೆಸ್‌ ನಿಂದ ಆಯ್ಕೆಯಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ಆಗಿದ್ದ ರಾಮಚಂದ್ರ ಅವರ ಪರ ಸಂಸದ ಧ್ರುವನಾರಾಯಣ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಆದರೆ, ಶಾಸಕ ಚಿಕ್ಕಮಾದು ನಿಧನ ದಿಂದಾಗಿ ಅನುಕಂಪದ ಅಲೆಯ ಲಾಭ ಪಡೆಯಲು ಮುಂದಾದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಚಿಕ್ಕಮಾದು ಪುತ್ರ ಅನಿಲ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಟಿಕೆಟ್ ನೀಡುವ ಭರವಸೆ ನೀಡಿದರು.

ಎಚ್.ಡಿ.ಕೋಟೆ ಕ್ಷೇತ್ರದ ಟಿಕೆಟ್ ಕೈತಪ್ಪುವ ಸುಳಿವರಿತ ರಾಮಚಂದ್ರ ಸಿ.ಪಿ.ಯೋಗೇಶ್ವರ್ ಹಾಗೂ ಸೋಮಣ್ಣ ಅವರೊಂದಿಗೆ ಚರ್ಚಿಸಿ ಬಿಜೆಪಿಗೆ ಬಂದು, ಚಾಮರಾಜನಗರ ಕ್ಷೇತ್ರದ ಟಿಕೆಟ್‌ಗೆ ಲಾಭಿ ಮಾಡತೊಡಗಿದರು.

ದಿಢೀರನೇ ಆದ ಬೆಳವಣಿಗೆಗಳಿಂದ ದಿಕ್ಕು ತೋಚದವರಂತೆ ಆದ ಬಿಜೆಪಿ ಮುಖಂಡರು ಇದೀಗ ಒಗ್ಗಟ್ಟು ಪ್ರದರ್ಶಿಸಲಾರಂಭಿಸಿದ್ದಾರೆ. ವರಿಷ್ಠರ ಬಳಿ ಹೋಗಿ ಪಕ್ಷವನ್ನು ಕಟ್ಟಿದವರಿಗೆ, ವರ್ಷಾನುಗಟ್ಟಲೆ ಪಕ್ಷದಲ್ಲಿ ಇದ್ದವರಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಸರಿ ಅವರನ್ನು ಬೆಂಬಲಿಸುವುದಾಗಿ ವಾಗ್ದಾನ ಮಾಡಿದ್ದಾರೆ.

ಇದೀಗ ಪರಿಶಿಷ್ಟ ಪಂಗಡದ ಸಮಾವೇಶ ಆಯೋಜಿಸಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಆಹ್ವಾನ ನೀಡಿರುವುದು ಮೂಲ ಬಿಜೆಪಿಗರು ಮತ್ತಷ್ಟು ಒಗ್ಗಟ್ಟು ಪ್ರದರ್ಶಿಸುವುದಕ್ಕೆ ವೇದಿಕೆಯೂ ಆಗಲಿದೆ.

ರಾಮಚಂದ್ರ ಅವರಿಗೆ ಚಾಮರಾಜನಗರಕ್ಕಿಂತ ನಾಯಕ ಸಮುದಾಯ ಬಹುಸಂಖ್ಯಾತವಾಗಿರುವ ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಗೆಲ್ಲುವ ಸಾಧ್ಯತೆ ಹೆಚ್ಚು ಎಂಬ ಸಮೀಕರಣವನ್ನು ವರಿಷ್ಠರ ಬಳಿ ಮೂಲ ಬಿಜೆಪಿಗರು ಇರಿಸಿದ್ದಾರೆ. ಹೀಗಾಗಿ, ವರಿಷ್ಠರ ನಿರ್ಧಾರ ಏನಾಗುವುದು ಎಂಬ ಕುತೂಹಲ ಕಾರ್ಯಕರ್ತರಲ್ಲಿ ಮನೆಮಾಡಿದೆ.

ಕೊಳ್ಳೇಗಾಲದಲ್ಲೂ ಒಗ್ಗಟ್ಟು

ಇತ್ತ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮೂಲಕಾಂಗ್ರೆಸ್ಸಿಗರಲ್ಲಿ ಇದೇ ಕಾರಣಕ್ಕೆ ಒಗ್ಗಟ್ಟು ಮೂಡಿದೆ.ಮೊದಲಿಗೆ ಶಾಸಕ ಎಸ್‌.ಜಯಣ್ಣ, ಮಾಜಿ ಶಾಸಕ ಬಾಲರಾಜ್, ಮುಖಂಡರಾದ ಬಿ.ಪಿ.ಪುಟ್ಟಬುದ್ದಿ, ಡಿ.ಎನ್.ನಟರಾಜ್‌, ಕಿನಕನಹಳ್ಳಿ ರಾಚಯ್ಯ ಅವರು ಟಿಕೆಟ್‌ಗೆ ಲಾಭಿ ನಡೆಸಿದ್ದರು. ಇದು ವರಿಷ್ಠರಿಗೆ ನುಂಗಲಾರದ ತುತ್ತಾಗಿತ್ತು. ಆದರೆ, ಎ.ಆರ್.ಕೃಷ್ಣಮೂರ್ತಿ ಕಾಂಗ್ರೆಸ್‌ಗೆ ಬರುವ ಸೂಚನೆಯ ಅರಿತ ಇವರು ಅನಿವಾರ್ಯವಾಗಿ ಒಗ್ಗಟ್ಟು ಪ್ರದರ್ಶಿಸಿ, ನಮ್ಮಲ್ಲಿ ಯಾರಿಗಾದರೂ ಟಿಕೆಟ್ ನೀಡಿ ಎಂದು ಮನವಿ ಮಾಡಿದರು. ಆದರೆ, ಇವರ ಒಗ್ಗಟ್ಟು ಎ.ಆರ್.ಕೃಷ್ಣಮೂರ್ತಿ ಬರುವುದನ್ನು ತಡೆಯಲಾಗಲಿಲ್ಲ. ಈಚೆಗೆ ಬಂದಿದ್ದ  ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷ್ಣಮೂರ್ತಿ ಅವರನ್ನು ಬೆಂಬಲಿಸಲು ಟಿಕೆಟ್ ಆಕಾಂಕ್ಷಿತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೊನೆಕ್ಷಣದಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ಸಿಗುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಾಗದ ಸ್ಥಿತಿ ಇದೆ.

ಕೆ.ಎಸ್.ಗಿರೀಶ / ಎಸ್‌.ಪ್ರತಾಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT