ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ತುಮಕೂರು ಸ್ತಬ್ಧ

ಭಾನುವಾರದ ಲಾಕ್‌ಡೌನ್‌ಗೆ ಹಲವೆಡೆ ನಾಗರಿಕರಿಂದ ಉತ್ತಮ ಸ್ಪಂದನೆ
Last Updated 24 ಮೇ 2020, 8:54 IST
ಅಕ್ಷರ ಗಾತ್ರ

ತುಮಕೂರು: ಭಾನುವಾರ ಆದೇಶಿಸಿದ್ದ ಲಾಕ್‌ಡೌನ್‌ಗೆ ತುಮಕೂರು ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವ್ಯಾಪಾರಸ್ಥರು, ನಾಗರಿಕರು ತಮ್ಮ ಅಂಗಡಿ, ವ್ಯಾಪಾರ, ವಹಿವಾಟು, ಸಂಚಾರ ನಿಲ್ಲಿಸಿ ಲಾಕ್‌ಡೌನ್‌ಗೆ ಸ್ಪಂದಿಸಿದರು.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರದ ಆದೇಶದ ಅನ್ವಯ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಭಾನುವಾರ ಜಿಲ್ಲೆಯಾದ್ಯಂತ ಸಂಪೂರ್ಣ ನಿಷೇಧಾಜ್ಞೆ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಜನಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.

ಅಗತ್ಯ ಸೇವೆಗಳಾದ ಆಸ್ಪತ್ರೆ, ಹಾಲು, ಹಣ್ಣು, ತರಕಾರಿ, ಮೆಡಿಕಲ್‌ ಹೊರತು ಪಡಿಸಿ ಎಲ್ಲಾ ರೀತಿಯ ಅಂಗಡಿ, ಮಳಿಗೆಗಳು ಮುಚ್ಚಿದ್ದವು. ಚಿತ್ರಮಂದಿರ, ಮದ್ಯದಂಗಡಿ, ಕ್ಷೌರಿಕ ಅಂಗಡಿ, ಪ್ಲಾಸ್ಟಿಕ್‌, ಬಟ್ಟೆ, ಕಬ್ಬಿಣ, ಕಿರಾಣಿ, ಜ್ಯೂಸ್‌, ಬೇಕರಿ ಮಳಿಗೆಗಳು ಸಂಪೂರ್ಣ ಮುಚ್ಚಿದ್ದವು. ಸಾರಿಗೆ ಬಸ್‌ಗಳ ಸೇವೆಯನ್ನು ಕೂಡ ಸ್ಥಗಿತಗೊಳಿಸಲಾಗಿತ್ತು.

ಆಟೊ, ಟ್ಯಾಕ್ಸಿಗಳು ಕೂಡ ರಸ್ತೆಗಿಳಿಯಲಿಲ್ಲ. ನಗರದ ಬಿ.ಎಚ್‌.ರಸ್ತೆ, ಎಂ.ಜಿ.ರಸ್ತೆ, ಅಶೋಕ ರಸ್ತೆ, ಕುಣಿಗಲ್ ರಸ್ತೆ, ಶಿರಾ ರಸ್ತೆ, ಎಸ್‌.ಎಸ್.ಪುರಂ, ಚಿಕ್ಕಪೇಟೆ, ಮಂಡಿಪೇಟೆ, ಹೊರಪೇಟೆ, ಶೆಟ್ಟಿಹಳ್ಳಿ, ಉಪ್ಪಾರಹಳ್ಳಿ ಹೀಗೆ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಅಲ್ಲೊಂದು ಇಲ್ಲೊಂದು ವಾಹನಗಳು ಮಾತ್ರವೇ ಸಂಚರಿಸಿದವು.

ಕೆಲವು ಹೋಟೆಲ್‌, ಖಾನಾವಳಿಗಳನ್ನು ತೆರೆದ ಮಾಲೀಕರು ಪಾರ್ಸಲ್‌ ಕೊಟ್ಟರು. ಹಾಲು, ತರಕಾರಿ, ಔಷಧ ಅಂಗಡಿ, ಆಸ್ಪತ್ರೆಗಳನ್ನು ತೆರೆಯಲಾಗಿತ್ತು. ತುರ್ತು ಕಾರಣ ಮತ್ತು ವೈದ್ಯಕೀಯ ಕಾರಣಗಳಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಜನರು ಕೂಡ ಅನಗತ್ಯವಾಗಿ ಓಡಾಡದೆ ಮನೆಯಲ್ಲೇ ಉಳಿದರು.

ಮಾಂಸ ಖರೀದಿ ಜೋರು

ಲಾಕ್‌ಡೌನ್‌ ನಡುವೆಯೂ ಭಾನುವಾರ ಮಾಂಸ ಖರೀದಿಗೆ ಅವಕಾಶ ನೀಡಿದ್ದ ಕಾರಣ ಹಲವೆಡೆ ಚಿಕನ್‌, ಮಟನ್‌, ಮೊಟ್ಟೆ ಖರೀದಿಸಲು ಹೆಚ್ಚಿನ ಸಂಖ್ಯೆಯ ಗ್ರಾಹಕರು ನೆರೆದಿದ್ದರು. ಭಾನುವಾರವೂ ಆಗಿದ್ದರಿಂದ ಗ್ರಾಹಕರ ಸಂಖ್ಯೆ ಸ್ವಲ್ಪ ಹೆಚ್ಚಿತ್ತು. ಲಾಕ್‌ಡೌನ್‌ ಕಾರಣಕ್ಕಾಗಿ ಪ್ರತಿಯೊಬ್ಬರೂ ಮನೆಯಲ್ಲೇ ಇದ್ದ ಕಾರಣಕ್ಕಾಗಿ ಅನೇಕರು 1 ಕೆ.ಜಿ ಖರೀದಿಸುವ ಜಾಗದಲ್ಲಿ 2, 3 ಕೆ.ಜಿ ಮಾಂಸವನ್ನು ಖರೀದಿಸುತ್ತಿದ್ದ ದೃಶ್ಯ ನಗರದಲ್ಲಿ ಸಾಮಾನ್ಯವಾಗಿತ್ತು.

ನಿರೀಕ್ಷೆಗೂ ಮೀರಿ ಸ್ಪಂದನೆ

ಕಳೆದ 2 ತಿಂಗಳು ಮನೆಯಲ್ಲಿದ್ದು ತೊಂದರೆ ಅನುಭವಿಸಿದ್ದ ಎಲ್ಲಾ ವರ್ಗದ ಜನರು ಲಾಕ್‌ಡೌನ್‌ ಸಡಿಲಿಕೆ ಕೊಟ್ಟ ನಂತರ ಯಾವುದೇ ಸೋಂಕು, ಅನಾರೋಗ್ಯವನ್ನು ಲೆಕ್ಕಿಸದೇ ರಸ್ತೆಗಿಳಿದಿದ್ದರು. ಕಳೆದ 2 ವಾರಗಳಿಂದ ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಹಾಗಾಗಿ ಭಾನುವಾರದ ಲಾಕ್‌ಡೌನ್‌ಗೆ ಜನರು ಸ್ಪಂದಿಸುತ್ತಾರೋ ಇಲ್ಲವೋ ಎನ್ನುವ ಅನುಮಾನ ವ್ಯಕ್ತವಾಗಿತ್ತು. ಆದರೆ, ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT