ಶನಿವಾರ, ಜನವರಿ 28, 2023
24 °C

ತುಮಕೂರು: ಸಾರಿಗೆ ನೌಕರರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ವೇತನ ಹೆಚ್ಚಳ, ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಸಂಘಟನೆ ಪ್ರಮುಖರು ನಗರದ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಯ ಮುಂಭಾಗ ಮಂಗಳವಾರ ಧರಣಿ ನಡೆಸಿದರು.

ಕೆಎಸ್‌ಆರ್‌ಟಿಸಿ ಸ್ಟಾಫ್‌, ವರ್ಕರ್ಸ್‌ ಫೆಡರೇಷನ್‌ (ಎಐಟಿಯುಸಿ), ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್‌ (ಸಿಐಟಿಯು), ಅಖಿಲ ಕರ್ನಾಟಕ ರಾಜ್ಯ ರಸ್ತೆ ನೌಕರರ ಮಹಾ ಮಂಡಳದ ಪದಾಧಿಕಾರಿಗಳು, ಕಾರ್ಮಿಕರು ಧರಣಿ ನಡೆಸಿದರು.

ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಸಾಂಕೇತಿಕವಾಗಿ ಧರಣಿ ಕೈಗೊಂಡಿದ್ದೇವೆ. ಸರ್ಕಾರ ಕೂಡಲೇ ಸ್ಪಂದಿಸಿ, ಬೇಡಿಕೆ ಈಡೇರಿಸಬೇಕು. ನೌಕರರ ಕುರಿತು ನಿರ್ಲಕ್ಷ್ಯ ಭಾವನೆ ತೋರಬಾರದು ಎಂದು ಧರಣಿ ನಿರತರು ಒತ್ತಾಯಿಸಿದರು.

ಎಂದಿನಂತೆ ಬಸ್‌ ಸಂಚಾರ: ಜಿಲ್ಲೆಯಲ್ಲಿ ಬಸ್‌ಗಳು ಎಂದಿನಂತೆ ಸಂಚರಿಸಿದವು. ನಗರದಿಂದ ಇತರೆಡೆಗೆ ತೆರಳುವ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದರು. ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಮಾತ್ರ ಧರಣಿಯಲ್ಲಿ ಭಾಗವಹಿಸಿದ್ದರು.

ವರ್ಕರ್ಸ್‌ ಫೆಡರೇಷನ್‌ನ ಅಧ್ಯಕ್ಷ ಅಕ್ತರ್‌ ಪಾಷಾ, ಕಾರ್ಯದರ್ಶಿ ಅನಂತ್‌, ನೌಕರರ ಫೆಡರೇಷನ್‌ನ ಅಧ್ಯಕ್ಷ ಎ.ಆರ್‌.ದೇವರಾಜ್‌, ಕಾರ್ಯದರ್ಶಿ ಶಮೀವುಲ್ಲಾ, ಮಹಾ ಮಂಡಳದ ಅಧ್ಯಕ್ಷ ಬಸವರಾಜ್‌, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು