ಗುರುವಾರ , ಫೆಬ್ರವರಿ 20, 2020
27 °C
ಸೇವಾ–ಸೌಲಭ್ಯಗಳಿಗೆ ಧಕ್ಕಿಯಿಲ್ಲ

ತುಮಕೂರು: ಜಿಲ್ಲೆಯಲ್ಲಿ ಎಂದಿನಂತೆ ಜನಜೀವನ, ಬಂದ್‌ಗೆ ದೊರೆಯದ ಜನ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸರೋಜಿನಿ‌ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಗರದಲ್ಲಿ ಬೆಂಬಲ ವ್ಯಕ್ತವಾಗಲಿಲ್ಲ. ಜನಜೀವನ, ವಾಹನ ಸಂಚಾರ, ವ್ಯಾಪಾರ, ವಹಿವಾಟು ಎಂದಿನಂತೆ ಸಹಜವಾಗಿತ್ತು.

ಸಾರಿಗೆ ಸಂಸ್ಥೆ ಬಸ್‌ಗಳು, ಆಟೊಗಳು ಎಂದಿನಂತೆ ಸಂಚರಿಸಿದವು. ಶಾಲಾ ಕಾಲೇಜುಗಳಲ್ಲಿ ತರಗತಿಗಳು ನಡೆದವು. ಖಾಸಗಿ ಕಂಪನಿಗಳ ಕಾರ್ಯನಿರ್ವಹಣೆ, ಬ್ಯಾಂಕಿಂಗ್ ಸೇವೆಯಲ್ಲೂ ವ್ಯತ್ಯಯ ಆಗಲಿಲ್ಲ.

ಜಿಲ್ಲೆಯ ಶಿರಾ, ಗುಬ್ಬಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ ಸೇರಿದಂತೆ ಪಟ್ಟನಾಯಕನಹಳ್ಳಿ, ಹುಳಿಯಾರು, ಬುಕ್ಕಾಪಟ್ಟಣ, ತೋವಿನಕೆರೆ, ಚೇಳೂರು, ಹುಲಿಯೂರುದುರ್ಗದಲ್ಲೂ ಬಂದ್‌ ಛಾಯೆ ಕಂಡುಬರಲಿಲ್ಲ.

ಹುಳಿಯಾರ್‌ನಲ್ಲಿ ಮನವಿ ಸಲ್ಲಿಕೆ: ಹುಳಿಯಾರಿನಲ್ಲಿ ಅಂಗಡಿ, ಹೋಟೆಲ್‌ಗಳು ಬಾಗಿಲು ತೆಗೆದಿದ್ದವು. ರೈತಸಂಘದ ಕಾರ್ಯಕರ್ತರು ಬೇಡಿಕೆ ಈಡೇರಿಸುವಂತೆ ನಾಡ ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರೈತಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಭಾಷೆ ಬಳಸುವುದು ಕೆಲವರಿಗೆ ಹಿಂಜರಿಕೆ ಎಂಬಂತಾಗಿದೆ. ಕನ್ನಡಿಗರಿಗೆ ಉದ್ಯೋಗ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಅನ್ಯಾಯವಾಗುತ್ತಿದೆ ಎಂದರು.

ರೈತಸಂಘದ ಬೀರಲಿಂಗಯ್ಯ, ಕರಿಯಪ್ಪ ಹಾಗೂ ಕಾರ್ಯಕರ್ತರು ಇದ್ದರು.

*

ವಕೀಲ ಸಂಘ ಬೆಂಬಲ
ಪಾವಗಡ: ತಾಲ್ಲೂಕು ವಕೀಲರ ಸಂಘ ಕಲಾಪ ಬಹಿಷ್ಕರಿಸಿ ಬಂದ್‌ಗೆ ಬೆಂಬಲ ನೀಡಿತು.

ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಸ್ಥಿತಿ ಇದೆ. ಸರೋಜಿನಿ ಮಹಿಷಿ ಅವರು ವರದಿ ನೀಡಿ 3 ದಶಕಗಳು ಕಳೆದರೂ ಸರ್ಕಾರಗಳು ಶಿಫಾರಸ್ಸುಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿವೆ. ಇದರಿಂದ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ ಎಂದು ವಕೀಲ ನರಸಿಂಹರೆಡ್ಡಿ ಆರೋಪಿಸಿದರು.

ವಕೀಲ ಮುರಳೀಧರ್, ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹೋರಾಟ ಮಾಡುವ ಅನಿವಾರ್ಯ ಎದುರಾಗಿದೆ. ಬಹುರಾಷ್ಟ್ರೀಯ ಕಂಪನಿ, ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿದಲ್ಲಿ ಸ್ಥಿತಿ ಸುಧಾರಿಸುತ್ತದೆ. ಜೀವನಕ್ಕೆ ಬೇರೆಡೆ ಹೋಗುವುದನ್ನು ತಪ್ಪಿಸಬಹುದು ಎಂದರು.

ವಕೀಲರ ಸಂಘದ ಅಧ್ಯಕ್ಷ ಅಕ್ಕಲಪ್ಪ, ಸಂಘದ ಪದಾಧಿಕಾರಿಗಳಾದ ರಾಜಶೇಖರ್, ರಾಜಣ್ಣ, ರಮೇಶ್, ವೆಂಕಟರಾಮಯ್ಯ, ನಾಗೇಂದ್ರಪ್ಪ, ಸುಬ್ರಹ್ಮಣ್ಯಂ, ಪಾಂಡುರಂಗಪ್ಪ, ಭಾರತಿ, ಮಹಬೂಬ್ ಭಾಷ, ರಂಗನಾಥ್, ಲಕ್ಷ್ಮಯ್ಯ, ನರಸಿಂಹ, ನಾಗೇಂದ್ರರೆಡ್ಡಿ, ರಾಮಾಂಜಿನಪ್ಪ, ರವೀಂದ್ರ, ಆಂಜನೇಯುಲು, ಶಶಿ, ತಿರುಮಲೇಶ್ ಇದ್ದರು.

ವರದಿ ಜಾರಿಗೆ ಘೋಷಣೆ
ಕೊಡಿಗೇನಹಳ್ಳಿ (ಮಧುಗಿರಿ ತಾ): ಜೈಭಾರತ ಯುವಸೇನೆ ಸದಸ್ಯರು ಕೊಲ್ಲಾಪುರದಮ್ಮ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ ಕೆಲಕಾಲ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು. ಶಾಲೆ, ಕಾಲೇಜು, ವಾಹನ ಸಂಚಾರ, ಸಂತೆ ಹಾಗೂ ವಹಿವಾಟು ಎಂದಿನಂತೆ ನಡೆಯಿತು.

ಜೈಭಾರತ ಯುವ ಸೇನೆ ಹೋಬಳಿ ಅಧ್ಯಕ್ಷ ಹೆ.ಎನ್.ಕಾರ್ತಿಕ್, ಪದಾಧಿಕಾರಿಗಳಾದ ಪವನ್, ಶ್ರೀನಿವಾಸ್, ಹರೀಶ್, ಕಾಂತರಾಜ್, ಅನಿಲ್, ರಾಮಾಂಜಿ, ವಿನಯ್, ಲೋಕೇಶ್, ದೇವರಾಜ್, ಸತೀಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು