ಶನಿವಾರ, ಮೇ 21, 2022
26 °C

ತುಮಕೂರು: ಹಾಲು ಖರೀದಿ ದರ ಲೀಟರ್‌ಗೆ ₹2 ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ರೈತರಿಂದ ‘ತುಮುಲ್’ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ ₹2 ಹೆಚ್ಚಳ ಮಾಡಿದ್ದು, ಇದು ಮಾರ್ಚ್ 1ರಿಂದಲೇ ಪೂರ್ವಾನ್ವಯವಾಗಲಿದೆ. ಆದರೆ ಗ್ರಾಹಕರು ಖರೀದಿಸುವ ಹಾಲಿನ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

3.5 ಜಿಡ್ಡಿನ ಅಂಶ ಇರುವ ಹಾಲಿಗೆ ಲೀಟರ್ ₹27 ಹಾಗೂ 4.1 ಜಿಡ್ಡಿನ ಅಂಶ ಇದ್ದರೆ ₹28.39ರಂತೆ ನೀಡಲಾಗುತ್ತದೆ. ಕಳೆದ ಫೆಬ್ರುವರಿಯಲ್ಲಿ ಲೀಟರ್‌ಗೆ ₹2 ಹೆಚ್ಚಳ ಮಾಡಿದ್ದು, ಈಗ ಮತ್ತೆ ಏರಿಕೆ ಮಾಡಿರುವುದರಿಂದ ಎರಡು ತಿಂಗಳಲ್ಲಿ ₹4 ಹೆಚ್ಚಳ ಮಾಡಿದಂತಾಗಿದೆ.

ರೈತರು ಸಂಕಷ್ಟದಲ್ಲಿ ಇರುವುದನ್ನು ಮನಗಂಡು ಶುಕ್ರವಾರ ನಡೆದ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಬೆಲೆ ಏರಿಕೆಯಿಂದ ಒಕ್ಕೂಟಕ್ಕೆ ತಿಂಗಳಿಗೆ ₹4.50 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಭೆಯ ನಂತರ ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್–19 ಸಮಯದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಮಾರಾಟವಾಗದೆ ಒಕ್ಕೂಟ ನಷ್ಟದಲ್ಲಿತ್ತು. ಈಗ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದ್ದು ಸುಮಾರು ₹9.50 ಕೋಟಿ ನಿವ್ವಳ ಲಾಭದಲ್ಲಿದೆ. ₹73.54 ಕೋಟಿ ಮೊತ್ತದ ಬೆಣ್ಣೆ, ಹಾಲಿನ ಪುಡಿ ದಾಸ್ತಾನು ಇದ್ದು, ಲಾಭದ ಪ್ರಮಾಣ ಹೆಚ್ಚಾಗಬಹುದು. ಒಕ್ಕೂಟ ಲಾಭದತ್ತ ಹೆಜ್ಜೆ ಹಾಕಿದ್ದು, ಅದರಲ್ಲಿ ಕೆಲ ಭಾಗವನ್ನು ರೈತರಿಗೆ ವರ್ಗಾಯಿಸುವ ಸಲುವಾಗಿ ಹಾಲು ಖರೀದಿ ದರ ಹೆಚ್ಚಿಸಲಾಗಿದೆ. ಇದು ಕೋಲಾರ ಒಕ್ಕೂಟ ನೀಡುತ್ತಿರುವ ದರಕ್ಕೆ ಸಮನಾಗಿದ್ದು, ಇತರ ಒಕ್ಕೂಟಗಳಿಗಿಂತ ಹೆಚ್ಚಿನ ದರ ನೀಡಿದಂತಾಗಿದೆ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು