ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ವೈದ್ಯನಿಂದ ಚಿಕಿತ್ಸೆ: ಕಾಲಿಗೆ ಬಾವು– ನಡೆಯಲಾಗದ ಸ್ಥಿತಿ

Last Updated 20 ಮೇ 2020, 16:46 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ: ಗ್ರಾಮದ ನಕಲಿ ವೈದ್ಯ ಬುಡ್ಡಾರೆಡ್ಡಿಹಳ್ಳಿ ವೆಂಕಟೇಶ್ ಚುಚ್ಚುಮದ್ದು ನೀಡಿ ಚಿಕಿತ್ಸೆ ಮಾಡಿದ್ದರಿಂದ ರೋಗಿಯೊಬ್ಬರ ಕಾಲು ಬಾವು ಬಂದು, ಬೊಬ್ಬೆಗಳಾಗಿ ನಡೆಯಲಾರದ ಸ್ಥಿತಿ ತಲುಪಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಜಾಲೋಡು ಗ್ರಾಮದ ಪಾತಣ್ಣ ಅವರು ಕಾಲಿನ ಗಾಯದ ಚಿಕಿತ್ಸೆಗೆಂದು ಲ್ಯಾಬ್ ತಂತ್ರಜ್ಞ ವೆಂಕಟೇಶ್ ಬಳಿ ಬಂದಿದ್ದಾರೆ. ಅವರು ಚುಚ್ಚುಮದ್ದು ನೀಡಿ ಮಾತ್ ಬರೆದುಕೊಟ್ಟು 2 ದಿನ ನುಂಗುವಂತೆ ಹೇಳಿದ್ದರು.

ಅಸ್ಪತ್ರೆಯಿಂದ ಹಳ್ಳಿಗೆ ಬಂದ ಸ್ವಲ್ಪ ಸಮಯದಲ್ಲೇ ಕಾಲು ಬಾವು ಬಂದು, ಅಲ್ಲಲ್ಲಿ ಬೊಬ್ಬೆಗಳು ಮೂಡಿವೆ. ಓಡಾಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಇದನ್ನು ಗಮನಿಸಿದ ಪಾತಣ್ಣ ಅವರ ಮಗ ತಕ್ಷಣವೇ ಹೋಬಳಿ ಕೇಂದ್ರದ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಇಂತಹ ಅನಾಹುತಕ್ಕೆ ಕಾರಣವಾದ ವೆಂಕಟೇಶ್‌ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ವಿಷಯ ತಿಳಿದ ನಕಲಿ ವೈದ್ಯ ತಕ್ಷಣ ಠಾಣೆ ಬಳಿ ಬಂದು ನಡೆದಿರುವ ಅಚಾತುರ್ಯಕ್ಕೆ ಕ್ಷಮೆ ಕೇಳಿದ್ದಾರೆ.

ಜೊತೆಗೆ ಕಾಲಿನ ಸಮಸ್ಯೆ ನಿವಾರಣೆ ಆಗುವವರೆಗೆ ತಾನೇ ಮುಂದೆ ನಿಂತು ಚಿಕಿತ್ಸೆ ಕೊಡಿಸುವುದಾಗಿ ರೋಗಿಯ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಲ್ಯಾಬ್ ಟಿಕ್ನಿಷಿಯನ್ ಕೇಂದ್ರ ತೆರೆದುಕೊಂಡಿರುವ ವೆಂಕಟೇಶ್ ಅಕ್ರಮವಾಗಿ ರೋಗಿಗಳಿಗೆ ಈ ರೀತಿ ಚುಚ್ಚುಮದ್ದು ನೀಡುವ, ದೇಹಕ್ಕೆ ಬಾಟಲಿಗಳಿಂದ ಗ್ಲೂಕೋಸ್ ಏರಿಸುವ, ಮಾತ್ರೆಗಳನ್ನು ಬರೆದುಕೊಡುವ ಕೆಲಸ ಮಾಡುತ್ತಿದ್ದಾರೆ.

ಈಚೆಗೆ ಮಧುಗಿರಿ ಉಪವಿಭಾ ಗಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ವೆಂಕಟೇಶ್‌ ಕ್ಲಿನಿಕ್‌ಗೆ ಬೀಗ ಹಾಕಿಸಿದ್ದರು. ಆದಾಗ್ಯೂ ವೆಂಕಟೇಶ್ ಲ್ಯಾಬಿನ ಪಕ್ಕದ ಮತ್ತೊಂದು ಕೊಠಡಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ಮುಂದುವರಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT