ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಅನವಶ್ಯ ಸಂಚಾರ, ವಾಹನಗಳ ಜಪ್ತಿ

ಜಿಲ್ಲಾಡಳಿತ ಹಾಗೂ ಪೊಲೀಸರಿಂದ ಕಟ್ಟುನಿಟ್ಟಿನ ಎಚ್ಚರಿಕೆ
Last Updated 27 ಮಾರ್ಚ್ 2020, 13:56 IST
ಅಕ್ಷರ ಗಾತ್ರ

ತುಮಕೂರು: ಅನವಶ್ಯಕವಾಗಿ ಓಡಾಡುವ ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಲಾಗುವುದು. ಜನರು ಆದಷ್ಟು ಮನೆಯಲ್ಲಿಯೇ ಇರಬೇಕು. ಡ್ರೋಣ್, ಸ್ಮಾರ್ಟ್ ಸಿಟಿ ಕಂಟ್ರೋಲ್ ರೂಂ ಹಾಗೂ ಪೊಲೀಸ್ ಕಂಟ್ರೋಲ್ ರೂಂನಿಂದ ಸಂಚಾರದ ಮೇಲೆ ನಿಗಾ ಇಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದರು.

ಸಾರ್ವಜನಿಕರು ದಯವಿಟ್ಟು ಮನೆಯಲ್ಲಿಯೇ ಇದ್ದು ಸಹಕರಿಸಬೇಕು. ಅವಶ್ಯ ವಸ್ತುಗಳನ್ನು ಸಾಗಿಸುವ ವಾಹನ ಚಾಲಕರಿಗೆ ಆಹಾರ ಒದಗಿಸುವ ದೃಷ್ಟಿಯಿಂದ 20 ಕಿಲೋ ಮೀಟರ್ ಒಂದರಂತೆ ಹೆದ್ದಾರಿ ಬದಿಯಲ್ಲಿರುವ ಹೋಟೆಲ್ ಹಾಗೂ ಡಾಬಾಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುವುದು. ಆ ಹೋಟೆಲ್‌, ಡಾಬಾಗಳಲ್ಲಿ ಕುಳಿತು ಆಹಾರ ಸೇವಿಸುವಂತಿಲ್ಲ. ಪೊಟ್ಟಣಗಳನ್ನು ಪಾರ್ಸಲ್ ನೀಡಬೇಕು ಎಂದರು.

ಕೊರೊನಾ ಸೈನಿಕರು: ಜಿಲ್ಲೆಯಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ತಂಡಗಳನ್ನು ರೂಪಿಸಲಾಗಿದೆ. ಅಗತ್ಯ ಸೇವೆಗಳನ್ನು ಮನೆ-ಮನೆಗೆ ತಲುಪಿಸಲು ಕೊರೊನಾ ಸೈನಿಕರನ್ನು ಜಿಲ್ಲಾಡಳಿತ ಒದಗಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.

ಮನೆಯಲ್ಲಿ ನಿಗಾದಲ್ಲಿ ಇರುವವರು ರಸ್ತೆಗೆ ಬಂದರೆ ಎಫ್‍ಐಆರ್ ದಾಖಲಿಸಲಾಗುವುದು. ಕೊರೊನಾ ನಿಗ್ರಹಕ್ಕೆ ತಾಲ್ಲೂಕು ಹಾಗೂ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ಕ್ರಮವಹಿಸಲಾಗುವುದು ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಸಗಟು ದಿನಸಿ ಅಂಗಡಿಗಳನ್ನು ಗುರುತಿಸಲಾಗಿದೆ. ಮನೆಗಳಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸಲು ಮಾಲೀಕರು ಒಪ್ಪಿದ್ದಾರೆ. ಸ್ವಯಂ ಸೇವಕರ ಮೂಲಕ ಮನೆ ಮನೆಗೆ ದಿನಸಿ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ ಗೋಷ್ಠಿಯಲ್ಲಿ ಇದ್ದರು.

***

ಜಿಲ್ಲಾಸ್ಪತ್ರೆ ಇನ್ನು ಕೋವಿಡ್ ಆಸ್ಪತ್ರೆ
ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುವುದು. ತಾತ್ಕಾಲಿಕವಾಗಿ ಶ್ರೀದೇವಿ ಆಸ್ಪತ್ರೆಯ ಒಂದು ಭಾಗವನ್ನು ಜಿಲ್ಲಾ ಆಸ್ಪತ್ರೆಯಾಗಿ ಪರಿವರ್ತಿಸಿ, ಇಲ್ಲಿಗೆ ಜಿಲ್ಲಾಸ್ಪತ್ರೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೊರೊನಾ ಶಂಕೆ ಹಿನ್ನೆಲೆಯಲ್ಲಿ 468 ಜನರ ಮೇಲೆ ನಿಗಾವಹಿಸಲಾಗಿದೆ. ಶಂಕಿತರ ಎಡಗೈ ಮೇಲೆ ಸ್ಟಾಂಪಿಂಗ್ ಮಾಡಲಾಗಿದೆ. ಅಂತಹ ವ್ಯಕ್ತಿಗಳು ರಸ್ತೆಯಲ್ಲಿ ಕಂಡು ಬಂದಲ್ಲಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಬಹುದು ಎಂದು ಹೇಳಿದರು.

ಕೂಲಿ ಕಾರ್ಮಿಕರು, ನಿರ್ಗತಿಕರು ಹಾಗೂ ಕಟ್ಟಡ ಕಾರ್ಮಿಕರಿಗೆ ಗುತ್ತಿಗೆದಾರರಿಂದಲೇ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT