ಬುಧವಾರ, ಏಪ್ರಿಲ್ 1, 2020
19 °C
ಅನುದಾನ ಯಾವ ಕಾರಣಕ್ಕೆ ಬೇಕು ಎಂದು ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಸಚಿವ ಮಾಧುಸ್ವಾಮಿ ಗರಂ

₹3,955 ಕೋಟಿ ಕ್ರಿಯಾ ಯೋಜನೆಗೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಕೈಗೊಳ್ಳುವ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಜಿಲ್ಲೆಯ 34 ಇಲಾಖೆಗಳಿಂದ ಕೈಗೊಳ್ಳುವ ಕಾರ್ಯಕ್ರಮಗಳು ಹಾಗೂ ಯೋಜನೆಗಳಿಗೆ ಅಗತ್ಯವಿರುವ ₹3,955.04 ಕೋಟಿ ಅನುದಾನದ ಕ್ರಿಯಾಯೋಜನೆಗೆ ಜಿಲ್ಲಾ ಯೋಜನಾ ಸಮಿತಿ ಒಪ್ಪಿಗೆ ನೀಡಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಮ್ಮ ಇಲಾಖೆಗಳಿಂದ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮ, ಯೋಜನೆಗಳು ಹಾಗೂ ಕೈಗೊಂಡಿರುವ ಯೋಜನೆಗಳ ಸಂಪೂರ್ಣ ಅನುಷ್ಠಾನಕ್ಕಾಗಿ ಅಗತ್ಯವಿರುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.

ಆರಂಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ, ‘ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಕ್ಷೇತ್ರ ನೀರು ನಿರ್ವಹಣೆಯ ಕಾರ್ಯಕ್ರಮದಡಿ ತುಂತುರು ನೀರಾವರಿ ಘಟಕಗಳಿಗೆ 2019-20ನೇ ಸಾಲಿನಲ್ಲಿ ₹ 10.44 ಕೋಟಿ ನೀಡಲಾಗಿತ್ತು. ಇದರಲ್ಲಿ ₹5.15 ಕೋಟಿ ಖರ್ಚು ಮಾಡಲಾಗಿದೆ. 2020-21ನೇ ಸಾಲಿನಲ್ಲಿ ₹16 ಕೋಟಿ ಅಗತ್ಯ ಇದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ತುಂತುರು ನೀರಾವರಿಯ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ರೈತರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ಇಲ್ಲದಿದ್ದಲ್ಲಿ ಅನುದಾನ ಸಂಪೂರ್ಣವಾಗಿ ಸದ್ಭಳಕೆಯಾಗುವುದಿಲ್ಲ. ಕಳೆದ ಬಾರಿ ನೀಡಿರುವ ಅನುದಾನ ಸಂಪೂರ್ಣವಾಗಿ ಖರ್ಚು ಮಾಡದೆ, ಇದೀಗ ಹೆಚ್ಚುವರಿ ಅನುದಾನ ಕೋರಿದರೆ ಸರ್ಕಾರಕ್ಕೆ ಏನು ಕಾರಣ ನೀಡಬೇಕು’ ಎಂದು ಪ್ರಶ್ನಿಸಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಘು, ತೋಟಗಾರಿಕೆ ಇಲಾಖೆಯ 2020-21ನೇ ಸಾಲಿಗೆ ಪ್ರಸ್ತಾವಿತ ಕಾರ್ಯಕ್ರಮಗಳಿಗೆ ₹ 84.84 ಕೋಟಿ ಹಾಗೂ ಹೆಚ್ಚುವರಿಯಾಗಿ ₹28.66 ಕೋಟಿ ಅನುದಾನದ ಅಗತ್ಯವಿದೆ ಎಂದರು.

ಸಮಾಜಕಲ್ಯಾಣ ಇಲಾಖೆ ₹87.59 ಕೋಟಿ, ಪಶುಪಾಲನಾ ಇಲಾಖೆ–₹44,58 ಕೋಟಿ, ಸಾರ್ವಜನಿಕ ಶಿಕ್ಷಣ-₹1098.77 ಕೋಟಿ, ಆರೋಗ್ಯ ಇಲಾಖೆ-₹166.90 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-₹183.37 ಕೋಟಿ, ಹೇಮಾವತಿ ನಾಲಾ ₹1130.20 ಕೋಟಿ ಸೇರಿದಂತೆ 34 ಇಲಾಖೆಗಳ ಒಟ್ಟು ₹3,955 ಕೋಟಿ ಅನುದಾನ ಕ್ರಿಯಾಯೋಜನೆಗೆ ಜಿಲ್ಲಾ ಯೋಜನಾ ಸಮಿತಿ ಒಪ್ಪಿಗೆ ನೀಡಿತು.

ಜತೆಗೆ 2020-21ನೇ ಸಾಲಿಗೆ ಹೆಚ್ಚುವರಿಯಾಗಿ ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಪಶುಪಾಲನಾ ಸೇರಿದಂತೆ ವಿವಿಧ 27 ಇಲಾಖೆಗಳ ₹1150.27 ಕೋಟಿ ಪ್ರಸ್ತಾಪಿತ ಅನುದಾನಕ್ಕೆ ಸಮಿತಿಯಲ್ಲಿ ಚರ್ಚಿಸಿ ಒಪ್ಪಿಗೆ ಸೂಚಿಸಲಾಯಿತು.

ತಾಲ್ಲೂಕುವಾರು ತರಬೇತಿ ನೀಡಿ: ಅಟಲ್ ಭೂಜಲ್ ಯೋಜನೆಯಡಿ ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಮಧುಗಿರಿ, ಕೊರಟಗೆರೆ, ಶಿರಾ ಸೇರಿದಂತೆ 6 ತಾಲ್ಲೂಕುಗಳು ಆಯ್ಕೆಯಾಗಿವೆ. ಈ ಬಗ್ಗೆ ಸಮನ್ವಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಪಂಚಾಯಿತಿ ಸದಸ್ಯರಿಗೆ ತಾಲ್ಲೂಕುವಾರು ತರಬೇತಿ ನೀಡಬೇಕು. ಇದಕ್ಕಾಗಿ ತಾಲ್ಲೂಕುವಾರು ದಿನಾಂಕಗಳನ್ನು ನಿಗದಿಪಡಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಸಿಇಒ ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಪಾಲಿಕೆ ಆಯುಕ್ತ ಭೂಬಾಲನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ತುರುವೇಕೆರೆ ಶಾಸಕ ಜಯರಾಮ್, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಇದ್ದರು.

ಡೀಮ್ಡ್‌ ಫಾರೆಸ್ಟ್: ಒಕ್ಕಲೆಬ್ಬಿಸದಂತೆ ಸೂಚನೆ

ಮುಂದಿನ ಬಗರ್‌ಹುಕುಂ ಸಮಿತಿ ಸಭೆಯಲ್ಲಿ ತೀರ್ಮಾನ ಆಗುವವರೆಗೂ ಡೀಮ್ಡ್‌ ಫಾರೆಸ್ಟ್‌ನಲ್ಲಿ ಟ್ರಂಚ್‌ ತೆಗೆಯುವುದಾಗಲಿ, ಅಲ್ಲಿನ ಜನರನ್ನು ಒಕ್ಕಲೆಬ್ಬಿಸುವುದಾಗಿ ಮಾಡಬಾರದು ಎಂದು ಜೆ.ಸಿ.ಮಾಧುಸ್ವಾಮಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್‌ ಅವರಿಗೆ ಸಭೆಯಲ್ಲಿ ಸೂಚಿಸಿದರು.

ಸೂಕ್ತ ಕಾರಣ ನೀಡಿ

ಹೆಚ್ಚುವರಿ ಅನುದಾನ ಏಕೆ? ಯಾವ ಕಾರ್ಯಕ್ರಮಗಳಿಗೆ ಬೇಕು ಎಂದು ಸೂಕ್ತ ಕಾರಣ ನೀಡದ ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು. ಕಳೆದ ಬಾರಿ ನೀಡಿರುವ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡದೆ, 2020-21ನೇ ಸಾಲಿನಲ್ಲಿ ಹೆಚ್ಚುವರಿ ಅನುದಾನ ಕೋರಿದರೆ ಹಣಕಾಸು ಇಲಾಖೆಯ ಅಧಿಕಾರಿಗಳು ನಮ್ಮನ್ನು ಪ್ರಶ್ನಿಸುವುದಿಲ್ಲವೇ?, ಅವರಿಗೆ ನಾವು ಹೇಗೆ ಉತ್ತರ ನೀಡಲು ಸಾಧ್ಯ. ಹಾಗಾಗಿ ಅಧಿಕಾರಿಗಳು ತಮಗಿಷ್ಟ ಬಂದಂತೆ ಅನುದಾನದ ಪ್ರಸ್ತಾಪ ಸಲ್ಲಿಸದೆ, ಸೂಕ್ತ ಕಾರಣ  ನೀಡಬೇಕು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)