ಗುರುವಾರ , ನವೆಂಬರ್ 21, 2019
20 °C
ಜನಸ್ನೇಹಿಯಾಗದ ನಗರ ಸಾರಿಗೆ ಸೇವೆ : ನಿರ್ವಹಣೆಯ ಹೊರೆ, ಆದಾಯ ಕೋತಾದ ಬರೆ

ತುಮಕೂರು: ಸಮಯಕ್ಕೆ ಬಾರದ ಬಸ್ಸು, ಪ್ರಯಾಣಿಕರು ಸುಸ್ತು

Published:
Updated:
Prajavani

ತುಮಕೂರು: ಶೆಟ್ಟಿಹಳ್ಳಿಯಲ್ಲಿ ಬಾಡಿಗೆಮನೆ ಮಾಡಿರುವ ಎಚ್‌.ಹರೀಶ್‌ ಅವರು ಕೊರಟಗೆರೆ ರಸ್ತೆಯ ಅಕ್ಷಯ ಕಾಲೇಜಿಗೆ ಸರ್ಕಾರಿ ಬಸ್‌ನಲ್ಲೇ ಹೋಗುತ್ತಾರೆ. ಶೆಟ್ಟಿಹಳ್ಳಿಯಲ್ಲಿ ಬಸ್‌ಗಾಗಿ ನಿತ್ಯ 20 ನಿಮಿಷ ಕಾಯುತ್ತಾರೆ. ಅಲ್ಲಿಂದ ಬಸ್‌ ಹತ್ತಿ ಬಂದು ತುಮಕೂರು ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣದಲ್ಲಿ ಇಳಿದು, ಮತ್ತೊಂದು ಬಸ್‌ಗೆ ಮತ್ತೆ 20 ನಿಮಿಷ ಕಾದು ಕಾಲೇಜು ಕಡೆ ಹೊರಡುತ್ತಾರೆ. ಕಾಲೇಜುನಿಂದ ಮರಳುವಾಗಲು ಬಸ್‌ಗಾಗಿ ಕಾಯುವ ಕೆಲಸ ತಪ್ಪುವುದಿಲ್ಲ! ಹೀಗೆ ಬಸ್‌ ದಾರಿ ನೋಡುತ್ತ ಅವರು ನಿತ್ಯ 80 ನಿಮಿಷಗಳನ್ನು ತಂಗುದಾಣದಲ್ಲಿಯೇ ಕಳೆಯುತ್ತಾರೆ.

ಗೆದ್ದಲಹಳ್ಳಿಯಿಂದ ಕೂಲಿ ಕೆಲಸಕ್ಕೆ ನಗರದ ಕೇಂದ್ರ ಭಾಗಕ್ಕೆ ಬರುವ ಹನುಮಂತರಾಯಪ್ಪ ಅವರಿಗೆ ಸಮಯಕ್ಕೆ ಸರಿಯಾಗಿ ಬಸ್‌ ಸಿಗುವುದಿಲ್ಲ. ಕೆಲಸ ಮಾಡಿದ ಆಯಾಸದ ನಡುವೆಯೂ ಅವರು ಬಸ್‌ಗಾಗಿ ಸಂಜೆ ಕಾದು ನಿಲ್ಲುತ್ತಾರೆ. ದೇಹದ ವಿಶ್ರಾಂತಿಗಾಗಿ ಸೀಟು ಸಿಗಲಿ ಎಂದು ಜನಜಂಗುಳಿಯನ್ನು ಭೇದಿಸಿ ಬಸ್‌ನೊಳಗೆ ನುಗ್ಗುತ್ತಾರೆ.

‘ತುಮಕೂರು ನಗರ ಸಾರಿಗೆ ಸೇವೆ’ ಪಡೆಯುವ ಪ್ರಯಾಣಿಕರಿಗೆ ಈ ಕಷ್ಟಗಳು ಸಾಮಾನ್ಯವಾಗಿವೆ.

ತಂಗುದಾಣದಲ್ಲಿ ಬಸ್‌ಗಾಗಿ ಕಾಯುವ, ಬಂದಾಗ ಗುದ್ದಾಡಿಕೊಂಡು ಹತ್ತುವ, ಹತ್ತಿದ ಬಳಿಕ ಜಾಗ ಸಿಗದಿದ್ದಾಗ ಇಕ್ಕಟ್ಟಿನಲ್ಲಿ ನಿಲ್ಲುವ, ಇಳಿಯುವ ಸ್ಥಳ ಬಂದಾಗ ಕೊಸರಿಕೊಂಡು ಹೊರಬರುವ ಕೌಶಲಗಳನ್ನು ಕರಗತ ಮಾಡಿಕೊಂಡರೆ ಮಾತ್ರ ನಗರ ಸಾರಿಗೆಯಲ್ಲಿ ಸಂಚಾರ ಮಾಡುವುದು ಸುಲಭ!

ಬೆಳಿಗ್ಗೆ–ಸಂಜೆಯ ಟ್ರಿಪ್‌ಗಳಲ್ಲಿ ನಗರ ಸಾರಿಗೆ ಬಸ್‌ ಗಳು ವಿದ್ಯಾರ್ಥಿಗಳು, ಕೆಲಸಕ್ಕೆ ಹೊರಟವರು ಮತ್ತು ಮರಳುವವರಿಂದ ತುಂಬಿ ತುಳುಕುತ್ತಿರುತ್ತವೆ. ತರಗತಿಗಳಿಗೆ ತಡವಾಗುತ್ತದೆ ಎಂದು ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಬಸ್‌ ಬಾಗಿಲಲ್ಲಿಯೇ ಜೋತುಬಿದ್ದು ಹೋಗುತ್ತಿರುವ ದೃಶ್ಯಗಳು ಬೆಳಿಗ್ಗೆ ಸಾಮಾನ್ಯವಾಗಿವೆ.

ಬಿಸಿಲಲ್ಲೇ ಕಾಯಬೇಕು: ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣದ ದಕ್ಷಿಣ ಭಾಗದಲ್ಲಿ ನಗರ ಸಾರಿಗೆ ಬಸ್‌ಗಳ ನಿಲುಗಡೆಗೆ ಜಾಗ ಗುರುತಿಸಲಾಗಿದೆ. ಆದರೆ, ಹೊಸಬರು ಬಂದರೆ ಯಾವ ಪ್ರದೇಶಕ್ಕೆ ಹೋಗುವ ಬಸ್‌ ಎಲ್ಲಿ ನಿಲ್ಲುತ್ತದೆ ಎಂಬ ಸಣ್ಣ ಸೂಚನಾ ಫಲಕವೂ ಅಲ್ಲಿಲ್ಲ. ತಂಗುದಾಣದ ಎದುರೇ ಬೆಂಗಳೂರಿಗೆ ಹೊರಡುವ ಕೆ.ಎಸ್‌.ಆರ್‌.ಟಿ.ಸಿ. ಬಸ್‌ಗಳು ನಿಲ್ಲುತ್ತವೆ. ಇಲ್ಲಿ ಬ್ಯಾರಿಕೇಡ್‌ಗಳು ಇವೆ. ಹಾಗಾಗಿ ನಗರ ಸಾರಿಗೆಯ ಯಾವ ಬಸ್‌ ಬಂತು, ಹೊಯ್ತು ಎಂಬುದೇ ತಂಗುದಾಣದಲ್ಲಿ ಕಾಯುವವರಿಗೆ ಗೊತ್ತಾಗುವುದಿಲ್ಲ.

ಪ್ರಯಾಣಿಕರೆಲ್ಲರೂ ನಿಲ್ದಾಣದ ನಡುವೆಯೇ ನೆತ್ತಿ ಸುಡುವ ಬಿಸಿಲಿನಲ್ಲಿಯೇ ಬಸ್‌ಗಾಗಿ ಕಾಯುತ್ತಾರೆ. ನೆರಳಿಗಾಗಿ ಸೆರಗು, ಟೊಪ್ಪಿಗೆ, ಕೊಡೆ, ನೋಟ್‌ಬುಕ್‌, ದಿನಪತ್ರಿಕೆಗಳನ್ನು ತಲೆ ಮೇಲೆ ಅಡ್ಡಲಾಗಿ ಹಿಡಿಯುತ್ತಾರೆ. ಮಳೆ ಬಂದಾಗ ಈ ನಿಲ್ದಾಣದಲ್ಲಿ ಬಸ್‌ ಹಿಡಿಯುವುದು ಮತ್ತಷ್ಟು ತ್ರಾಸದಾಯಕ.

ಬಸ್‌ಗಳು ತಿರುವು ಪಡೆದು ವೇಗವಾಗಿ ನುಗ್ಗಿ ಬರುತ್ತವೆ. ನಿಲ್ದಾಣದ ನಡುವೆ ನಿಲ್ಲುವುದರಿಂದ ಪ್ರಯಾಣಿಕರ ಜೀವಕ್ಕೂ ಕುತ್ತು ಒದಗಲೂಬಹುದು ಎಂದರು ನಿಲ್ದಾಣದಲ್ಲಿದ್ದ ಗುಬ್ಬಿ ಬಸವರಾಜು.

ಕ್ಯಾತ್ಸಂದ್ರ ಮಾರ್ಗದಲ್ಲಿ ಸಿದ್ಧಗಂಗಾ ಮಠ, ಹಲವಾರು ಶಿಕ್ಷಣ ಸಂಸ್ಥೆಗಳು ಇವೆ. ಹಾಗಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚು. ಈ ಕಡೆ ಬೇಕಾದಷ್ಟು ಬಸ್‌ ಇಲ್ಲ. ಅರ್ಧ ಗಂಟೆಗೆ ಒಂದು ಬಸ್‌ ಬರುತ್ತದೆ ಎಂದು ಬಟವಾಡಿಯ ಮಹಮ್ಮದ್‌ ಏಜಾಜ್‌ ತಿಳಿಸಿದರು. ಈ ಮಾತುಕತೆ ನಡೆಯುತ್ತಿರುವಾಗಲೇ ನೆಲಮಂಗಲಕ್ಕೆ ಹೋಗಲು ಮಗುವನ್ನು ಎತ್ತಿಕೊಂಡು ಉಮಾ ಅವರು 25 ನಿಮಿಷ ನಿಂತಿದ್ದರು. ಅಂತು ಒಂದು ಬಸ್‌ ಬಂತು. ಆ ಜನದಟ್ಟಣೆಯಲ್ಲಿ ಅವರಿಗೆ ಹತ್ತಲು ಆಗಲೇ ಇಲ್ಲ. ಬಸ್‌ ಹೋಯಿತು. ಮತ್ತೆ ಕಾಯುವ ಸರದಿ ಉಮಾ ಅವರದ್ದಾಗಿತ್ತು.

ಸರ್ಕಾರಿ ಸಾರಿಗೆ ಸೇವೆ ಪಡೆಯಲು ಇಂತಹ ಕಷ್ಟಗಳು ‘ನಮಗ್ಯಾಕೆ’ ಎಂಬುವವರು ಆಟೊಗಳನ್ನು ಹತ್ತುತ್ತಿದ್ದಾರೆ. ಇದರಿಂದ ಪ್ರಯಾಣಿಕರ ಜೇಬು ಖಾಲಿಯಾಗುತ್ತಿದೆ. ಸಾರಿಗೆ ನಿಗಮದ ಆದಾಯವೂ ಇಳಿಯುತ್ತಿದೆ.

*

ಸರ್ಕಾರಿ ಸಾರಿಗೆಗೆ ಜನ ಏನಂತಾರೆ?

* ನಗರದ ಜ್ಯೂನಿಯರ್‌ ಕಾಲೇಜಿಗೆ ವ್ಯಾಸಂಗಕ್ಕಾಗಿ ಬರುತ್ತೇನೆ. ತರಗತಿ ಮುಗಿದ ಬಳಿಕ ಭದ್ರಮ್ಮ ವೃತ್ತದಲ್ಲೇ ಬಸ್‌ ಹಿಡಿಯಬಹುದಿತ್ತು. ಆದರೆ, ಬಹುತೇಕ ಬಾರಿ ಅಲ್ಲಿ ಬಸ್‌ ನಿಲ್ಲಿಸುವುದಿಲ್ಲ. ಹಾಗಾಗಿ ಕಾಲೇಜಿನಿಂದ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣದವರೆಗೂ ಸ್ನೇಹಿತೆಯರೊಂದಿಗೆ ನಡೆದುಕೊಂಡೆ ಬರುತ್ತೇವೆ. ಇಲ್ಲಿ ಮತ್ತೆ ಕಾದು–ಕಾದು ಬಸ್‌ ಹತ್ತುತ್ತೇವೆ.

-ಜಿ.ಅನಿತಾ, ಗೊಲ್ಲಹಳ್ಳಿ

* ಉಪ್ಪಾರಹಳ್ಳಿ, ನಳಂದ ಮಾರ್ಗವಾಗಿ ಶೆಟ್ಟಿಹಳ್ಳಿಗೆ ತಲುಪುವ ಬಸ್ ದರವನ್ನು ₹ 11 ನಿಗದಿಪಡಿಸಿದ್ದಾರೆ. ನೋಟು ಕೊಟ್ಟರೆ ₹ 9 ಚಿಲ್ಲರೆ ಕೊಡಬೇಕಾಗುತ್ತದೆ ಎಂದು ನಿರ್ವಾಹಕರು ,‘ಸರಿಯಾದ ಚಿಲ್ಲರೆ ಇದ್ದರೆ ಮಾತ್ರ ಬಸ್‌ ಹತ್ತಿ, ಇಲ್ಲದಿದ್ದರೆ ಬಸ್‌ನೊಳಗೆ ಬರಬೇಡಿ’ ಎಂದು ದಬಾಯಿಸುತ್ತಾರೆ. ಅನಿವಾರ್ಯವಾಗಿ ಆಟೊಗಳನ್ನು ಅವಲಂಬಿಸಿದ್ದೇವೆ. ಇದರಿಂದ ಸರ್ಕಾರ ಮತ್ತು ಪ್ರಯಾಣಿಕರಿಬ್ಬರಿಗೂ ನಷ್ಟ.

-ನಿಸಾರ್‌ ಅಹಮದ್‌, ಮಂಚಗೊಂಡನಹಳ್ಳಿ

* ಶಿರಾದ ದೊಡ್ಡಆಲದ ಮರ ಊರಿಂದ ಬಿ.ಎಚ್‌.ರಸ್ತೆಯ ಗುರುಶ್ರೀ ಕಾಲೇಜಿಗೆ ಬರುತ್ತೇನೆ. ಬಸ್‌ಗಳಿಗಾಗಿ ಕಾಯುವುದರಲ್ಲಿಯೇ 1 ಗಂಟೆ ವ್ಯರ್ಥವಾಗುತ್ತದೆ. ಇದರಿಂದ ಮನೆಗೆ ಬೇಗ ತಲುಪಲು ಆಗುವುದಿಲ್ಲ. ಹಾಗಾಗಿ ಓದಲು ಸಹ ಹೆಚ್ಚು ಸಮಯ ಸಿಗುವುದಿಲ್ಲ.

-ಜಿ.ಎ.ಭಾವನಾ, ವಿದ್ಯಾರ್ಥಿನಿ

* ಸಿದ್ಧಗಂಗಾ ಮಠಕ್ಕೆ ಹೋಗಲು ನಿಲ್ದಾಣದಲ್ಲಿ ಒಂದು ತಾಸಿನಿಂದ ಕಾಯುತ್ತಿದ್ದೇನೆ. ಆಟೊದವರನ್ನು ಕೇಳಿದರೆ ₹ 120 ಬಾಡಿಗೆ ಹೇಳುತ್ತಿದ್ದಾರೆ. ಸರಿಯಾದ ಸಮಯಕ್ಕೆ ಬಸ್‌ಗಳನ್ನು ಓಡಿಸಿದರೆ, ನಮ್ಮಂತ ಪರ ಊರಿನಿಂದ ಬಂದವರಿಗೆ ಅನುಕೂಲ ಆಗುತ್ತದೆ. ಇವತ್ತು ನನ್ನ ಜನ್ಮದಿನ(ಅ.9). ಬಸ್‌ಗಾಗಿ ಬಿಸಲಿನಲ್ಲಿ ಕಳೆಯುವುದರಲ್ಲೇ ಸಂಭ್ರಮಾಚರಣೆಯ ಸಮಯ ವ್ಯರ್ಥವಾಯಿತು.

-ಪಿ.ಎ.ಪ್ರಕಾಶ ದೊಡ್ಡಮನಿ, ಬಿಜಾಪುರ

* ತಂಗುದಾಣ ಇರುವಲ್ಲಿ ಬಸ್‌ಗಳನ್ನು ನಿಲ್ಲಿಸುವುದಿಲ್ಲ. ಸರಿಯಾದ ಚಿಲ್ಲರೆ ಕೊಡಲಿಲ್ಲ ಎಂಬ ಕಾರಣಕ್ಕಾಗಿಯೇ ಪ್ರಯಾಣಿಕರನ್ನು ಮಾರ್ಗ ಮಧ್ಯೆಯೇ ಇಳಿಸಿರುವ ಸಂದರ್ಭಗಳನ್ನು ಕಂಡಿದ್ದೇನೆ. ಬಸ್‌ಗಳು ಜನರಿಂದ ತುಂಬಿರುತ್ತವೆ. ನಿಂತುಕೊಂಡೆ ಪ್ರಯಾಣ ಮಾಡಬೇಕು. ಟಿಕೆಟ್‌ ದರ ಕಡಿಮೆ ಎಂಬ ಕಾರಣಕ್ಕಾಗಿ ನಗರ ಸಾರಿಗೆಯಲ್ಲಿಯೇ ನೆಲಮಂಗಲಕ್ಕೆ ಹೋಗಲು ಕಾಯುತ್ತಿದ್ದೇನೆ.

-ವೀಣಾ, ನೆಲಮಂಗಲ

*

ಪ್ರತಿ ಕಿ.ಮೀ. ಸಂಚಾರ: ಖರ್ಚು ₹ 38, ಆದಾಯ ₹ 22

ನಗರ ಸಾರಿಗೆಯ ಪ್ರತಿ ಬಸ್‌ ಅನ್ನು ಪ್ರತಿ ಕಿ.ಮೀ. ಓಡಿಸಲು ₹ 38 ಖರ್ಚು ಮಾಡುತ್ತಿದ್ದೇವೆ. ಅದರಿಂದ ₹ 22 ಮಾತ್ರ ಆದಾಯ ಬರುತ್ತಿದೆ. ₹ 16 ನಷ್ಟದ ಹೊರೆ ಬೀಳುತ್ತಿದೆ ಎಂದು ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್‌.ಗಜೇಂದ್ರಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಯಾಣಿಕರ ಅನುಕೂಲಕ್ಕಾಗಿ ಕನಿಷ್ಠ 5 ನಿಮಿಷದಿಂದ ಗರಿಷ್ಠ 10 ನಿಮಿಷದ ಅಂತರದಲ್ಲಿ ಪ್ರತಿ ಮಾರ್ಗಕ್ಕೂ ಬಸ್‌ಗಳನ್ನು ಓಡಿಸುತ್ತಿದ್ದೇವೆ. ಹಬ್ಬ–ಹರಿದಿನ ಇದ್ದಾಗ ಮಾತ್ರ ಬಸ್‌ಗಳನ್ನು ಬೇರೆ ಮಾರ್ಗಗಳಲ್ಲಿ ಓಡಿಸುತ್ತೇವೆ. ಹಾಗಾಗಿ ಆ ವೇಳೆ ಮಾತ್ರ ಸಂಚಾರ ಸಮಯದಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ಅವರು ತಿಳಿಸಿದರು. 

ನಿಲ್ದಾಣದಲ್ಲಿ ತಂಗುದಾಣ ನಿರ್ಮಿಸಿದ್ದೇವೆ. ಅದನ್ನು ಜನರೇ ಬಳಸುತ್ತಿಲ್ಲ. ಬಸ್‌ನೊಳಕ್ಕೆ ಬೇಗ ಹತ್ತಿ ಸೀಟು ಹಿಡಿಯಲು ನಿಲ್ದಾಣದ ನಡುವೆಯೇ ನಿಲ್ಲುತ್ತಾರೆ ಎಂದರು.

2011ರಲ್ಲಿ ಆರಂಭವಾದ ಈ ನಗರ ಸಾರಿಗೆಯ ಟಿಕೆಟ್‌ ದರವನ್ನು ಐದು ವರ್ಷಗಳಿಂದ ಹೆಚ್ಚಿಸಿಲ್ಲ. ಹಾಗಾಗಿ ವರಮಾನವು ಹೆಚ್ಚಳ ಆಗಿಲ್ಲ ಎಂದು ಅವರು ವಿವರಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿಲ್ದಾಣಕ್ಕೆ ಹೊಸರೂಪ ಸಿಗಲಿದೆ. ಆ ಬಳಿಕ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳು ಸಿಗಲಿವೆ ಎಂದು ಭರವಸೆ ನೀಡಿದರು.

*

‘ಮಾತು ಕೇಳದ ಪ್ರಯಾಣಿಕರು’

ಬಸ್‌ನೊಳಗೆ ಜಾಗವಿದ್ದರೂ ಬಹುತೇಕರು ಬಾಗಿಲಲ್ಲೆ ನಿಂತುಕೊಳ್ಳುತ್ತಾರೆ. ನಾವು ಎಷ್ಟು ಹೇಳಿದರೂ ಕೇಳುವುದಿಲ್ಲ. ಸರಿಯಾದ ಚಿಲ್ಲರೆಯೂ ಕೊಡುವುದಿಲ್ಲ. ಸೌಜನ್ಯದಿಂದ ನಡೆದುಕೊಂಡರೂ ನಮ್ಮ ಮೇಲೆಯೇ ದಬಾಯಿಸುತ್ತಾರೆ. ಪ್ರಯಾಣಿಕರ ತಪ್ಪಿದ್ದರೂ ಹಿರಿಯ ಅಧಿಕಾರಿಗಳು ಮೊದಲ ನಮ್ಮ ಮೇಲೆಯೇ ಕ್ರಮ ಕೈಗೊಳ್ಳುತ್ತಾರೆ ಎಂದು ನಗರ ಸಾರಿಗೆಯ ನಿರ್ವಾಹಕರೊಬ್ಬರು ಅಳಲು ಹೇಳಿಕೊಂಡರು.

80,000 ಪಾಸ್‌ಗಳನ್ನು ವಿತರಣೆ ಮಾಡಿ, 50 ಬಸ್‌ಗಳನ್ನು ಮಾತ್ರ ಓಡಿಸುತ್ತಿದ್ದೇವೆ. ಜನರಿಗೆ ಅವು ಸಾಲುತ್ತಿಲ್ಲ. ಹಾಗಾಗಿ ಬಸ್‌ಗಳಲ್ಲಿ ದಟ್ಟಣೆ ಇರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

*

ಅಂಕಿ–ಅಂಶ

* 50 ನಗರ ಸಾರಿಗೆಯಲ್ಲಿನ ಬಸ್‌ಗಳು

* 860 ನಗರ ಸಾರಿಗೆ ಬಸ್‌ಗಳ ನಿತ್ಯದ ಟ್ರಿಪ್‌ಗಳು

* ₹ 50 ಲಕ್ಷ ನಗರ ಸಾರಿಗೆಯ ತಿಂಗಳ ಸರಾಸರಿ ಆದಾಯ

* ₹ 95 ಲಕ್ಷ ನಗರ ಸಾರಿಗೆ ಸೇವೆಯ ತಿಂಗಳ ಸರಾಸರಿ ವೆಚ್ಚ

ನಗರ ಸಾರಿಗೆ ಮಾರ್ಗಗಳು

ಎಲ್ಲಿಂದ – ಎಲ್ಲಿಯವರೆಗೆ

ಕ್ಯಾತ್ಸಂದ್ರ–ಮಲ್ಲಸಂದ್ರ

ಊರಕೆರೆ–ಮರಳೂರು ದಿನ್ನೆ

ಬೆಳಗುಂಬ–ಮಳೆಕೋಟೆ

ಗೂಳಿರಿವೆ–ಕೋರಾ

ಯಲ್ಲಾಪುರ–ಶೆಟ್ಟಿಹಳ್ಳಿ

ಗೂಳೂರು–ತುಮಕೂರು

ಕಂಬತ್ತನಹಳ್ಳಿ–ಕ್ಯಾತ್ಸಂದ್ರ

ತುಮಕೂರು–ಸ್ವಾಂದೇನಹಳ್ಳಿ

ಪ್ರತಿಕ್ರಿಯಿಸಿ (+)