ಗುರುವಾರ , ಏಪ್ರಿಲ್ 22, 2021
22 °C
ಅಂಚೆ ಇಲಾಖೆ ಆಯೋಜಿಸಿರುವ ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನದಲ್ಲಿದೆ ಜಾಗತಿಕ ಚಹರೆ

ಅಂಚೆಚೀಟಿ ಪ್ರದರ್ಶನ | ತುಮಕೂರಿನಲ್ಲಿ ಕಿನ್ಯಾ ಸಿಂಹ, ಡೆನ್ಮಾರ್ಕ್‌ನ ಚಿಟ್ಟೆಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಆ ಸಭಾಂಗಣದಲ್ಲಿ ತಿಪಟೂರು ತೆಂಗು, ಪಶ್ಚಿಮ ಘಟ್ಟದಲ್ಲಿನ ಗಂಧದ ಮರ, ಮಹಾರಾಷ್ಟ್ರದ ಪೇಟಾ (ರುಮಾಲು), ಡೆನ್ಮಾರ್ಕ್‌ನ ಚಿಟ್ಟೆಗಳು, ಇಂಗ್ಲೆಂಡಿನಲ್ಲಿದ್ದ ಉಗಿಬಂಡಿಗಳು ಸಣ್ಣ ಚೀಟಿಗಳಲ್ಲಿ ಕಾಣಸಿಗುತ್ತವೆ. ಅವುಗಳನ್ನು ಕಣ್ತುಂಬಿಕೊಳ್ಳುವುದರ ಜತೆಗೆ ಆ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀವು ತಿಳಿಯಬಹುದು.

ಈ ಎಲ್ಲದರ ಚಿತ್ರ ಮಾಹಿತಿಯೂ ಅಂಚೆಚೀಟಿಗಳಲ್ಲಿ ಆಕರ್ಷಕವಾಗಿ ಬಿತ್ತರಗೊಂಡಿದೆ. ತುಮಕೂರು ಅಂಚೆ ವಿಭಾಗವು ವಿನಾಯಕನಗರದ ಸಿದ್ಧಿವಿನಾಯಕ ಸೇವಾ ಮಂಡಲಿಯಲ್ಲಿ ಆಯೋಜಿಸಿರುವ ‘ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ’ದಲ್ಲಿ ಇವುಗಳನ್ನು ಕಾಣಬಹುದಾಗಿದೆ.

ಸಭಾಂಗಣವನ್ನು ಪ್ರವೇಶಿಸುತ್ತಿದ್ದಂತೆ ನಿಮ್ಮನ್ನು ‘ವಾಸ್ಕೊ–ಡಿ–ಗಾಮಾ ಭಾರತಕ್ಕೆ ಜಲಮಾರ್ಗ ಶೋಧಿಸಿದ ವರ್ಷದ 400ನೇ ವರ್ಷಾಚರಣೆ’ ನೆನಪಿನಲ್ಲಿ ಪೋರ್ಚುಗಿಸರು 1898ರಲ್ಲಿ ಹೊರತಂದಿದ್ದ ಅಂಚೆ ಚೀಟಿಗಳು ಸ್ವಾಗತಿಸುತ್ತವೆ. ಅದರಲ್ಲಿ ಭಾರತದಲ್ಲಿ ಆಡಳಿತ ನಡೆಸಿದ ಪೋರ್ಚುಗಿಸ್‌ ಅಧಿಕಾರಿಗಳು, ಪೋರ್ಚ್‌ಗಲ್‌ನ ರಾಜರುಗಳ, ಆ ದೇಶದ ನಾಣ್ಯಗಳ ಚೀಟಿಗಳು ಇವೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಗೌಸ್‌ ಅಲಿ ಜಮೀರ್‌ ಆಸಕ್ತರಿಗೆ ತೋರಿಸಲು ಇವುಗಳನ್ನು ಪ್ರದರ್ಶನದಲ್ಲಿ ಇಟ್ಟಿದ್ದಾರೆ.

ಹಾಗೆ ಮತ್ತೆರಡು ಹೆಜ್ಜೆ ಮುಂದೆ ಹೋಗಿ ನೋಡಿದರೆ, ಜಗನ್ನಾಥ ಮಣಿ ಎಂಬುವವರು ಸಂಗ್ರಹಿಸಿರುವ, ದೇಶದ ಸ್ಮಾರಕಗಳು, ಸಂಗೀತ ಪರಿಕರಗಳ ಕುರಿತ ಚೀಟಿಗಳನ್ನು ನೀವು ನೋಡಬಹುದು.

1948ರಲ್ಲಿ ನಡೆದ ಒಲಂಪಿಕ್ಸ್‌ನಲ್ಲಿ ಇದ್ದ ಈಜು ಸ್ಪರ್ಧೆಗೆ ಎಂತಹ ಉಡುಪುಗಳನ್ನು ಧರಿಸಿ, ಸ್ಪರ್ಧಿಗಳು ಕೊಳಕ್ಕೆ ಜಿಗಿದಿದ್ದರು. ಆ ಕ್ರೀಡಾಕೂಟದಲ್ಲಿ ಯಾವಾವ ಲೋಹಗಳ ಪದಕಗಳನ್ನು ಪ್ರದಾನ ಮಾಡಲಾಯಿತು ಎಂಬ ಕಥೆಯನ್ನು ಇಲ್ಲಿ ಬಿತ್ತರಗೊಂಡಿರುವ ಅಂಚೆಚೀಟಿಗಳೇ ಹೇಳುತ್ತವೆ. ಅದರ ಪಕ್ಕದಲ್ಲೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ಎಂಬ ‘ಶಿಸ್ತಿನ ಸಮೂಹ’ದ ಪರಿಕಲ್ಪನೆ ಹುಟ್ಟಿಕೊಂಡಿದ್ದು ಹೇಗೆ, ಆ ಸಮೂಹದ ಸದಸ್ಯರಾದ ‘ಬುಲ್‌ಬುಲ್‌’ಗಳ ಸಮವಸ್ತ್ರಗಳು ಈ ಹಿಂದೆ ಯಾವ ರೀತಿಯಲ್ಲಿದ್ದವು. ಕಾಲಕ್ಕೆ ತಕ್ಕಂತೆ ಆ ಉಡುಪುಗಳು ಹೇಗೆ ಬದಲಾದವು ಎಂಬ ಚಿತ್ರಕಥನವನ್ನು ನೀವಿಲ್ಲಿ ಕಾಣಬಹುದು.

ದೇಶ–ವಿದೇಶದ ಹಕ್ಕಿಗಳು, ರಾಷ್ಟ್ರೀಯ ಉದ್ಯಾನಗಳು, ಸಶಸ್ತ್ರ ದಳಗಳು, ಚಿತ್ರಕಲೆ, ವ್ಯಂಗ್ಯಚಿತ್ರ, ಕರ್ನಾಟಕದ ದೇವಾಲಯಗಳು, ಸಾಂಪ್ರದಾಯಿಕ ಆಟಗಳ ಕುರಿತು ಚೀಟಿಗಳನ್ನು ನೋಡಲು ಶಾಲಾ–ಕಾಲೇಜು ಮಕ್ಕಳು ಆಸಕ್ತಿ ತೋರಿದರು.

ಭಾರತದ ವಿವಿಧ ಪ್ರದೇಶಗಳಲ್ಲಿನ ಜನರು ತಲೆಗೆ ಧರಿಸುವ ಕುಮ್ಹಾನ್‌(ಹಿಮಾಚಲದ ಟೋಪಿ), ಪಗಡಿ(ಮಹಾರಾಷ್ಟ್ರದ ರುಮಾಲು), ಫೆಂಟೊ(ಗುಜರಾತ್‌), ಪಾಗ್‌(ಬಿಹಾರ್‌), ಖಂಡ್ಕ(ಹರ್ಯಾಣ), ಪೇಟ(ಕರ್ನಾಟಕ) ಎಂಬ ಹೆಸರಿನ ವಸ್ತ್ರಗಳ ಮೇಲೆ ಬಿಡುಗಡೆಗೊಂಡಿರುವ ಅಂಚೆಚೀಟಿಗಳು ಬಹಳಷ್ಟು ಜನರ ಗಮನ ಸೆಳೆದವು. ಮೋತಿಲಾಲ್‌ ನೆಹರೂ, ಎಂ.ಜಿ.ರಾಮಚಂದ್ರನ್‌, ಸರ್ವೇಪಲ್ಲಿ ರಾಧಾಕೃಷ್ಣ, ಸುಭಾಷ್‌ಚಂದ್ರ ಬೋಸ್‌, ವಿವೇಕಾನಂದರು ತಲೆಯ ಮೇಲೆ ಭಿನ್ನವಾದ ವಸ್ತ್ರಗಳನ್ನು ಧರಿಸಿದ ಚಿತ್ರಗಳ ಚೀಟಿಗಳು ಇಲ್ಲಿವೆ. ಆಸಕ್ತರು ಇವುಗಳನ್ನು ಕುತೂಹಲದಿಂದ ವೀಕ್ಷಿಸಿದರು.

ಗ್ರಾಮೀಣ ಪ್ರದೇಶದ ಸಾಂಪ್ರದಾಯಕ ಆಟಗಳ ಚೀಟಿಗಳನ್ನು ಮಕ್ಕಳು ನೋಡುತ್ತಿದ್ದರೆ, ಹಿರಿಯ ನಾಗರಿಕರು ರಾಮಾಯಣದಲ್ಲಿನ ಸ್ವಯಂವರ, ಸೀತಾಪಹರಣದ ಚಿತ್ರಗಳ ಅಂಚೆಚೀಟಿಗಳತ್ತ ದೃಷ್ಟಿ ನೆಟ್ಟಿದ್ದರು.

ಭಾರತೀಯ ಅಂಚೆ ಇಲಾಖೆ ಹೊರತಂದಿರುವ ಅಂಚೆಚೀಟಿಗಳು ಮಾತ್ರವಲ್ಲದೆ, ನ್ಯೂಜಿಲೆಂಡ್‌, ಕೆನಡಾ, ಯು.ಎಸ್‌.ಎ., ಸ್ವಿಡ್ಜರ್‌ಲೆಂಡ್‌, ಜಪಾನ್‌, ಸಿಂಗಾಪುರದ ಸರ್ಕಾರಗಳು ಬಿಡುಗಡೆ ಮಾಡಿರುವ ಚೀಟಿಗಳನ್ನು ನೀವು ಇಲ್ಲಿ ನೋಡಲು ಅವಕಾಶವಿದೆ. ಅದರಲ್ಲಿನ ಡೆನ್ಮಾನ್‌ನ ಚಿಟ್ಟೆಗಳ ಕುರಿತು ರೂಪಿಸಿರುವ ಚೀಟಿಗಳು ನೋಡಲು ಆಹ್ವಾನಿಸುವಂತಿವೆ. ಆ ಚಿಕ್ಕ ಚೀಟಿಗಳಲ್ಲೆ ಕಿನ್ಯಾದ ಸಿಂಹ, ಉಂಗಾಂಡದ ಜಿರಾಫೆ, ಲಿಬೆರಿಯಾದ ನರಿ, ಬಾಂಗ್ಲಾದೇಶದ ಹುಲಿಗಳೂ ಬಂದಿಯಾಗಿವೆ.

‘ಆದಾಯ ಹೆಚ್ಚಿಸಲು ಯೋಚಿಸಿ’

ಈ ಅಂಚೆ ಮೇಳವನ್ನು ಉದ್ಘಾಟಿಸಿದ ಸಂಸದ ಜಿ.ಎಸ್.ಬಸವರಾಜು ಮಾತನಾಡುತ್ತ, ಇಂದಿನ ಸಂಪರ್ಕ ಕ್ರಾಂತಿಯ ಯುಗದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಅಂಚೆ ಇಲಾಖೆ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಜತೆಗೆ ಹೊಸ ಸೇವಾ–ಸೌಲಭ್ಯಗಳನ್ನು ನೀಡುವ ಮೂಲಕ ಇಲಾಖೆಯು ಜನಸಂಪರ್ಕವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಬಯಸಿದರು.

ಈ ಇಲಾಖೆಯು ಸರ್ಕಾರಕ್ಕೆ ಅತಿ ಕಡಿಮೆ ಆದಾಯ ತರುತ್ತದೆ. ಇಲ್ಲಿ ಹೊಸ ಸೇವೆಗಳನ್ನು ಪರಿಚಯಿಸಿ ಆದಾಯ ಹೆಚ್ಚಿಸಬೇಕಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.

ದಕ್ಷಿಣ ಕರ್ನಾಟಕ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಿ.ಎಸ್‌.ವಿ.ಆರ್‌.ಮೂರ್ತಿ, ಅಂಚೆ ಚೀಟಿಗಳ ಸಂಗ್ರಹ ಮತ್ತು ಪ್ರದರ್ಶನವು ಜ್ಞಾನ, ಅರಿವನ್ನು ನೀಡಿ, ಇತಿಹಾಸ, ಸಂಸ್ಕೃತಿಯನ್ನು ಪರಿಚಯಿಸುತ್ತದೆ ಎಂದು ಹೇಳಿದರು.

ಇದೇ ವೇಳೆ ಶಿವಕುಮಾರ ಸ್ವಾಮೀಜಿ, ಯಡಿಯೂರು ದೇವಸ್ಥಾನ, ತುರುವೇಕೆರೆಯ ನಾಗಲಾಪುರದ ಚನ್ನಕೇಶವ ದೇವಾಲಯ, ತಿಪಟೂರಿನ ತೆಂಗು, ಚೇಳೂರಿನ ಸಿದ್ದು ಹಲಸು ಕುರಿತು ರೂಪಿಸಿರುವ ವಿಶೇಷ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಾಯಿತು.

ಸಿದ್ದಿ ವಿನಾಯಕ ಸೇವಾ ಮಂಡಲಿಯಲ್ಲಿ ಆಯೋಜಿಸಿರುವ ಪ್ರದರ್ಶನವು ಫೆ.23ರ ವರೆಗೆ ಇರಲಿದೆ. ಬೆಳಿಗ್ಗೆ 10ರಿಂದ ಸಂಜೆ 7ರ ವರೆಗೆ ಉಚಿತ ಪ್ರವೇಶ ಇರಲಿದೆ.

ಸುಗಂಧ ಸೂಸುವ ಚೀಟಿಗಳು

ಕ್ರಮ ಸಂಖ್ಯೆ 141ನೇ ಫೇಮ್‌ನಲ್ಲಿ ಅಳವಡಿಸಿರುವ ಚೀಟಿಗಳ ಮುಂದೆ ಒಂದು ಕ್ಷಣ ಕಣ್ಣು ಮುಚ್ಚಿ ನಿಂತರೆ, ನಿಮ್ಮ ಮೂಗಿಗೆ ಶ್ರೀಗಂಧ, ಮಲ್ಲಿಗೆ, ಗುಲಾಬಿ, ಸುಗಂಧ ದ್ರವ್ಯ, ಅಗರಬತ್ತಿಯ ಸುವಾಸನೆಯು ಅನುಭವಕ್ಕೆ ಬರುತ್ತದೆ.

ಈ ಫ್ರೆಮ್‌ನಿಂದ ಕಾಫಿಯ ಸುವಾಸನೆಯೂ ಹೊಮ್ಮುತ್ತದೆ!

ವೈವಿಧ್ಯಮಯವಾದ ಚಿತ್ತಾಕರ್ಷಕ ಚೀಟಿಗಳು

ಭಾರತದ ಮಹಿಳಾ ಸಾಧಕರು, ಸಾರಿಗೆ ವ್ಯವಸ್ಥೆ ಬೆಳೆದು ಬಂದ ಬಗೆ, ವಿಮಾನಗಳು ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡ ವಿಷಯದ ಚೀಟಿಗಳನ್ನು ಈ ಪ್ರದರ್ಶನದಲ್ಲಿ ನೋಡಲು ವ್ಯವಸ್ಥೆ ಮಾಡಲಾಗಿದೆ.

ಕನ್ನಡ ಮತ್ತು ಇಂಗ್ಲಿಷ್‌ ಅಕ್ಷರಮಾಲೆಯಲ್ಲಿಯೂ ಚೀಟಿಗಳನ್ನು ಜೋಡಿಸಿದ್ದಾರೆ. ನೀವು ‘ಅ’ ಅಕ್ಷರದ ಬಳಿ ನಿಂತರೆ, ಅಬ್ದುಲ್‌ ಕಲಾಂ ಅವರ ಹೆಸರಿನಲ್ಲಿ ಹೊರತಂದಿರುವ ಚೀಟಿ ಕಾಣುತ್ತದೆ. ಇಂಗ್ಲಿಷ್‌ನ ‘ಕೆ’ ಅಕ್ಷರ ಹುಡುಕಿದರೆ, ನಿಮಗೆ ಕನ್ನಡ ಶಬ್ದಕೋಶ ರಚಿಸಿ ಫರ್ಡಿನಂಡ್‌ ಕಿಟ್ಟಲ್‌ ಕುರಿತು ತಿಳಿಯುತ್ತದೆ.

ಬಂದವರ ಮಾತು

ವಿದೇಶದ ಚೀಟಿಗಳನ್ನು ನೋಡಿದೆ. ನೂರಾರು ವರ್ಷಗಳ ಹಿಂದಿನ ಚೀಟಿಗಳನ್ನು ನೋಡಿ ಖುಷಿಯಾಯಿತು. ಸಾಮಾನ್ಯ ಜ್ಞಾನವೂ ಸ್ವಲ್ಪ ಹೆಚ್ಚಿತು ಎಂದು ಕೆಸ್ತೂರಿನ ಕೆ.ಎಲ್‌.ಸೌಮ್ಯ ಹೇಳಿದರು.

ಎಕ್ಸಿಬಿಷನ್‌ ತುಂಬಾ ಇಷ್ಟ ಆಯಿತು. ಇಲ್ಲಿ ಇರುವ ಬಹಳಷ್ಟು ಮಾಹಿತಿಯನ್ನು ನಮ್ಮ ಮಿಸ್‌ ಹೇಳೇ ಇರಲಿಲ್ಲ. ಗಾಂಧೀಜಿಯ ಚೀಟಿಗಳು ನೋಡಲು ಚಂದವಾಗಿದೆ. ನನ್ನ ಸ್ನೇಹಿತರೆಲ್ಲರನ್ನೂ ನಾಳೆ ಕರೆತರುತ್ತೇನೆ ಎಂದು ಬಟವಾಡಿ ಚೇತನಾ ವಿದ್ಯಾಮಂದಿರದ 5ನೇ ತರಗತಿ ವಿದ್ಯಾರ್ಥಿನಿ ಆಲಿಯಾ ಹೇಳಿದರು.

ಇಂಥ ಪ್ರದರ್ಶನಕ್ಕೆ ಪೋಷಕರು ಮಕ್ಕಳನ್ನು ತಪ್ಪದೆ ಕರೆತರಬೇಕು. ವರ್ಣಮಾಲೆ ಆಧರಿಸಿ ಜೋಡಿಸಿರುವ ಚೀಟಿಗಳನ್ನು ಬಹಳ ಇಷ್ಟವಾದವು ಎಂದು ಕುಣಿಗಲ್‌ನ ಶಿಕ್ಷಕ ಎನ್‌.ರುದ್ರಮುನಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು