ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಟ್ರಕ್ ಟರ್ಮಿನಲ್‌ ನಿರ್ಮಾಣಕ್ಕೆ ಆಗ್ರಹ

ಸಾರಿಗೆ ದಿವಸ ಆಚರಣೆ
Published : 7 ಸೆಪ್ಟೆಂಬರ್ 2023, 7:03 IST
Last Updated : 7 ಸೆಪ್ಟೆಂಬರ್ 2023, 7:03 IST
ಫಾಲೋ ಮಾಡಿ
Comments

ತುಮಕೂರು: ಕೋವಿಡ್‌ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ ಲಾರಿ ಚಾಲಕರು ಮತ್ತು ಕ್ಲೀನರ್‌ಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಲಾರಿ ಮಾಲೀಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನವೀನ್‍ಕುಮಾರ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸಾರಿಗೆ ದಿನದ ಅಂಗವಾಗಿ ಲಾರಿ ಮಾಲೀಕರ ಸಂಘದಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರ, ಅಪಘಾತ ರಹಿತ ಚಾಲಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲಾರಿ ಚಾಲಕರು ಮತ್ತು ಕ್ಲಿನರ್‌ಗಳು ಕೊರೊನಾ ಸಮಯದಲ್ಲಿ ಇಡೀ ದೇಶಕ್ಕೆ ಅಗತ್ಯವಿರುವ ಹಣ್ಣು, ತರಕಾರಿ, ಹಾಲು ಇನ್ನಿತರ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಿದ್ದಾರೆ. ಸರ್ಕಾರ ಇವರನ್ನು ಕೋವಿಡ್‌ ವಾರಿಯರ್ಸ್‌ ಎಂದು ಘೋಷಿಸಲಿಲ್ಲ. ಅವರನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದರು.

ಲಾರಿ ಮಾಲೀಕರ ಸಂಘದ ನಿರ್ದೇಶಕ ಟಿ.ಆರ್.ಸದಾಶಿವಯ್ಯ, ‘ವರ್ಷದಿಂದ ವರ್ಷಕ್ಕೆ ತೆರಿಗೆ ಜಾಸ್ತಿಯಾಗುತ್ತಿದೆ ಹೊರೆತು ಲಾರಿ ಬಾಡಿಗೆ ಮಾತ್ರ ಹೆಚ್ಚಾಗುತ್ತಿಲ್ಲ. ಜಿಲ್ಲೆಯಲ್ಲಿ ಒಂದು ಟ್ರಕ್ ಟರ್ಮಿನಲ್‌ನ ಅಗತ್ಯವಿದ್ದು, ಜಿಲ್ಲಾ ಆಡಳಿತ ಜಾಗ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

ಶಾಸಕ ಜಿ.ಜಿ.ಜ್ಯೋತಿಗಣೇಶ್‌, ‘ಚಾಲಕರು ಮತ್ತು ಕ್ಲಿನರ್‌ಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಲಾರಿ ಮಾಲೀಕರ ಸಂಘ ಅಗತ್ಯ ಕ್ರಮಕೈಗೊಳ್ಳಬೇಕು. ಇವರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ರಾಜು, ‘ತೆರಿಗೆ ಹೆಚ್ಚಳದಿಂದ ಲಾರಿ ಮಾಲೀಕರಿಗೆ ತೊಂದರೆಯಾಗಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಅಪಘಾತಗಳನ್ನು ಕಡಿಮೆ ಮಾಡಲು ಚಾಲಕರು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು’ ಎಂದು ಸಲಹೆ ಮಾಡಿದರು.

ಅಪಘಾತ ರಹಿತ ಲಾರಿ ಚಾಲಕರಾದ ಯೋಗೀಶ್, ಪಾಂಡುರಂಗಯ್ಯ, ಚಿಕ್ಕರಂಗಯ್ಯ, ಮಹಮದ್ ಶಫಿವುಲ್ಲಾ, ಮುಬಾರಕ್, ನಿಸಾರ್‌ ಅಹ್ಮದ್‌, ಬಸವರಾಜಯ್ಯ ಅವರನ್ನು ಅಭಿನಂದಿಸಲಾಯಿತು.

ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಪರಮೇಶ್, ಮನೋವೈದ್ಯ ಕೀರ್ತಿ ಸುಂದರ್‌, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಎಂ.ವಿ.ಸುಮಾ, ಲಾರಿ ಮಾಲೀಕರ ಬಳಕೆದಾರರ ಸೌಹಾರ್ದ ಸಂಘದ ಅಧ್ಯಕ್ಷ ಎನ್.ಆರ್.ವಿಶ್ವಾರಾಧ್ಯ, ಲಾರಿ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವ ಪ್ರಸನ್ನ, ಉಪಾಧ್ಯಕ್ಷ ಅಶೋಕ್‍ಕುಮಾರ್‌ ಜೈನ್, ಕಾರ್ಯದರ್ಶಿ ಶೌಕತ್‍ವುಲ್ಲಾ ಖಾನ್, ಪದಾಧಿಕಾರಿಗಳಾದ ನಾಗಭೂಷಣ್ ಆರಾಧ್ಯ, ಶಿವರುದ್ರಾರಾಧ್ಯ, ನಟರಾಜು, ಸುರೇಶಬಾಬು, ಟಿ.ಎಸ್.ಸುರೇಶ್‌ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT