ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕೈತಪ್ಪಿತೇ ವೈದ್ಯಕೀಯ ಶಿಕ್ಷಣ ಕಾಲೇಜು?

ರಾಜ್ಯ ಸರ್ಕಾರದ ನಿರಾಸಕ್ತಿಯ ಫಲ; ಸರ್ಕಾರದ ಮೇಲೆ ಒತ್ತಡ ಹೇರಲು ವಿಫಲ
Last Updated 30 ನವೆಂಬರ್ 2020, 3:01 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಗೆ 2011–12ನೇ ಸಾಲಿನಲ್ಲಿ ಮಂಜೂರಾಗಿದ್ದ ಸರ್ಕಾರಿ ವೈದ್ಯಕೀಯ ಶಿಕ್ಷಣ ಕಾಲೇಜು ಕಲ್ಪತರು ನಗರಿಯ ಕೈ ತಪ್ಪಿದೆಯೇ? ಹೀಗೊಂದು ಚರ್ಚೆ ಪ್ರಜ್ಞಾವಂತರು, ಅಭಿವೃದ್ಧಿಯ ತುಡಿತವುಳ್ಳವರು ಹಾಗೂ ವಿದ್ಯಾರ್ಥಿ ಸಮೂಹದಲ್ಲಿ ಮೂಡಿದೆ.

ಈ ಎಂಟು ವರ್ಷಗಳಿಂದಲೂ ಇಂದಲ್ಲಾ ನಾಳೆ ಕಾಲೇಜು ನಿರ್ಮಾಣ ಆಗುತ್ತದೆ ಎನ್ನುವ ಭರವಸೆ ಇತ್ತು. ಯೋಜನೆ ನನೆಗುದಿಗೆ ಬಿದ್ದಿದೆ ಎನಿಸಿತ್ತು. ಆದರೆ ಮಂಜೂರಾಗಿದ್ದ ಯೋಜನೆಗೆ ಮತ್ತೆ ಹೊಸದಾಗಿ ಪ್ರಸ್ತಾಪ ಸಲ್ಲಿಸಬೇಕು ಎನ್ನುವ ವಿಚಾರ ದಿಶಾ ಸಮಿತಿ ಸಭೆಯಲ್ಲಿ ವ್ಯಕ್ತವಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಮೂಲಗಳು ಸಹಸರ್ಕಾರಿ ವೈದ್ಯಕೀಯ ಶಿಕ್ಷಣ ಕಾಲೇಜು ಜಿಲ್ಲೆಯ ಕೈ ತಪ್ಪಿರುವುದನ್ನು ಖಚಿತಪಡಿಸುತ್ತವೆ.

2012ರಲ್ಲಿ ರಾಜ್ಯ ಸರ್ಕಾರ ಕಾಲೇಜು ಮಂಜೂರು ಮಾಡಿತ್ತು. 2013ರಲ್ಲಿ ಸರ್ಕಾರ ಬದಲಾವಣೆಯಾಯಿತು. ನಂತರದ ದಿನಗಳಲ್ಲಿ ಕಾಲೇಜಿಗೆ ₹ 150 ಕೋಟಿ ಬಿಡುಗಡೆ ಮಾಡಲು ಆದೇಶ ಸಹ ನೀಡಿತು. ಆದರೆ ಅದು ಆದೇಶವಾಗಿಯೇ ಉಳಿಯಿತೇ ಹೊರತು ಹಣ ಮಾತ್ರ ಬಿಡುಗಡೆ ಆಗಲಿಲ್ಲ. ಎಬಿವಿಪಿ ಸೇರಿದಂತೆ ಕೆಲವು ಸಂಘಟನೆಗಳು ಕಾಲೇಜು ಆರಂಭಿಸುವಂತೆ ಈ ಹಿಂದೆ ಪ್ರತಿಭಟನೆ ಸಹ ನಡೆಸಿದ್ದವು.

2016ರಲ್ಲಿ ಚಾಮರಾಜನಗರ, ಕೊಡಗು ಮತ್ತು ಕಾರವಾರದಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಸರ್ಕಾರ ಹಸಿರು ನಿಶಾನೆ ತೋರಿತು. ಆದರೆ ತುಮಕೂರು ಜಿಲ್ಲೆಯ ವಿಚಾರದಲ್ಲಿ ಮಾತ್ರ ಮೌನವಾಯಿತು. ಪ್ರತಿ ವರ್ಷದ ರಾಜ್ಯ ಬಜೆಟ್ ಮಂಡನೆ ವೇಳೆ ಕಾಲೇಜು ನಿರ್ಮಾಣಕ್ಕೆ ಹಣ ಮಂಜೂರಾಗುತ್ತದೆ ಎನ್ನುವ ಆಶಾವಾದವನ್ನು ಜಿಲ್ಲೆಯ ಜನರು ಹೊಂದುತ್ತಿದ್ದರು. ತುಮಕೂರಿಗಿಂತಲೂ ಭೌಗೋಳಿಕವಾಗಿ ಮತ್ತು ಜನಸಂಖ್ಯೆಯಲ್ಲಿ ಸಣ್ಣ ಜಿಲ್ಲೆಗಳು ಎನಿಸಿರುವ ಕಡೆಗಳಲ್ಲಿಯೂ ಕಾಲೇಜು ನಿರ್ಮಾಣ ಆರಂಭವಾದರೂ ಜಿಲ್ಲೆಗೆ ಮಾತ್ರ ವೈದ್ಯಕೀಯ ಶಿಕ್ಷಣ ಕಾಲೇಜು ಭಾಗ್ಯ ಒಲಿಯಲೇ ಇಲ್ಲ.

ಹಣವಿಲ್ಲದ್ದೇ ಕಾರಣವೇ?: ಕಾಲೇಜಿಗೆ ಸರ್ಕಾರದ ಇಂದಿನ ಮಾರ್ಗಸೂಚಿ‌ಪ್ರಕಾರ ಗರಿಷ್ಠ 15 ಎಕರೆ ಸ್ಥಳಾವಕಾಶ ಇರಬೇಕು. ನಗರಕ್ಕೆ ಸಮೀಪದ ಅಮಲಾಪುರದ ಕೇಂದ್ರೀಯ ವಿದ್ಯಾಲಯದ ಬಳಿ 30 ಎಕರೆ ಸರ್ಕಾರಿ ಜಮೀನನ್ನು ಗುರುತಿಸಲಾಗಿತ್ತು. ಉದ್ದೇಶಿತ ಯೋಜನೆಗೆ ಜಮೀನು ಮಂಜೂರು ಮಾಡುವಂತೆ ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಹಾಗೂ ಸಂಸದ ಜಿ.ಎಸ್‌ ಬಸವರಾಜ್‌, ಜಿಲ್ಲಾಧಿಕಾರಿ ಅವರಿಗೆ ಪತ್ರ ಸಹ ಬರೆದಿದ್ದರು. ಜಮೀನಿನ ನಕ್ಷೆ ತಯಾರಿಸಿ ಪ್ರಸ್ತಾವ ಸಲ್ಲಿಸುವಂತೆ 2019ರ ಸೆಪ್ಟೆಂಬರ್‌ನಲ್ಲಿ ಜಿಲ್ಲಾಧಿಕಾರಿ ಅವರು ತಹಶೀಲ್ದಾರ್‌ಗೆ ಪತ್ರ ಬರೆದಿದ್ದರು. ಇದರ ಜತೆಗೆ ಜಿಲ್ಲಾ ಆಸ್ಪತ್ರೆ ಸೇರಿದಂತೆ ಇಡೀ ಆವರಣ ಒಟ್ಟು 24 ಎಕರೆ ಇದೆ. ಹೀಗೆ ಕಾಲೇಜಿಗೆ ಅಗತ್ಯವಿರುವ ಜಮೀನು ಸಹ ಲಭ್ಯವಿದೆ.

ಸರ್ಕಾರ ಯಾವ ಕಾರಣದಿಂದ ಈ ಯೋಜನೆಯನ್ನು ಕೈ ಬಿಟ್ಟಿತ್ತು ಎಂದು ಕೆದಕಿದರೆ ‘ಸರ್ಕಾರದ ಬಳಿ ಹಣವಿಲ್ಲ’ ಈ ಕಾರಣದಿಂದಲೇ ಕಾಲೇಜು ನಿರ್ಮಾಣ ಕೈ ಬಿಡಲಾಗಿದೆ ಎನ್ನಲಾಗುತ್ತಿದೆ.

ಇತ್ತೀಚೆಗೆ ನಡೆದ ದಿಶಾ ಸಮಿತಿ ಸಭೆಯಲ್ಲಿಯೂ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮತ್ತು ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ವೈದ್ಯಕೀಯ ಶಿಕ್ಷಣ ಕಾಲೇಜು ಮಂಜೂರು ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು.

ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ತುಮಕೂರು ಸಹ ಒಂದು. ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಿನಂತಿದೆ. ಶೈಕ್ಷಣಿಕ ವಿಚಾರದಲ್ಲಿಯೂ ತುಮಕೂರು ನಗರ ರಾಜ್ಯದಲ್ಲಿಯೇ ಪ್ರಮುಖವಾಗಿ ಗುರುತಿಸಿಕೊಂಡಿದೆ. ನಾಡಿನ ಬೇರೆ ಬೇರೆ ಭಾಗಗಳ ಸಾವಿರಾರು ವಿದ್ಯಾರ್ಥಿಗಳು ನಗರಕ್ಕೆ ಬಂದು ಪದವಿ ಪೂರ್ವ ಶಿಕ್ಷಣವನ್ನು ಕಲಿಯುತ್ತಿದ್ದಾರೆ. ಹೀಗೆ ಶೈಕ್ಷಣಿಕವಾಗಿ ವಿಶಾಲವಾಗಿ ಬೆಳೆಯುತ್ತಿರುವ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮುಕುಟಮಣಿಯಾಗುತ್ತಿತ್ತು. ಅಲ್ಲದೆ ಶೈಕ್ಷಣಿಕವಾಗಿ ಬೆಳವಣಿಗೆಗೆ ಮತ್ತಷ್ಟು ಅವಕಾಶಗಳು ಸಹ ಕೂಡಿಬರುತ್ತಿತ್ತು.

ವೈದ್ಯಕೀಯ ಶಿಕ್ಷಣ ಬೋಧಕ ಆಸ್ಪತ್ರೆ ನಿರ್ಮಾಣದಿಂದ ಪ್ರತ್ಯಕ್ಷ ಮತ್ತು ‍ಪರೋಕ್ಷವಾಗಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಅನುಕೂಲ ಆಗುತ್ತಿತ್ತು. ವೈದ್ಯಕೀಯ ಸೇವೆಗಳು ಜನರಿಗೆ ಹೆಚ್ಚಿನದಾಗಿ ದೊರೆಯುತ್ತಿದ್ದವು.

ಜನಪ್ರತಿನಿಧಿಗಳ ನಿರಾಸಕ್ತಿಯೇ?

ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿಗೆ ಜಿಲ್ಲೆಯ ಮತದಾರರು ಈ ಹಿಂದಿನಿಂದಲೂ ಬಲವನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ಐದು ಮಂದಿ ಬಿಜೆಪಿ ಶಾಸಕರು, ಒಬ್ಬರು ವಿಧಾನ ಪರಿಷತ್ ಸದಸ್ಯರು, ಇಬ್ಬರು ಬಿಜೆಪಿ ಸಂಸದರು ಇದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಂಪುಟದಲ್ಲಿ ಪ್ರಭಾವಿ ಆಗಿದ್ದಾರೆ. ಹೀಗಿದ್ದರೂ ವೈದ್ಯಕೀಯ ಶಿಕ್ಷಣ ಕಾಲೇಜು ಆರಂಭ ಮಾತ್ರ ಸಾಧ್ಯವೇ ಆಗಿಲ್ಲ. ಕಾಲೇಜಿನ ವಿಚಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ನಿರಾಸಕ್ತಿ ತಾಳಿದ್ದಾರೆಯೇ ಎನ್ನುವ ಅಭಿಪ್ರಾಯ ಪ್ರಜ್ಞಾವಂತ ವಲಯದಲ್ಲಿ ಮೂಡಿದೆ.

ಕಾಲೇಜಿನಿಂದ ಅನುಕೂಲಗಳು

-ರೋಗಿಗಳಿಗೆ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳು ದೊರೆಯುತ್ತವೆ.

-ಜಿಲ್ಲೆಯ ಮತ್ತು ಆಸುಪಾಸಿನ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

-ಈಗ ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿಬ್ಬಂದಿಗಿಂತಲೂ ನಾಲ್ಕು ಪಟ್ಟು ಹೆಚ್ಚು ಸಿಬ್ಬಂದಿ ಸೇವೆಗೆ ದೊರೆಯುವರು. ಇದರಿಂದ ಗುಣಮಟ್ಟದ ಸೇವೆ ಸಾಧ್ಯ.

-ಗಂಭೀರ ವೈದ್ಯಕೀಯ ಪ್ರಕರಣಗಳು ಬೆಂಗಳೂರಿಗೆ ಶಿಫಾರಸಾಗುವುದು ತಪ್ಪಲಿದೆ.

-ಪ್ರಾಥಮಿಕ ಮತ್ತು ತಾಲ್ಲೂಕು ಆರೋಗ್ಯ ಕೇಂದ್ರಗಳಿಗೂ ವೈದ್ಯಕೀಯ ವಿದ್ಯಾರ್ಥಿಗಳು ಅಧ್ಯಯನದ ಹಿನ್ನೆಲೆಯಲ್ಲಿ ಭೇಟಿ ನೀಡಬೇಕಾಗುತ್ತದೆ. ಅಲ್ಲಿಗೂ ಸೇವೆಗಳು ವಿಸ್ತರಣೆ ಆಗುತ್ತದೆ.

ಪಿಜಿ ಕೇಂದ್ರ ಆರಂಭಕ್ಕೆ ಸಚಿವರ ಚಿಂತನೆ

ವೈದ್ಯಕೀಯ ಕಾಲೇಜು ತಪ್ಪಿದ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣದ ಸ್ನಾತಕೋತ್ತರ ಪದವಿ ಕಾಲೇಜು ಆರಂಭಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿ ಚಿಂತಿಸಿದ್ದಾರೆ ಎನ್ನುತ್ತವೆ ಆರೋಗ್ಯ ಇಲಾಖೆ ಮೂಲಗಳು. ಸ್ನಾತಕೋತ್ತರ ಪದವಿ ಕಾಲೇಜು ಆರಂಭಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಿಲ್ಲ. ಬೋಧನ ಕೊಠಡಿ ಸೇರಿದಂತೆ ಕೆಲವು ಸೌಲಭ್ಯಗಳು ಮಾತ್ರ ಅಗತ್ಯ ಎನ್ನುವುದು ಅವರ ಆಲೋಚನೆಗೆ ಕಾರಣ ಎನ್ನಲಾಗಿದೆ.

ನುರಿತ ಮತ್ತು ತಜ್ಞ ವೈದ್ಯರು ಈ ಪಿಜಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವುದರಿಂದ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಸಹ ನೀಡಬಹುದು ಎನ್ನುವುದು ಸಚಿವರ ಆಲೋಚನೆ ಎಂದು ಆರೋಗ್ಯ ಇಲಾಖೆಯಲ್ಲಿರುವ ಸಚಿವರ ಆಪ್ತರು ತಿಳಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT