ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣಕ್ಕೆ ಬರಲಿದೆ ಲಿಫ್ಟ್‌

ರ‍್ಯಾಂಪ್‌ಗೆ ಪರ್ಯಾಯವಾಗಿ ಲಿಫ್ಟ್‌ ಅಳವಡಿಕೆ; ಇನ್ನೆರಡು ತಿಂಗಳಲ್ಲಿ ಬಳಕೆಗೆ ಮುಕ್ತ?
Last Updated 5 ಡಿಸೆಂಬರ್ 2019, 9:27 IST
ಅಕ್ಷರ ಗಾತ್ರ

ತುಮಕೂರು: ಇಲ್ಲಿನ ರೈಲು ನಿಲ್ದಾಣದಲ್ಲಿ ಎರಡು ಲಿಫ್ಟ್‌ಗಳು ನಿರ್ಮಾಣವಾಗುತ್ತಿದ್ದು, ಪ್ರಯಾಣಿಕರ ಬಹುದಿನಗಳ ಬೇಡಿಕೆ ಇನ್ನೆರಡು ತಿಂಗಳಲ್ಲಿ ಈಡೇರಲಿದೆ.

ತುಮಕೂರು ರೈಲು ನಿಲ್ದಾಣದಿಂದ ನಿತ್ಯ ಸಾವಿರಾರು ಜನ ಪ್ರಯಾಣ ಬೆಳೆಸುತ್ತಾರೆ. ಹತ್ತಾರು ಜಿಲ್ಲೆಗಳಿಗೆ ಈ ನಿಲ್ದಾಣ ಸಂಪರ್ಕ ಕಲ್ಪಿಸುತ್ತದೆ. ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾರ್ಯ ಎರಡು ವರ್ಷಗಳ ಹಿಂದೆ ಆಗಿದ್ದರೂ ರ‍್ಯಾಂಪ್‌ ಅಥವಾ ಲಿಫ್ಟ್‌ ಅಳವಡಿಸಬೇಕು ಎಂಬ ಪ್ರಯಾಣಿಕರ ಬೇಡಿಕೆ ಕನಸಾಗಿಯೇ ಉಳಿದಿತ್ತು.

ಸರ್ಕಾರಿ ಕಚೇರಿ ಹಾಗೂ ನಿಲ್ದಾಣಗಳಲ್ಲಿ ರ‍್ಯಾಂಪ್‌ ಅಳವಡಿಕೆ ಕಡ್ಡಾಯ ಮಾಡಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ್ದರೂ ಅಭಿವೃದ್ಧಿಯ ವೇಳೆ ಅದನ್ನು ಗಾಳಿಗೆ ತೂರಲಾಗಿತ್ತು. ಅಲ್ಲದೆ ನಿಲ್ದಾಣದಲ್ಲಿ ಕಾಲು ಸೇತುವೆ ಪಕ್ಕದಲ್ಲಿಯೇ ಶೆಲ್ಟರ್‌ ನಿರ್ಮಾಣ ಮಾಡಿರುವುದರಿಂದ ರ‍್ಯಾಂಪ್‌ ನಿರ್ಮಾಣ ಅಸಾಧ್ಯವಾಗಿತ್ತು. ಹೀಗಾಗಿ ಈ ಪ್ರಸ್ತಾವ ನನೆಗುದಿಗೆ ಬಿದ್ದಿತ್ತು.

ಇದೀಗ ಆ ಕನಸು ಈಡೇರುವ ಕಾಲ ಸನ್ನಿಹಿತವಾಗಿದೆ. ರ‍್ಯಾಂಪ್‌ಗೆ ಪರ್ಯಾಯವಾಗಿ ಲಿಫ್ಟ್‌ ಅಳವಡಿಸಲಾಗುತ್ತಿದೆ. ಮೊದಲ ಮತ್ತು ಮೂರನೇ ಫ್ಲಾಟ್‌ಫಾರಂನಲ್ಲಿ ಲಿಫ್ಟ್‌ಗಳು ತಲೆ ಎತ್ತುತ್ತಿದ್ದು, ಕಾಮಗಾರಿ ಭರದಿಂದ ಸಾಗಿದೆ. ಅಂದುಕೊಂಡಂತೆ ಆದರೆ ಇದೇ ಜನವರಿ ಕಡೆಯ ವಾರ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಲಿಫ್ಟ್‌ಗಳು ಕಾರ್ಯಾರಂಭ ಮಾಡಲಿವೆ.

ಧ್ವಜಸ್ತಂಭ: ಅಲ್ಲದೆ ರೈಲು ನಿಲ್ದಾಣದ ಅಂದ ಹೆಚ್ಚಿಸಲು, ಪ್ರಯಾಣಿಕರಲ್ಲಿ ರಾಷ್ಟ್ರೀಯತೆ ಮತ್ತು ದೇಶಭಕ್ತಿ ಹೆಚ್ಚಿಸಲು ರಾಷ್ಟ್ರಧ್ವಜ ಸ್ತಂಭವನ್ನೂ ನಿರ್ಮಾಣ ಮಾಡಲಾಗುತ್ತಿದೆ. ನಿಲ್ದಾಣದ ಮುಂಭಾಗ ಇದು ತಲೆಎತ್ತಲಿದೆ.

ಅಂಗವಿಕಲರು, ಹಿರಿಯ ನಾಗರಿಕರಿಗೆ ಅನುಕೂಲ: ಉದ್ಯೋಗಿಗಳು, ಪರ ಊರಿಗೆ ಹೋಗುವವರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ವ್ಯಾಪಾರಿಗಳು ಹೀಗೆ ನಿತ್ಯ ಸಾವಿರಾರು ಪ್ರಯಾಣಿಕರು ರೈಲುಗಳನ್ನೇ ಆಶ್ರಯಿಸಿದ್ದಾರೆ. ಅವರೆಲ್ಲರೂ ಎರಡು ಅಥವಾ ಮೂರನೇ ಫ್ಲಾಟ್‌ಫಾರಂಗೆ ಹೋಗಲು ಮೆಟ್ಟಿಲುಗಳನ್ನೇ ಬಳಸಬೇಕು.

ವೃದ್ಧರು, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು, ಅಂಗವಿಕಲರು, ಮಕ್ಕಳಿಗೆ ಇದು ಪ್ರಯಾಸದ ಕೆಲಸ. ಅನಿವಾರ್ಯವಾಗಿ ಮೆಟ್ಟಿಲುಗಳನ್ನು ಹತ್ತಿಕೊಂಡೇ ಸಾಗಬೇಕು. ಅತಿ ಭಾರದ ಬ್ಯಾಗ್‌ ಹೊತ್ತುಕೊಂಡು ಮತ್ತೊಂದು ಅಂಕಣಕ್ಕೆ ಹೋಗುವುದು ಕಷ್ಟದ ಮಾತೇ ಸರಿ. ಬಹುತೇಕರು ಮೆಟ್ಟಿಲು ಹತ್ತಿ ಇಳಿಯಲಾರದೆ ಪ್ರಾಣದ ಹಂಗು ತೊರೆದು ರೈಲು ಹಳಿಗಳನ್ನು ದಾಟಿ ಮತ್ತೊಂದು ಅಂಕಣಕ್ಕೆ ಹೋಗುತ್ತಿದ್ದರು. ಲಿಫ್ಟ್‌ ಅಳವಡಿಸಿದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

***

ಪ್ರತಿ ಲಿಫ್ಟ್‌ ನಿರ್ಮಾಣ ವೆಚ್ಚ ₹ 60 ಲಕ್ಷದಿಂದ ₹ 80 ಲಕ್ಷ. ಹಿರಿಯ ನಾಗರಿಕರು, ಅಂಗವಿಕಲರಿಗೆ ಬಹಳ ಅನುಕೂಲ ಆಗಲಿದೆ. ಇನ್ನೆರಡು ತಿಂಗಳಲ್ಲಿ ಸಾರ್ವಜನಿಕರಿಗೆ ಮುಕ್ತಗೊಳ್ಳಲಿವೆ.
– ಕೃಷ್ಣರೆಡ್ಡಿ, ತುಮಕೂರು ರೈಲ್ವೆ ಸೀನಿಯರ್‌ ಡಿವಿಜನಲ್‌ ಕಮರ್ಷಿಯಲ್‌ ಮ್ಯಾನೇಜರ್‌

***
ಬಹುದಿನದ ಬೇಡಿಕೆಗೆ ಸ್ಪಂದನೆ
ರೈಲು ನಿಲ್ದಾಣದಲ್ಲಿ ರ‍್ಯಾಂಪ್‌ ಅಥವಾ ಲಿಫ್ಟ್‌ ಅಳವಡಿಸಬೇಕು ಎಂದು ತುಮಕೂರು ರೈಲ್ವೆ ಪ್ರಯಾಣಿಕರ ವೇದಿಕೆಯಿಂದ ಮೂರು ವರ್ಷಗಳ ಹಿಂದೆ ಸಂಸದರಾಗಿದ್ದ ಎಸ್‌.ಪಿ.ಮುದ್ದಹನುಮೇಗೌಡ ಅವರಿಗೆ ಮನವಿ ಮಾಡಲಾಗಿತ್ತು. ಅವರು ರೈಲು ನಿಲ್ದಾಣ ಅಭಿವೃದ್ಧಿಗಾಗಿ ಈಗಾಗಲೇ ಟೆಂಡರ್‌ ಕರೆದು ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಯೋಜನೆಯಲ್ಲಿ ಈ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದರು. ಅಲ್ಲದೆ ಹತ್ತು ತಿಂಗಳ ಹಿಂದೆ ನಡೆದ ಡಿಆರ್‌ಯುಸಿಸಿ (ಡಿವಿಜನಲ್‌ ರೈಲ್ವೆ ಯೂಸರ್ಸ್‌ ಕನ್ಸಲ್ಟೇಟಿವ್‌ ಕಮಿಟಿ) ಸಭೆಯಲ್ಲೂ ಲಿಫ್ಟ್‌ ಅಳವಡಿಕೆ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ನಮ್ಮ ಬಹುದಿನದ ಬೇಡಿಕೆಗೆ ರೈಲ್ವೆ ಇಲಾಖೆ ಸ್ಪಂದಿಸಿದೆ.
–ಕರಣಂ ರಮೇಶ್‌, ಕಾರ್ಯದರ್ಶಿ, ತುಮಕೂರು ರೈಲ್ವೆ ಪ್ರಯಾಣಿಕರ ವೇದಿಕೆ

***

ಇತ್ತೀಚೆಗೆ ಜನರಲ್ಲಿ ಮಂಡಿನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಂಡಿ ನೋವು ಇರುವವರು ಮೆಟ್ಟಿಲು ಹತ್ತಿ ಇಳಿಯಬೇಕೆಂದರೆ ಯಮಬಾಧೆ ಅನುಭವಿಸುತ್ತಿದ್ದರು. ಅಂತವರಿಗೆಲ್ಲ ಲಿಫ್ಟ್‌ ವರದಾನವಾಗಲಿದೆ. ವ್ಯಾಪಾರಕ್ಕಾಗಿ ನಿತ್ಯ ಸಾಮಾನು ತೆಗೆದುಕೊಂಡು ಹೋಗುವವರಿಗೂ ಅನುಕೂಲ ಆಗಲಿದೆ. ಆದಷ್ಟು ಬೇಗ ಜನರಿಗೆ ಲಭ್ಯವಾಗಲಿ.
–ರಂಗಯ್ಯ, ಪ್ರಯಾಣಿಕ, ಹಿರೇಹಳ್ಳಿ

*
ಗರ್ಭಿಣಿಯರಿಗೆ, ಅಂಗವಿಕಲರಿಗೆ, ವೃದ್ಧರಿಗೆ ಮೆಟ್ಟಿಲು ಹತ್ತಿ ಇಳಿಯುವುದು ಕಷ್ಟದ ಮಾತು. ಎಷ್ಟೋಬಾರಿ ಮೆಟ್ಟಿಲು ಹತ್ತಿ ಇಳಿಯುವುದರೊಳಗೆ ರೈಲು ತಪ್ಪಿಸಿಕೊಳ್ಳುತ್ತಿದ್ದೆವು. ಲಿಫ್ಟ್‌ ಅಳವಡಿಕೆ ಬಹುತೇಕರಿಗೆ ಸಹಕಾರಿಯಾಗಲಿದೆ.
–ಚೈತ್ರಾ, ಪಶು ವೈದ್ಯೆ, ತಿಪಟೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT