ಶನಿವಾರ, ಡಿಸೆಂಬರ್ 7, 2019
25 °C
ಕೊಡಿಗೇನಹಳ್ಳಿ ಸುತ್ತಮುತ್ತ ಮೂರು ತಿಂಗಳಿಂದ ಮಳೆರಾಯನ ಸುಳಿವಿಲ್ಲ

ತುಮಕೂರು ಮಳೆ ಕೊರತೆ; ಕೈಗೆಟುಕದ ಬೆಳೆ

ಗಂಗಾಧರ್ ವಿ. ರೆಡ್ಡಿಹಳ್ಳಿ Updated:

ಅಕ್ಷರ ಗಾತ್ರ : | |

Deccan Herald

ಕೊಡಿಗೇನಹಳ್ಳಿ: ಮೇ ತಿಂಗಳಲ್ಲಿ ಬಿದ್ದ ಮಳೆಗೆ ಖುಷಿಗೊಂಡ ರೈತ ಭೂಮಿಯನ್ನು ಅಚ್ಚುಕಟ್ಟು ಮಾಡಿಕೊಂಡು ಬಿತ್ತನೆ ಮಾಡಲು ಮುಂಗಾರು ಮಳೆಗಾಗಿ ಕಾದು ಕುಳಿತಿದ್ದಾನೆ. ನಾಳೆ, ನಾಡಿದ್ದು ಬರಬಹುದು ಎಂದು ಮೂರು ತಿಂಗಳು ಆಕಾಶದತ್ತ ನೋಡಿದ್ದಾಯಿತು. ಇನ್ನು ಕೆಲವು ರೈತರು ಬಿತ್ತನೆ ಮಾಡಿರುವ ಬೆಳೆಯ ಪೈರು ಒಣಗುತ್ತಿರುವುದಕ್ಕೆ ಚಿಂತಾಕ್ರಾಂತರಾಗಿದ್ದಾರೆ.

ಮಧುಗಿರಿ ತಾಲ್ಲೂಕು ಬಯಲು ಪ್ರದೇಶ. ಈ ಭಾಗದ ರೈತರು ಮಳೆಯನ್ನೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ಯಾವುದೇ ಶಾಶ್ವತ ನೀರಾವರಿ ಯೋಜನೆಯ ಆಸರೆಯಿಲ್ಲ. ಆದರೆ, ಮಳೆ ಪ್ರಮಾಣ ಮಾತ್ರ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಭೂಮಿಗೆ ಬಿದ್ದ ಅಲ್ಪ ಸ್ವಲ್ಪ ಮಳೆಯಲ್ಲೇ ರೈತರು ಬಿತ್ತನೆ ಮಾಡಿದ್ದರು. ಆದರೆ, ಅದೂ ಕೈಗೆ ಬಾರದೆ ಹಾಕಿದ ಬಂಡವಾಳ ವಾಪಾಸ್‌ ಬರದ ಸ್ಥಿತಿ ನಿರ್ಮಾಣವಾಗಿದೆ.

‘ತಾಲ್ಲೂಕಿನಲ್ಲಿ ಬಹುತೇಕರು ಜೂನ್ ತಿಂಗಳ ಆರಂಭದಲ್ಲಿ ಶೇಂಗಾ, ಮೆಕ್ಕೆಜೋಳ, ರಾಗಿ, ಅವರೆ, ಅಲಸಂದೆ ಮತ್ತು ತೊಗರಿ ಬೆಳೆಗಳನ್ನು ಬಿತ್ತುತ್ತಾರೆ. ಈ ಬಾರಿ ಅದು ಸಾಧ್ಯವಾಗಿಲ್ಲ. ಮಳೆ ಕೊರತೆ ಇದೇ ರೀತಿ ಮುಂದುವರಿದರೆ ಈ ಭಾಗದಲ್ಲಿನ ಜನರು ಜಾನುವಾರುಗಳ ಮೇವಿಗಾಗಿ ಮತ್ತು ಕುಡಿಯುವ ನೀರಿಗಾಗಿ ಪರದಾಡಬೇಕಾಗುತ್ತದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಬೇಕು’ ಎನ್ನುತ್ತಾರೆ ಶ್ರಾವಂಡನಹಳ್ಳಿ ಗ್ರಾಮದ ರೈತ ನ್ಯಾತಪ್ಪ.

ಬಿತ್ತನೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ

ತಾಲ್ಲೂಕಿನ ಮಿಡಿಗೇಶಿ, ಬಡವನಹಳ್ಳಿ, ಐಡಿಹಳ್ಳಿ ಹೋಬಳಿಗಳಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ಆ ಭಾಗದಲ್ಲಿ ಬಿತ್ತನೆ ನಡೆದಿದೆ. ಕೊಡಿಗೇನಹಳ್ಳಿ, ಪುರವರ ಮತ್ತು ಕಸಬಾ ಹೋಬಳಿಗಳಲ್ಲಿ ಅತಿ ಕಡಿಮೆ ಮಳೆಯಿಂದ ಬಿತ್ತನೆ ಕಾರ್ಯ ಕೂಡ ಸರಿಯಾಗಿ ನಡೆದಿಲ್ಲ. ತಾಲ್ಲೂಕಿನಲ್ಲಿ 38000 ಸಾವಿರ ಹೆಕ್ಟೇರ್ ಪ್ರದೇಶ ಬಿತ್ತನೆ ಆಗುವ ಅಂದಾಜಿತ್ತು. ಆದರೆ 19,574 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಈಗ ಮಳೆಯಿಲ್ಲದೆ ಅದು ಕೂಡ ಒಣಗುತ್ತಿದೆ.
– ಭಾಗ್ಯಮ್ಮ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ

ಹಲವು ವರ್ಷಗಳಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗದೆ ಇರುವುದರಿಂದ ಕೆಲ ರೈತರು ಉದ್ಯೋಗ ಅರಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರವೇ ಪರಿಹಾರ ನೀಡಿದರೆ ಅನುಕೂಲವಾಗುತ್ತದೆ
ಎಂ.ಡಿ. ಚಿಕ್ಕಣ್ ಮುತ್ತರಾಯನಹಳ್ಳಿ, ತಾಲ್ಲೂಕು ರೈತ ಸಂಘದ ಗೌರವ ಅಧ್ಯಕ್ಷ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು