ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋಂ ಕ್ವಾರಂಟೈನ್‌’: ಕಸ ಪ್ರತ್ಯೇಕಿಸುತ್ತಿಲ್ಲ!

ಪಾಲನೆಯಾಗದ ಪೌರಾಡಳಿತ ನಿರ್ದೇಶನಾಲಯದ ಆದೇಶ; ಪೌರಕಾರ್ಮಿಕರ ಹಿತರಕ್ಷಣೆಗೆ ಧ್ವನಿ
Last Updated 4 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ಸೋಂಕು ತಗುಲಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಹಲವರನ್ನು 28 ದಿನಗಳ ಕಾಲ ಮನೆಗಳಲ್ಲಿಯೇ ನಿಗಾದಲ್ಲಿ ಇರಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಇಂತಹವರ ಮನೆಗಳ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ರಾಜ್ಯ ಪೌರಾಡಳಿತ ನಿರ್ದೇಶನಾಲಯ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ. ಆದರೆ ನಗರದಲ್ಲಿ ಈ ಸೂಚನೆ ಜಾರಿಯೇ ಆಗಿಲ್ಲ!

ಸೋಂಕಿನ ಭೀತಿಯಿಂದಾಗಿ ನಿಗಾದಲ್ಲಿರುವವರ ಮನೆಗಳಿಂದ ಕಸವನ್ನು ಪೌರಕಾರ್ಮಿಕರು ಸಾಮಾನ್ಯ ರೀತಿಯಲ್ಲೇ ಸಂಗ್ರಹಿಸುತ್ತಿದ್ದಾರೆ. ಜನರ ಸುರಕ್ಷತೆಯ ದೃಷ್ಟಿಯಿಂದ ಶಂಕಿತರ ಮನೆಗಳ ಎದುರು ‘ಹೋಂ ಕ್ವಾರಂಟೈನ್‌’ ಎಂದು ಬೋರ್ಡ್‌ ಸಹ ಹಾಕಲಾಗಿದೆ. ಈ ಬೋರ್ಡ್ ನೋಡಿಯೇ ಬಹುಮಂದಿ ಅಂತಹ ಮನೆಗಳ ಬಳಿ ಸುಳಿದಾಡಲು ಭಯಪಡುತ್ತಿದ್ದಾರೆ.

ಕೆಲವು ಜಿಲ್ಲೆಗಳಲ್ಲಿ ಆಸ್ಪತ್ರೆಗಳ ತ್ಯಾಜ್ಯ ಸಂಗ್ರಹಿಸುತ್ತಿರುವ ಖಾಸಗಿ ಸಂಸ್ಥೆಗಳಿಗೆ ಈ ಕಸ ಸಂಗ್ರಹಿಸುವ ಜವಾಬ್ದಾರಿ ವಹಿಸಲಾಗಿದೆ. ಸಂಸ್ಥೆಯ ಪ್ರತಿನಿಧಿಗಳು ಹಾಗೂ ಪೌರಕಾರ್ಮಿಕರು ಜಂಟಿಯಾಗಿ ಈ ಕೆಲಸ ಮಾಡುತ್ತಿದ್ದಾರೆ. ಆದರೆ ತುಮಕೂರು ನಗರದಲ್ಲಿ ಮಾತ್ರ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ.

ನಿಗಾದಲ್ಲಿರುವವರೇ ತಮ್ಮ ಮನೆಯ ಕಸವನ್ನು ವೈಜ್ಞಾನಿಕವಾಗಿ ಪ್ಯಾಕ್‌ ಮಾಡಿ ನೀಡಬೇಕು ಎಂದು ಪೌರಾಡಳಿತ ಇಲಾಖೆ ಸೂಚಿಸಿದೆ. ತಾಲ್ಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಈ ಕೆಲಸಗಳು ನಡೆಯುತ್ತಿವೆ. ಆದರೆ ನಗರದಲ್ಲಿ ಈ ನಿಯಮಗಳು ಪಾಲನೆಯೇ ಆಗುತ್ತಿಲ್ಲ. ಇದು ಪೌರಕಾರ್ಮಿಕರು ಮತ್ತು ನಾಗರಿಕರಲ್ಲಿ ಭಯಕ್ಕೂ ಕಾರಣವಾಗಿದೆ.

ನಿಧಿ ಬಳಕೆಗೆ ಸೂಚನೆ: ಏಪ್ರಿಲ್‌, ಮೇ ತಿಂಗಳಿಗೆ ಸಾಕಾಗುವಷ್ಟು ರಾಸಾಯನಿಕ ಖರೀದಿಸಲು, ಸೋಂಕು ತಡೆ ಕಾರ್ಯಕ್ರಮಗಳಿಗೆ ಮತ್ತು ಸ್ವಚ್ಛತಾ ಪರಿಕರ ಖರೀದಿಸಲು ಮಾತ್ರ ಮುನಿಸಿಪಲ್‌ ನಿಧಿ ಬಳಸಬೇಕು. ಪೌರಕಾರ್ಮಿಕರು, ಲೋಡರ್ಸ್‌, ಚಾಲಕರು, ಸ್ಯಾನಿಟರಿ ಸೂಪರ್‌ವೈಸರ್ಸ್‌ ಹಾಗೂ ಇತರೆ ಸ್ವಚ್ಛತಾ ಕೆಲಸಗಾರರಿಗೆ ಬೆಳಿಗ್ಗೆ 6.30ರಿಂದ 10.30ರ ವರೆಗೆ ಕೆಲಸದ ಅವಧಿಯನ್ನು ಪೌರಾಡಳಿತ ನಿರ್ದೇಶನಾಲಯ ನಿಗದಿಪಡಿಸಿದೆ.

‘ಪೌರಕಾರ್ಮಿಕರಿಗೆ ಇಂದಿಗೂ ಸೂಕ್ತವಾದ ಸುರಕ್ಷಾ ಸಾಧನ, ಸಲಕರಣೆಗಳನ್ನು ನೀಡಿಲ್ಲ. ಕೆಲವು ಕಾರ್ಮಿಕರಿಗೆ ನೀಡಿದ್ದರೂ ಅವರು ಬಳಸುತ್ತಿಲ್ಲ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಮನೆಗಳಲ್ಲಿ ನಿಗಾದಲ್ಲಿರುವವರ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಬೇಕು’ ಎಂದು ಕಾರ್ಮಿಕ ಮುಖಂಡರು ಒತ್ತಾಯಿಸುತ್ತಾರೆ.

***

ಪಾಲಿಕೆ ವೆಬ್‌ಸೈಟ್‌ನಲ್ಲಿ ಮಾಹಿತಿ

ಕೊರೊನಾ ಸೋಂಕು ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ತುಮಕೂರು ಮಹಾನಗರ ಪಾಲಿಕೆಯ ವೆಬ್‌ಸೈಟ್‌ನಲ್ಲಿ ವಿವರಗಳನ್ನು ನೀಡಲಾಗಿದೆ.

ದಿನ ಬಳಕೆ ವಸ್ತುಗಳನ್ನು ಮನೆ ಬಾಗಿಲಿಗೆ ನೀಡಲು ಸಿದ್ಧವಿರುವ ಅಂಗಡಿಗಳ ವಿಳಾಸ, ಮೊಬೈಲ್ ಸಂಖ್ಯೆ, ರಾಜ್ಯದ ಕೊರೊನಾ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆಗಳು, ಕೊರೊನಾ ವಾಚ್ ಮೊಬೈಲ್ ಆ್ಯಪ್, ಕೊರೊನಾ ಕುರಿತ ಪ್ರಶ್ನಾವಳಿ ಮತ್ತು ಉತ್ತರ ಹೀಗೆ ವಿವಿಧ ಮಾಹಿತಿಗಳನ್ನು ಅಡಕಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT