ಸೋಮವಾರ, ಮೇ 25, 2020
27 °C
ಲಾಕ್‌ಡೌನ್‌ನಿಂದಾಗಿ ಹಣ್ಣು ಸಂಗ್ರಹಣೆ: ತೂಕ ಕುಸಿಯುವ, ಬಣ್ಣ ಬದಲಾಗುವ ಸಾಧ್ಯತೆ

‘ಕಹಿ’ಯಾದ ಹುಣಸೆ ಹಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೊರೊನಾ ಸೋಂಕಿನ ಕರಿನೆರಳಿನಿಂದಾಗಿ ಹುಣಸೆ ವ್ಯಾಪಾರಕ್ಕೂ ಈ ಬಾರಿ ಪೆಟ್ಟು ಬಿದ್ದಿದೆ.

ಹುಣಸೆ ಬೆಳೆದ ರೈತರು ಮತ್ತು ವ್ಯಾಪಾರಿಗಳಿಗೆ ‘ಸಿಹಿ’ಯೇ ಸಿಗುತಿತ್ತು. ಈ ಬಾರಿ ಅನಿರೀಕ್ಷಿತ ಕೊರೊನಾ ವೈರಸ್‌ ದಾಳಿಯು ಬೆಳೆಗಾರರು ಮತ್ತು ವ್ಯಾಪಾರಿಗಳ ವಹಿವಾಟಿಗೆ ‘ಹುಳಿ’ ಹಿಂಡಿದೆ.

ಮಾರ್ಚ್‌ ಮೊದಲೆರಡು ವಾರದಲ್ಲಿ ಹುಣಸೆ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 25,000 ದಾಟಿತ್ತು. ಲಾಕ್‌ಡೌನ್‌ ಬಳಿಕ ಕೂಲಿಯಾಳುಗಳಿಂದ ಹುಣಸೆ ಸಂಗ್ರಹ, ಸಾಗಾಟಕ್ಕೂ ಧಕ್ಕೆಯಾಗಿದೆ. ಇದರಿಂದ ಈಗ ಬೆಲೆ ಸರಾಸರಿ ₹ 15,000 ಬಂದು ತಲುಪಿದೆ.

ಬೆಳೆಗಾರರಿಂದ ಈಗಾಗಲೇ ಹಣ್ಣು ಖರೀದಿಸಿದ್ದೇವೆ. ಅದನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರಲು ಉತ್ತಮ ಬೆಲೆ ಇಲ್ಲ. ಮನೆಯಲ್ಲೇ ಸಂಗ್ರಹ ಮಾಡಿಟ್ಟುಕೊಂಡರೆ ತೂಕ ಕಡಿಮೆಯಾಗುತ್ತದೆ. ವಿಧಿಯಿಲ್ಲದೆ ಬಂದಷ್ಟು ಬರಲೆಂದು ಮಾರುಕಟ್ಟೆಗೆ ಒಯ್ಯುತ್ತಿದ್ದೇವೆ ಎನ್ನುತ್ತಾರೆ ತೋವಿನಕೆರೆ ಸುತ್ತಲಿನ ಬೆಳೆಗಾರರಿಂದ ಹಣ್ಣು ಸಂಗ್ರಹಿಸಿ ಮಾರುವ ಸಣ್ಣ ವ್ಯಾಪಾರಿ ಸದಾನಂದ ಗಣೇಶ್‌.

‘ಪ್ರತಿ ವರ್ಷ ಸುಮಾರು 40 ಕ್ವಿಂಟಲ್‌ ಹುಣಸೆ ಸಂಗ್ರಹಿಸಿ, ಎಪಿಎಂಸಿಯಲ್ಲಿ ಮಾರಾಟ ಮಾಡುತ್ತಿದ್ದೆ. ಆದರೆ, ಈ ಬಾರಿ ವ್ಯಾಪಾರ ಕುಸಿದಿದೆ. ಈವರೆಗೂ 25 ಕ್ವಿಂಟಲ್‌ ಮಾತ್ರ ಸಂಗ್ರಹವಾಗಿದೆ’ ಎಂದು ಅವರು ತಿಳಿಸಿದರು.

ನಾವು ಈ ಸಿಜನ್‌ನಲ್ಲಿ ಹುಣಸೆ, ಸಿಗೇಕಾಯಿ, ಮುಸುಕಿನ ಜೋಳ ವ್ಯಾಪಾರ ಮಾಡುತ್ತಿದ್ದೆವು. ಈ ಲಾಕ್‌ಡೌನ್‌ನಿಂದ ತೊಂದರೆ ಆಗಿದೆ. ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಲ್ಲ ಎಂದು ಮಾತು ಆರಂಭಿಸಿದರು ಬಟವಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಿ ಎಂ.ಪಿ.ಮಹೇಶ್‌.

ವ್ಯಾಪಾರಿಯೊಬ್ಬರು ಈ ಬೇಸಿಗೆ ಸಿಜನ್‌ನಲ್ಲಿ ಸರಾಸರಿ ₹ 25 ಲಕ್ಷದ ವರೆಗೂ ವಹಿವಾಟು ಮಾಡುತ್ತಿದ್ದರು. ಸಾಮಾನ್ಯ ವ್ಯಾಪಾರಿಯೂ ಸೋಮವಾರ ಸಂತೆಯ ದಿನ ಕನಿಷ್ಠ ₹ 2 ಲಕ್ಷದಿಂದ ಗರಿಷ್ಠ ₹ 3 ಲಕ್ಷದ ವರೆಗೆ ವಹಿವಾಟು ನಡೆಸುತ್ತಿದ್ದರು. ಈಗ ಎಲ್ಲದಕ್ಕೂ ಬ್ರೇಕ್‌ ಬಿದ್ದಿದೆ. ನಮ್ಮ ಎಂಪಿಎಂಸಿಯಲ್ಲಿ ಈ ಬೇಸಿಯಲ್ಲಿ ಆಗಬಹುದಾದ ₹ 10 ಕೋಟಿಯ ವಹಿವಾಟಿಗೂ ಅಡಚಣೆ ಉಂಟಾಗಿದೆ ಎಂದು ಅವರು ತಿಳಿಸಿದರು.

ಈಗ ಮಳೆನೂ ಶುರುವಾಗಿದೆ. ತೇವಾಂಶದಿಂದ ಹುಣಸೆ ಹಣ್ಣಿನ ಬಣ್ಣವೂ ಬದಲಾವಣೆ ಆಗುತ್ತದೆ. ಇದರಿಂದ ಉತ್ಪನ್ನ ಮತ್ತಷ್ಟು ಬೆಲೆ ಕಳೆದುಕೊಳ್ಳುತ್ತದೆ
ಸದಾನಂದ ಗಣೇಶ್‌, ವ್ಯಾಪಾರಿ

*

ಹುಣಸೆ ಬೇಗ ಕೆಡುವ ಪದಾರ್ಥ ಅಲ್ಲ. ಅದನ್ನು ಕೆಲವು ದಿನ ಶೇಖರಣೆ ಮಾಡಿಯೂ ಮಾರಾಟ ಮಾಡಬಹುದು. ಹಾಗಾಗಿ ಬೆಳೆಗಾರರಿಗೆ ಹೆಚ್ಚೆನೂ ನಷ್ಟ ಆಗಲಾರದು
ಡಿ.ಆರ್.ಪುಷ್ಪಾ, ಕಾರ್ಯದರ್ಶಿ, ತುಮಕೂರು ಎಪಿಎಂಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು